Site icon Vistara News

Rain News: ಸಿಡಿಲು ಬಡಿದು ಚಿತ್ರದುರ್ಗದಲ್ಲಿ ಮಹಿಳೆ ಸಾವು, 5ಕ್ಕೆ ಏರಿದ ಮಳೆ ಸಾವಿನ ಸಂಖ್ಯೆ

karnataka rain

ಚಿತ್ರದುರ್ಗ: ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಚೊಕ್ಕಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದರೊಂದಿಗೆ ಭಾನುವಾರದ ಮಳೆಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ.

ಚಿತ್ರದುರ್ಗದ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಸಾಯಂಕಾಲ 6 ಗಂಟೆ ಸುಮಾರಿಗೆ ಸಿಡಿಲು ಗುಡುಗಿನೊಂದಿಗೆ ಮಳೆ ಸುರಿಯುತ್ತಿದ್ದ ಸಂದರ್ಭ ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 47 ವರ್ಷದ ಭಾಗ್ಯಮ್ಮ ಎಂಬ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ. ಜಮೀನಿನ ಬದುವಿನಲ್ಲಿದ್ದ ಹುಣಸೆ ಮರದ ಕೆಳಗೆ ನಿಂತುಕೊಂಡಿದ್ದಾಗ ಸಿಡಿಲು ಬಡಿದು ಭಾಗ್ಯಮ್ಮ ಸಾವನ್ನಪ್ಪಿದ್ದಾರೆ. ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಳ್ಳಾರಿಯಲ್ಲೂ ಸಿಡಿಲಿಗೆ ಬಲಿ

ಬಳ್ಳಾರಿ: ಜಿಲ್ಲೆಯ ಸಂಜೀವರಾಯನಕೋಟೆ ಗ್ರಾಮದಲ್ಲಿ ಸಿಡಿಲು ಬಡಿದು (Karnataka Rain) ರೈತ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಜಮೀನಿನಿಂದ ಮನೆಗೆ ವಾಪಸ್ ತೆರಳುತ್ತಿದ್ದಾಗ ಸಿಡಿಲು ಬಡಿದಿದ್ದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೊಡ್ಡ ತಿಮ್ಮಪ್ಪ ಎಂಬುವವರ ಪತ್ನಿ ಮಂಗಮ್ಮ ಮೃತ ಮಹಿಳೆ. ಗ್ರಾಮಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ವಿವಿಧೆಡೆ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ರೈತ ಮಹಿಳೆ ಸಾವು ಸೇರಿದಂತೆ ರಾಜ್ಯದಲ್ಲಿ ಭಾನುವಾರದ ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ (Bengaluru rains) ನಗರದ ಕೆ.ಆರ್‌.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಮುಳಗಿ ಅದರಲ್ಲಿ ಚಾಲಕ ಸೇರಿ ಏಳು ಮಂದಿ ಸಿಲುಕಿದ್ದರು. ಅವರ ಪೈಕಿ ಆಂಧ್ರ ಮೂಲದ ಬಾನುರೇಖಾ ಎಂಬ ಯುವತಿ ಕೊನೆಯುಸಿರೆಳೆದಿದ್ದರು.

ಅದೇ ರೀತಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಮರ ಬಿದ್ದು ವೇಣುಗೋಪಾಲ್‌ ಎಂಬ ಸ್ಕೂಟರ್‌ ಸವಾರ ಮೃತಪಟ್ಟಿದ್ದರು. ಮತ್ತೊಂದೆಡೆ ಕೊಪ್ಪಳದಲ್ಲಿ ಸಿಡಿಲು ಬಡಿದು 16 ವರ್ಷದ ಶ್ರೀಕಾಂತ ದೊಡ್ಡನಗೌಡ್ರ ಮೇಟಿ ಎಂಬ ಬಾಲಕ ಮೃತಪಟ್ಟಿದ್ದ. ಈಗ ಜಿಲ್ಲೆಯಲ್ಲಿ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದರಿಂದ ಒಂದೇ ದಿನ ಮಳೆಗೆ ನಾಲ್ವರು ಸಾವಿಗೀಡಾದಂತಾಗಿದೆ.

ಇದನ್ನೂ ಓದಿ: Bengaluru Rains: ಮೃತ್ಯುಕೂಪವಾದ ಅಂಡರ್‌ಪಾಸ್‌: ಮಳೆನೀರಿನಲ್ಲಿ ಮುಳುಗಿ ಇನ್ಫೋಸಿಸ್‌ ಉದ್ಯೋಗಿ ಸಾವು, ಸ್ಥಳಕ್ಕೆ ಡಿಸಿಎಂ ಭೇಟಿ

Exit mobile version