Site icon Vistara News

Save Nandini: ಅಮುಲ್‌ ಜತೆ ನಂದಿನಿ ವಿಲೀನ ಬೇಡ: ಕೆಎಂಎಫ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ

Karnataka Rakshana Vedike urges KMF not to merge Nandini with Amul

ಬೆಂಗಳೂರು: ಗುಜರಾತ್ ಮೂಲದ ಅಮುಲ್‌ ಡೇರಿ ಜತೆಗೆ ರಾಜ್ಯದ ರೈತರ ಜೀವನಾಡಿಯಾಗಿರುವ ಕೆಎಂಎಫ್‌ನ ನಂದಿನಿಯನ್ನು (Save Nandini) ಅನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸಲು ಅವಕಾಶ ನೀಡಬಾರದು ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣ ಮನವಿ ಸಲ್ಲಿಸಿದೆ.

ಬಹುರಾಜ್ಯ ಸಹಕಾರಿ ಸಂಸ್ಥೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಗೃಹ, ಸಹಕಾರಿ ಸಚಿವ ಅಮಿತ್‌ ಶಾ ಸಂಸತ್‌ನಲ್ಲಿ ಮಂಡಿಸಿದ್ದು, ಅದು ಜಾರಿಯಾಗುವ ಹಂತದಲ್ಲಿದೆ. ಇದರ ಪ್ರಕಾರ ಹೈನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಹಕಾರಿ ಸಂಘಗಳೂ ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರಲಿವೆ. ಕೆಎಂಎಫ್‌ನಂತಹ ಮಹಾಮಂಡಳಿಗಳ ಚುನಾವಣೆಗಳನ್ನು ಕೇಂದ್ರ ಸರ್ಕಾರವೇ ನಡೆಸಲಿದ್ದು, ಇದರಿಂದ ಕೆಎಂಎಫ್‌ ಅಸ್ತಿತ್ವಕ್ಕೆ ಅಪಾಯ ಉಂಟಾಗಲಿದೆ. ಹೀಗಾಗಿ ಕೆಎಂಎಫ್‌ ಅನ್ನು ಅಮುಲ್‌ ಜತೆ ವಿಲೀನ ಮಾಡಬಾರದು ಎಂದು ವೇದಿಕೆ ಕೋರಿದೆ.

ಇದನ್ನೂ ಓದಿ | Karnataka ELection: ಸಾವಿರಾರು ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರಲಿದ್ದಾರೆ: ಪದ್ಮರಾಜ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌

ಇತ್ತೀಚೆಗೆ ಮಂಡ್ಯ ಜಿಲ್ಲೆ ಪ್ರವಾಸದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು, ಕರ್ನಾಟಕದಲ್ಲಿ ಅಮುಲ್‌ ಮತ್ತು ನಂದಿನಿ ಸಂಸ್ಥೆಗಳು ಒಟ್ಟಾಗಿ ಪ್ರತಿ ಹಳ್ಳಿಗಳಲ್ಲಿ ಪ್ರೈಮರಿ ಡೇರಿಗಳನ್ನು ತೆರೆಯಲಿವೆ ಎಂದು ಹೇಳಿದ್ದರು. ನಂತರ ಕೇಂದ್ರ ಸಚಿವ ಸಂಪುಟ ಬಹುರಾಜ್ಯ ಸಹಕಾರಿ ಸಂಸ್ಥೆ ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಬಳಿಕ ಅಮಿತ್‌ ಶಾ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಟನೆಗಳನ್ನು ಬಹುರಾಜ್ಯ ಸಹಕಾರ ಸಂಸ್ಥೆಯಡಿಯಲ್ಲಿ ತರುವುದಾಗಿ ಘೋಷಿಸಿದ್ದರು. ಇದರ ಹಿಂದೆ ಅಮುಲ್‌ ಜತೆಗೆ ಕೆಎಂಎಫ್‌ ವಿಲೀನ ಮಾಡುವ ಹುನ್ನಾರವಿದೆ ಎಂದು ಕರವೇ ಆರೋಪಿಸಿದೆ.

ಅಮುಲ್‌ ಬಹಳ ವರ್ಷಗಳಿಂದ ಕರ್ನಾಟಕದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಆದರೆ ಈಗ ಬೆಂಗಳೂರಿನಲ್ಲಿ ಇ- ಕಾಮರ್ಸ್‌ ಮೂಲಕ ಅಮುಲ್‌ ವ್ಯಾಪಾರ ಘೋಷಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸಲಾಗಿದೆ. ಇದಕ್ಕೆ ಹೊಣೆ ಯಾರು? ಈ ಬಗ್ಗೆ ಏನಾದರೂ ತನಿಖೆಯನ್ನು ನಡೆಸಲಾಗಿದೆಯೇ? ನಂದಿನಿ ಹಾಲಿನ ಅಭಾವ ದಿಢೀರನೆ ಕಾಣಿಸಿಕೊಳ್ಳಲು ಕಾರಣವೇನು? ಎಂಬುವುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದೆ.

ಅಮುಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರು ಇತ್ತೀಚೆಗೆ ಇ-ಕಾಮರ್ಸ್‌ ಸಂಸ್ಥೆಗಳ ಮೂಲಕ ಹಾಲು, ಮೊಸರು ಮಾರಲಾಗುತ್ತದೆ. 6 ತಿಂಗಳ ನಂತರ ಬೆಂಗಳೂರಿನಲ್ಲಿ ಮಾಡರ್ನ್‌ ಟ್ರೇಡ್‌ (modern trade) ಸಾಧನಗಳ ಮೂಲಕ ಅಮುಲ್ ಪ್ರವೇಶ ಪಡೆಯು‌ತ್ತದೆ ಎಂದು ತಿಳಿಸಿದ್ದರು. ಮಾಡರ್ನ್‌ ಟ್ರೇಡ್‌ ಎಂದರೆ ಉತ್ಪಾದಕರಿಂದ ನೇರ ಖರೀದಿ ಮಾಡಿ ಗ್ರಾಹಕರಿಗೆ ತಲುಪಿಸುವ ಸಂಪೂರ್ಣ ಏಕಸ್ವಾಮ್ಯ ವ್ಯವಸ್ಥೆ. ಅದಕ್ಕೆ ಬೇಕಿರುವ ಮಳಿಗೆ, ದಾಸ್ತಾನು, ಹಾಗೂ ಮಾಲ್‌ಗಳ ಸರಣಿಯನ್ನು ಹೊಂದಿರುವ ದೊಡ್ಡ ದೊಡ್ಡ ಉದ್ಯಮಿಗಳ ಸಂಘಟಿತ ಚಿಲ್ಲರೆ ವ್ಯಾಪಾರ ವಹಿವಾಟು ಎಂದರ್ಥ. ಇದಕ್ಕಾಗಿ ಕೆಎಂಎಫ್‌ನಂತೆ ಸ್ಥಳೀಯ ಹಾಲು ಉತ್ಪಾದಕರಿಂದ ನೇರವಾಗಿ ಹಾಲು ಖರೀದಿಸಿ, ದಾಸ್ತಾನು ಮಾಡಿ ಗ್ರಾಹಕರಿಗೆ ತಲುಪಿಸುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಕೆಎಂಎಫ್‌ನ ಪ್ರಾಬಲ್ಯ ಕಡಿಮೆಯಾಗಲಿದೆ ಎಂದು ಕರವೇ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ | Karnataka Election 2023 : ಕನಕಪುರ, ವರುಣದಲ್ಲಿ ಸಂತೋಷ್‌, ಜೋಷಿಯವರನ್ನು ಕಣಕ್ಕಿಳಿಸಿ; ಕಾಂಗ್ರೆಸ್‌ ಪಂಥಾಹ್ವಾನ

ಅಮುಲ್‌, ನಂದಿನಿ ಇತ್ಯಾದಿ ಬೃಹತ್‌ ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿದ ನಂತರ ಹೈನೋದ್ಯಮ ಗುಜರಾತ್‌ನ ಉದ್ಯಮಪತಿಗಳ ಕೈಗೆ ಹೋಗಲಿದೆ. ಕೆಎಂಎಫ್‌ ಕನ್ನಡಿಗರ ಸಂಸ್ಥೆ, ಅದು ಈಗ ಹೇಗಿದೆಯೋ ಅದೇ ಸ್ವರೂಪದಲ್ಲಿ ಮುಂದುವರಿಯಬೇಕು. ಒಂದು ವೇಳೆ ಕರ್ನಾಟಕದಲ್ಲಿ ನಂದಿನಿಯ ಜತೆಗೆ ಪೈಪೋಟಿಗೆ ನಿಂತರೆ, ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸಲು ಮುಂದಾದರೆ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ. ರಾಜ್ಯದ ಜನತೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಸ್ವರೂಪದ ಹೋರಾಟಕ್ಕೂ ಸಜ್ಜಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ, ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮೋಹನ್ ಗೌಡ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Exit mobile version