ಉಡುಪಿ
Karnataka Rain: ಮುಂದಿನ 24 ಗಂಟೆಯಲ್ಲಿ ಉಡುಪಿ, ಬೆಂಗಳೂರು, ಬೀದರ್‌ನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
Karnataka Rain: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (weather report) ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಮಳೆ ಸಾಧ್ಯತೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು (Rain alert) ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ತುಮಕೂರಿನಲ್ಲೂ ಮಳೆಯ ಅಬ್ಬರ ಇರಲಿದೆ.
ಬೆಂಗಳೂರು ನಗರದಲ್ಲಿ ಭಾಗಶ: ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಳೆ ಪ್ರಮಾಣ ಹೀಗಿದೆ?
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಶನಿವಾರ ಮಳೆಯಾಗಿದೆ. ಬೀದರ್‌ನ ಔರಾದ್, ಕೋಲಾರದ ಚಿಂತಾಮಣಿ, ರಾಯಲ್ಪಾಡು ತಲಾ 4 ಸೆ.ಮೀ ಮಳೆ ಆಗಿದ್ದು, ಗೇರುಸೊಪ್ಪ, ಚಿಂಚೋಳಿ, ಮಂತಾಲ, ಮನ್ನಾಳಿ, ಸಿಂದಗಿ, ಸೈದಾಪುರದಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಬ್ರಹ್ಮಾವರ, ಬೀದರ್, ಹುಮನಾಬಾದ್, ಅಫಜಲಪುರ, ಸುಲೇಪೇಟೆ, ರಾಯಚೂರು, ಮಧುಗಿರಿ, ರಾಮನಗರ, ವೈ.ಎನ್. ಹೊಸಕೋಟೆ, ಶಿರಾ, ಶೃಂಗೇರಿ, ಕುಡುತಿನಿ, ಹರದನಹಳ್ಳಿಯಲ್ಲಿ ತಲಾ 1 ಸೆ.ಮೀ ಮಳೆಯಾಗಿದೆ. ಇನ್ನು ಪಣಂಬೂರು ಹಾಗೂ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ 14.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿಯಾಗಿದ್ದ. ಉಡುಪಿಯಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಶುರುವಾಗಿದ್ದರಿಂದ ಜನರ ಕೆಲಸ ಕಾರ್ಯಗಳಿಗೆ ಕಿರಿಕಿರಿ ಉಂಟಾಗಿತ್ತು. ಇನ್ನು ಕಳೆದ ಒಂದು ವಾರದಿಂದ ತಾಪಮಾನ 35 ರಿಂದ 37 ಡಿಗ್ರಿವರೆಗೂ ಹೆಚ್ಚಾಗಿತ್ತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಕರಾವಳಿ ಜನರಿಗೆ ತುಂತುರು ಮಳೆಯಿಂದ ವಾತಾವರಣ ತಂಪಾಗಿತ್ತು. ಮುಂದಿನ ಒಂದು ವಾರಗಳ ಕಾಲ ಸಾಧಾರಣ ಮಳೆ ಆಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಆಲಿಕಲ್ಲು ಮಳೆಗೆ ಕಲ್ಲಂಗಡಿ ಬೆಳೆ ನಾಶ
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಮಳೆ ಅವಾಂತರದಿಂದ ಲಕ್ಷಾಂತರ ರೂಪಾಯಿ ಕಲ್ಲಂಗಡಿ ಬೆಳೆ ನಾಶವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಲ್ಲಪೂರ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಶರಣಗೌಡ ಪಾಟೀಲ ಎಂಬುವವರ 3.5 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಹಾಳಾಗಿದೆ. 5 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು, 2 ದಿನದಲ್ಲಿ ಕಟಾವು ಮಾಡಲು ಬಂದಿದ್ದ ಕಲ್ಲಂಗಡಿ ಹಣ್ಣುಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ರಸ್ತೆ ಕಾಮಗಾರಿ
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಮಳೆ ನೀರು ರೈತರ ಹೊಲಕ್ಕೆ ನುಗ್ಗಿದೆ. ಪರಿಣಾಮ ಹತ್ತಾರು ಎಕರೆಗಳಷ್ಟು ಜಮೀನಿನಲ್ಲಿ ಬೆಳೆಸಿದ್ದ ಜೋಳ ಮುಳುಗಿ ನಷ್ಟವಾಗಿದೆ. ಬೀದರ್ ತಾಲೂಕಿನ ಮರಕಲ್ ಗ್ರಾಮಸ್ಥರಿಂದ ಗುತ್ತಿಗೆ ದಾರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಟಾವಿಗೆ ಬಂದಿದ್ದ ಜೋಳ ನೀರು ಪಾಲಾಗಿದೆ ಎಂದು ರಸ್ತೆ ತಡೆದು ಮರಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Bengaluru Auto Bandh: ಬೈಕ್ ಟ್ಯಾಕ್ಸಿಗೆ ವಿರೋಧ; ಇಂದು ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ
ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದವರು ರೈತರ ಬೆಳೆ ಹಾನಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಸ್ಥಳೀಯ ಶಾಸಕ ರಹೀಂಖಾನ್ ಭೇಟಿ ನೀಡಿ, ಸೂಕ್ತ ಪರಿಹಾರ ಕೊಡಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Death News : ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ನಿಧನ
ಜ್ಞಾನಪೀಠ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಆಪ್ತ ಸಹಾಯಕರಾಗಿದ್ದು, ಅವರ ಕೃತಿಗಳ ಕೃತಿಸ್ವಾಮ್ಯ ಹೊಂದಿದ್ದ ಮಾಲಿನಿ ಮಲ್ಯ ಅವರು ನಿಧನರಾಗಿದ್ದಾರೆ (Death News).
ಉಡುಪಿ: ಜ್ಞಾನಪೀಠ ವಿಜೇತ ಸಾಹಿತಿ ಕೋಟ ಶಿವರಾಮ ಕಾರಂತರ ಕೊನೆಗಾಲದವರೆಗೂ ಆಪ್ತ ಸಹಾಯಕಿಯಾಗಿದ್ದ, ತಾನೇ ಸ್ವತಃ ಕಾದಂಬರಿಗಾರ್ತಿಯಾಗಿದ್ದ ಮಾಲಿನಿ ಮಲ್ಯ ನಿಧನರಾಗಿದ್ದಾರೆ (Death News). ಅವರಿಗೆ 72 ವರ್ಷವಾಗಿತ್ತು.
ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಅವರು ದೀರ್ಘ ಕಾಲದ ಅಸೌಖ್ಯದ ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಕೆಲವು ಕಾಲದಿಂದ ಪಾರ್ಕಿನ್ಸನ್ ರೋಗ ದಿಂದ ಬಳಲುತ್ತಿದ್ದಾರೆ. ಸಾಲಿಗ್ರಾಮದಲ್ಲಿದ್ದ ಮಾಲಿನಿ ಮಲ್ಯ ಅವರನ್ನು ಬಂಧುಗಳು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.
ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಮಾಲಿನಿ ಮಲ್ಯ ಅವರು ಶಿವರಾಮ ಕಾರಂತರನ್ನು ಕೊನೆಗಾಲದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಕಾರಂತರ ಆರೋಗ್ಯದಿಂದ ಹಿಡಿದು ಅವರ ಎಲ್ಲ ಕೃತಿಗಳ ವಿಚಾರದಲ್ಲೂ ಸಾಕಷ್ಟು ಜಾಗೃತಿಯನ್ನು ಹೊಂದಿದ್ದರು ಮಾಲಿನಿ ಮಲ್ಯ.
ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ವರ್ಷವೂ ಕಾರಂತ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದ ಕೀರ್ತಿ ಮಾಲಿನಿ ಮಲ್ಯ ಅವರಿಗೆ ಸಲ್ಲುತ್ತದೆ. ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಅವರು ಕೊಡುಗೆ ನೀಡಿದ್ದಾರೆ.
ಮೂಲತಃ ಉಡುಪಿಯವರಾದ ಸ್ವತಃ ಕಾದಂಬರಿಗಾರ್ತಿಯಾಗಿರುವ ಮಾಲಿನಿ ಮಲ್ಯ ಅವರು ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ) ಬರೆದಿದ್ದಾರೆ.
ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), , ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲಪ್ರಪಂಚ-3’ ಅವರು ರಚಿಸಿದ ಕೃತಿಗಳು.
ಮಾಲಿನಿ ಮಲ್ಯ ಅವರಿಗೆ ಬೆಂಗಳೂರಿನ ಶಾಶ್ವತಿ ಸಂಸ್ಥೆ ’ಸದೋದಿತ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.
ಶಿವರಾಮ ಕಾರಂತರು ತಮ್ಮ ಕೃತಿಗಳು ಮತ್ತು ಬ್ಯಾಲೆ ಮತ್ತಿತರ ಪ್ರದರ್ಶನ ಕಲೆಗಳ ಹಕ್ಕುಸ್ವಾಮ್ಯವನ್ನು ಮಾಲಿನಿ ಮಲ್ಯ ಅವರಿಗೆ ನೀಡಿದ್ದರು. ಕಾರಂತರ ನಿಧನಾನಂತರ ಅವರ ಕೃತಿಗಳಿಗೆ ಸಂಬಂಧಿಸಿ ಎದುರಾದ ಎಲ್ಲ ಕಾನೂನು ಸಮರಗಳನ್ನು ಮಾಲಿನಿ ಮಲ್ಯ ಅವರೇ ಎದುರಿಸಿದ್ದಾರೆ.
ಇದನ್ನೂ ಓದಿ : Death News: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಅನುಯಾಯಿ ಕಲ್ಲೂರು ನಾರಾಯಣಪ್ಪ ಗೌಡ ನಿಧನ
ಉಡುಪಿ
Accident News: ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; 30 ಮಕ್ಕಳು ಅಪಾಯದಿಂದ ಪಾರು
Accident News: ಬಳ್ಳಾರಿಯಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ 30 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಬಳ್ಳಾರಿ/ ಉಡುಪಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ತೆಕ್ಕಲಕೋಟೆ ನಡುವೆ ಶಾಲಾ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ವಾಹನ ಹೊತ್ತಿ (Accident News) ಉರಿದಿದೆ. ಸಿರುಗುಪ್ಪ ಪಟ್ಟಣದ ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದರು.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿ, ಕೂಡಲೇ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಪರೀಕ್ಷೆ ಬರೆದು ಮನೆಗೆ ವಾಪಸ್ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಬಳಿಕ ಮಕ್ಕಳನ್ನು ಬೇರೆ ವಾಹನದಲ್ಲಿ ರವಾನೆ ಮಾಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಸರಣಿ ಅಪಘಾತದಲ್ಲಿ ಬೈಕ್ ಸವಾರ ಮೃತ್ಯು
ಉಡುಪಿಯ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕುಂಭಾಶಿ ಪಾಕಶಾಲಾ ಹೋಟೆಲ್ ಸಮೀಪ ಹೋಂಡಾ ಡಿಯೋ ದ್ವಿಚಕ್ರ ವಾಹನ, ಹ್ಯುಂಡೈ ಗ್ಯಾಂಡ್ ಐ10 ಕಾರು ಹಾಗೂ ಬಸ್‌ನ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ಸಾವಿಗೀಡಾಗಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ಕೊರವಡಿ ಮಾಣಿಮನೆ ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ (28) ಹಾಗೂ ವಿಶ್ಲೇಶ್ ಪೂಜಾರಿ (27) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಕೂಟರ್ ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಜಿಗಣಿ ಎಪಿಸಿ ವೃತ್ತದಲ್ಲಿ ಸ್ಟಿಕ್ಕರ್ ಡಿಸೈನ್ ಅಂಗಡಿ ಹಾಗೂ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿ ಆಗಿದೆ.
ಇದನ್ನೂ ಓದಿ: Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ
ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಪಕ್ಕದ ಅಂಗಡಿಗೂ ಬೆಂಕಿ ಆವರಿಸಿಕೊಂಡು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಗೋಪಿ ಎಂಬುವವರಿಗೆ ಸೇರಿದ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿಯಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟ
ಕೊಪ್ಪಳದ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಯಮನೂರಪ್ಪ ಎಂಬವರಿಗೆ ಸೇರಿದ ಟೀ ಸ್ಟಾಲ್‌ನಲ್ಲಿ ಗ್ಯಾಸ್ ಪೈಪ್ ಲೀಕೇಜ್ ಆಗಿದ್ದು, ಅದು ಸ್ಫೋಟಗೊಂಡಿದೆ. ಸಿಲೆಂಡರ್ ಸ್ಫೋಟಗೊಳ್ಳುತ್ತಲೇ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸಿಲೆಂಡರ್ ಸ್ಫೋಟಗೊಂಡಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Murder Case: ದೈವದ ಮುಂದೆ ಪಾಂಗಾಳ ಉದ್ಯಮಿ ಶರತ್ ಶೆಟ್ಟಿ ಕೊಲೆ ಕೇಸ್; ಪಾತಾಳದಲ್ಲಿ ಅಡಗಿದ್ದರೂ ಬಿಡಲ್ಲವೆಂದು ಅಭಯ
ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದ ಉದ್ಯಮಿ ಶರತ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಕುಟುಂಬಸ್ಥರು ದುಷ್ಕರ್ಮಿಗಳ ಪತ್ತೆಗೆ ದೈವದ ಮೊರೆ ಹೋಗಿದ್ದು, ಈ ವೇಳೆ ಕುಟುಂಬಿಕರ ನೋವಿಗೆ ಉತ್ತರಿಸಿದ ಪಂಜುರ್ಲಿ ದೈವವು ಪಾತಾಳದಲ್ಲಿ ಅಡಗಿದ್ದರೂ ಹುಡುಕುವುದಾಗಿ ಅಭಯ ನೀಡಿದೆ.
ಉಡುಪಿ: ಇಲ್ಲಿನ ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕುಟುಂಬಸ್ಥರು ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ವರ್ತೆ ಪಂಜುರ್ಲಿ ನೇಮೋತ್ಸವದಲ್ಲಿ ದೈವದ ಮೊರೆ ಹೋದಾಗ ಕುಟುಂಬಿಕರ ನೋವಿಗೆ ಉತ್ತರಿಸಿದ ದೈವ, ಕೊಲೆಗಡುಕರು ಪಾತಾಳದಲ್ಲಿ ಅಡಗಿದ್ದರೂ ಹುಡುಕುವುದಾಗಿ ಅಭಯ ನೀಡಿದೆ.
ಕಳೆದ ಫೆ.5ರ ಭಾನುವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ ಅವರ ಹತ್ಯೆ ಮಾಡಲಾಗಿತ್ತು. ಪಾಂಗಾಳದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಶರತ್ ಮೊಬೈಲ್ ಕರೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಬಂದಿದ್ದರು.
ಬಳಿಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಮೊದಲು ಅಪಘಾತವಾಗಿರಬಹುದು ಎಂದು ತಿಳಿದಿದ್ದ ಸ್ಥಳೀಯರಿಗೆ, ಜಾಗದಲ್ಲಿ ಪತ್ತೆಯಾದ ಚೂರಿ ನೋಡಿ ಕೊಲೆ ಶಂಕೆ ವ್ಯಕ್ತವಾಗಿತ್ತು. ಎದೆಯ ಭಾಗಕ್ಕೆ ದುಷ್ಕರ್ಮಿಗಳು ಬಲವಾಗಿ ಚೂರಿ ಹಾಕಿದ್ದ ಹಿನ್ನೆಲೆಯಲ್ಲಿ ಶರತ್ ಶೆಟ್ಟಿ ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಈಗಾಗಲೇ ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು, ಒಂದು ತಂಡ ಮಂಗಳೂರಿಗೆ ತೆರಳಿ ತನಿಖೆ ಆರಂಭಿಸಿದೆ. ಇನ್ನೊಂದು ತಂಡ ಶರತ್ ಶೆಟ್ಟಿಯ ಮೊಬೈಲ್ ಮತ್ತು ಹಲವು ಕಡೆ ಸಿಸಿ ಪೂಟೇಜ್ ಆಧರಿಸಿ ಮಾಹಿತಿ ಕಲೆಹಾಕುತ್ತಿದೆ. ಹಲವು ಜನರ ವಿಚಾರಣೆ ನಡೆಸಲಾಗಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸುತ್ತಿದ್ದ ಕಾರಣ ಹಾಗೂ ವ್ಯವಹಾರದ ತಗಾದೆ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದೇ ಎನ್ನುವ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Fraud Case: ಸೋಲಾರ್ ಪ್ಲಾಂಟ್ ಹೆಸರಲ್ಲಿ ಉದ್ಯಮಿಗೆ ಕೋಟಿ ಕೋಟಿ ಪಂಗನಾಮ; ವಂಚಕ ಸೆರೆ
ಸದ್ಯ ಪ್ರಕರಣ ಸಂಬಂಧ ಹಲವು ಆರೋಪಿಗಳ ಬಂಧನವಾಗಿದ್ದರೂ, ಪ್ರಮುಖ ಆರೋಪಿ ಪತ್ತೆ ಆಗಿಲ್ಲ. ಹೀಗಾಗಿ ಕುಟುಂಬಸ್ಥರು ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಈ ವೇಳೆ ದೈವ ಅಭಯ ನೀಡಿದ್ದು ಪೊಲೀಸರ ತನಿಖೆಗೆ ಬಲ ನೀಡುವುದಾಗಿ ಹೇಳಿದೆ. ಮಾತ್ರವಲ್ಲದೆ ಪಾತಾಳದಲ್ಲೇ ಅಡಗಿದ್ದರೂ ಹುಡುಕುವುದಾಗಿ ಹೇಳಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Drugs in Manipal : ಗಾಂಜಾ ಸೇವನೆ ಆರೋಪ; ಮಣಿಪಾಲದಲ್ಲಿ ಐವರು ವಿದ್ಯಾರ್ಥಿಗಳು ಅರೆಸ್ಟ್
ಕರಾವಳಿಯಲ್ಲಿ ಮಾದಕ ದ್ರವ್ಯಗಳ ಜಾಲ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿರುವುದಕ್ಕೆ ಇನ್ನೊಂದು ಸಾಕ್ಷ್ಯ ಸಿಕ್ಕಿದೆ. ಐವರು ವಿದ್ಯಾರ್ಥಿಗಳು ಗಾಂಜಾ ಸೇವಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಉಡುಪಿ: ಮಣಿಪಾಲದಲ್ಲಿ ಗಾಂಜಾ ಸೇವನೆಯ ಆರೋಪದ (Drugs in Manipal) ಮೇರೆಗೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಖಿಲ್ ಎಂ. (22), ತನ್ವೀರ್ ರೆಡ್ಡಿ (25), ಶರಣ್ ಶೆಟ್ಟಿ (22), ರಾಹುಲ್ ಸೀಮಾ (21), ತುಶಾರ್ ಜಿ. (21) ಸದ್ಯ ಪೊಲೀಸ್ ವಶದಲ್ಲಿರುವ ವಿದ್ಯಾರ್ಥಿಗಳು. ಇವರೆಲ್ಲರೂ ಮಣಿಪಾಲದ ಬೇರೆ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು.
ಮಣಿಪಾಲದ ಅಪಾರ್ಟ್‌ಮೆಂಟ್ ಒಂದರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪದ ಮೇಲೆ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ, ವಿದ್ಯಾರ್ಥಿಗಳು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿತ್ತು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮಂಗಳೂರು ಮತ್ತು ಮಣಿಪಾಲದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಿದ ಪೊಲೀಸರು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರೇ ಡ್ರಗ್ಸ್‌ಗೆ ದಾಸರಾಗಿದ್ದ ಆತಂಕಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದ್ದರು. ಯುವತಿಯರೂ ಸೇರಿದಂತೆ 20ಕ್ಕೂ ವೈದ್ಯ ವಿದ್ಯಾರ್ಥಿಗಳನ್ನು ಅಂದು ಬಂಧಿಸಲಾಗಿತ್ತು.
ಇದನ್ನೂ ಓದಿ : Manipal Drugs case: ಮಣಿಪಾಲದಲ್ಲಿ ಡ್ರಗ್ಸ್ ವಿರುದ್ಧ ಸಮರ; ಮಾಹೆ ವಿವಿಯ 42 ವಿದ್ಯಾರ್ಥಿಗಳು ಸಸ್ಪೆಂಡ್
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!