Site icon Vistara News

Bangalore Rain: ರಣಮಳೆ ನಡುವೆ ಹುಚ್ಚಾಟ; ರಾಜ ಕಾಲುವೆ ಆಳ ನೋಡಲು ಹೋಗಿ ಕೊಚ್ಚಿಹೋದ ಯುವಕ

karnataka-rain: youth dies after jumping into Raja kaluve in Bangalore

karnataka-rain: youth dies after jumping into Raja kaluve in Bangalore

ಬೆಂಗಳೂರು: ಭಾನುವಾರ ಸಂಜೆ ಒಂದೇ ಒಂದು ಗಂಟೆ ಕಾಲವಷ್ಟೇ ಸುರಿದ ರಕ್ಕಸ ಮಳೆ (Karnataka Rain) ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಭಾರಿ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಒಮ್ಮಿಂದೊಮ್ಮೆಗೇ ತುಂಬಿಕೊಂಡ ಬೆಂಗಳೂರಿನ ಕೆ.ಆರ್‌. ಸರ್ಕಲ್‌ ಅಂಡರ್‌ಪಾಸ್‌ನಲ್ಲಿ (KR Circle underpass) ಸಿಲುಕಿಕೊಂಡ ಕಾರಿನಲ್ಲಿದ್ದ ಯುವತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡರೆ, ರಾಜ್ಯಾದ್ಯಂತ ಏಳು ಮಂದಿ ಬಲಿಯಾದರು. ಅಪ್ಪಟ ಅಮಾಯಕರು ಜಲಪ್ರಳಯ, ಸಿಡಿಲ ಹೊಡೆತಕ್ಕೆ ಪ್ರಾಣ ಕಳೆದುಕೊಂಡರು. ಆದರೆ, ಬೆಂಗಳೂರಿನಲ್ಲಿ ಒಬ್ಬ ಯುವಕ ಈ ರಣಮಳೆಯ ನಡುವೆ ಹುಚ್ಚಾಟಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಮಹಾಮಳೆಯ ನಡುವೆ ರಾಜಕಾಲುವೆಯ (Raja kaluve) ಆಳ ನೋಡುವ ಹುಚ್ಚು ಸಾಹಸಕ್ಕೆ ಇಳಿದ ಯುವಕ ಮೃತಪಟ್ಟಿದ್ದಾನೆ. ಕೆಪಿ ಅಗ್ರಹಾರದ ರಾಜ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್‌ ಎಂಬ ಯುವಕ ಕೊಚ್ಚಿ ಹೋಗಿದ್ದಾನೆ. ಅಲ್ಲಿದ್ದವರೆಲ್ಲರೂ ನೀರಿಗೆ ಇಳಿಯಬೇಡ ಎಂದು ಪರಿಪರಿಯಾಗಿ ಕೇಳಿಕೊಂಡರೂ ಮೊಂಡು ಹಠ ಮಾಡಿ ಸಾಹಸಕ್ಕೆ ಇಳಿದ ಯುವಕ ತನ್ನ ಮಾತ್ರವಲ್ಲ ಕುಟುಂಬದ ಬದುಕನ್ನೂ ಕತ್ತಲಾಗಿಸಿದ್ದಾನೆ.

ಭಾರಿ ಮಳೆಯಿಂದಾಗಿ ರಾಜಕಾಲುವೆಯಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಈ ನಡುವೆ ಕೆ.ಪಿ. ಅಗ್ರಹಾರದ ಲೋಕೇಶ್‌ ಎಂಬ ಈ ಯುವಕನಿಗೆ ಸಾಹಸ ಮಾಡುವ ಮನಸ್ಸಾಗಿದೆ. ಆತ ನೀರಿಗೆ ಹಾರಲು ಸಿದ್ಧತೆ ನಡೆಸುತ್ತಿದ್ದ. ಅದಕ್ಕೆ ಅಕ್ಕಪಕ್ಕದವರೆಲ್ಲ ಬೇಡ ಎಂದಿದ್ದರು. ಆದರೆ, ನೀರಿನ ಆಳ ನೋಡಿಕೊಂಡು ಬರುತ್ತೇನೆ ಎಂದು ಆತ ಇಳಿದೇ ಬಿಟ್ಟಿದ್ದ.

ಇದರ ನಡುವೆ ನೋಡ ನೋಡುತ್ತಿದ್ದಂತೆಯೇ ಆತ ಕೊಚ್ಚಿಹೋಗಿದ್ದ. ಆತನ ಮೃತದೇಹ ಸೋಮವಾರ ಮುಂಜಾನೆ ಬ್ಯಾಟರಾಯನಪುರದ ಬಳಿ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಆತ ಕೊಚ್ಚಿಹೋಗಿದ್ದಾನೆ ಎಂಬ ಇನ್ನೊಂದು ವಾದವೂ ಕೇಳಿಬರುತ್ತಿದೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಮಳೆ ಅನಾಹುತ ಸಾವಿನ ಸಂಖ್ಯೆ ಎಂಟಕ್ಕೇರಿಕೆ

ಮಳೆ ನೀರಿನಲ್ಲಿ ಕೊಚ್ಚಿ ಹೋದ, ಸಿಡಿಲು ಬಡಿದು ಮೃತಪಟ್ಟ ಹೀಗೆ ಮಳೆ ಸಂಬಂಧಿ ಸಾವಿನ ಸಂಖ್ಯೆ ಒಂದೇ ದಿನದಲ್ಲಿ ಎಂಟು ಆಗಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಅಪ್ಪೇನಹಳ್ಳಿಯ ಗ್ರಾ.ಪಂ ಸದಸ್ಯ, ಡಿ. ಸಿದ್ದಾಪುರ ನಿವಾಸಿ ಮಲ್ಲಿಕಾರ್ಜುನ (38) ಮೃತಪಟ್ಟ ಗ್ರಾ.ಪಂ ಸದಸ್ಯ. ಮಲ್ಲಿಕಾರ್ಜುನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೊಲದಲ್ಲಿದ್ದ ಗ್ರಾ.ಪಂ ಸದಸ್ಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ತಂತಿ ತುಳಿದು ಸಾವು

ಮೈಸೂರು: ವಿದ್ಯುತ್ ತಂತಿ ತುಳಿದು ಯುವಕನೊಬ್ಬ ಸಾವಿಗೀಡಾದ ಘಟನೆ ಪಿರಿಯಾಪಟ್ಟಣ ತಾಲೂಕು ಬಾರಸೆ ಗ್ರಾಮದಲ್ಲಿ ನಡೆದಿದೆ. ಇಬ್ಬರಿಗೆ ಗಾಯಗಳಾಗಿವೆ. ಸ್ವಾಮಿ (18) ಮೃತ ಯುವಕ. ಹರೀಶ್ ಹಾಗೂ ಸಂಜಯ್‌ಗೆ ಗಾಯವಾಗಿದೆ.

ಇದನ್ನೂ ಓದಿ: Karnataka Rain: ಬೆಂಗಳೂರಿಗರೇ ಬೀ ಕೇ‌ರ್‌ಫುಲ್, ಇನ್ನೆರಡು ದಿನ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

Exit mobile version