Site icon Vistara News

Millets and Organics Fair: ದೇಶದಲ್ಲಿ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕು: ಸಿಎಂ

Siddaramaiah

ಬೆಳಗಾವಿ: ಸಾವಯವ ಕೃಷಿಯತ್ತ ಜನರು ಮುಖ ಮಾಡಿದ್ದು, ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಮಾರುಕಟ್ಟೆ ಒದಗಿಸಬೇಕು. ಸಿರಿಧಾನ್ಯ (Millets and Organics Fair) ಬೆಳೆಯಲ್ಲಿ ಕರ್ನಾಟಕವು ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಆದರೆ, ದೇಶದಲ್ಲಿಯೇ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಗರದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ʼಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2024ʼ(International Trade Fair on Millets and Organics) ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳ ಬಳಕೆಯ ಲಾಭಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ಸಹಕಾರಿಯಾಗಿವೆ. ಕಳೆದ 20 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಲಾಗುತ್ತಿದೆ. ಅದಕ್ಕೆ ಕೃಷಿ ಇಲಾಖೆಯವರು ಪೂರಕ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದರು.

ಇದನ್ನೂ ಓದಿ | Belagavi Winter Session: ಬಿಬಿಎಂಪಿ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅನುಮೋದನೆ: 500 ಕೋಟಿ ರೂ. ಉಳಿತಾಯ!

ಬೆಂಗಳೂರಿನಲ್ಲಿ ಜ.5,6, 7ರಂದು ಸಿರಿಧಾನ್ಯ ಮೇಳ

ಸಾವಯವ ಕೃಷಿ ಪದ್ಧತಿ, ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 5, 6, 7 ರಂದು ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2024 ಏರ್ಪಡಿಸಲಾಗಿದೆ ಎಂದು ಸಿಎಂ ಹೇಳಿದರು.

ಸಿರಿಧಾನ್ಯ ಆರೋಗ್ಯಕ್ಕೆ ಒಳ್ಳೆಯದು

2017ರಲ್ಲಿ ಮೊದಲ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ನಡೆಯಿತು. ಆಗ ಕೃಷ್ಣ ಬೈರೇಗೌಡರು ಕೃಷಿ ಸಚಿವರಾಗಿದ್ದರು. 5 ವರ್ಷ ಸತತವಾಗಿ ಮೇಳವನ್ನು ಏರ್ಪಾಡು ಮಾಡಲಾಗಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ಮಾಡಲಾಗಿರಲಿಲ್ಲ. ಸಿರಿಧಾನ್ಯ ಬಹಳ ಬೇಡಿಕೆಯಲ್ಲಿರುವ ವಸ್ತು. ಮೊದಲು ರಾಗಿ, ಜೋಳ, ನವಣೆ, ಸಾಮೆ, ಅರ್ಕವನ್ನು ಬೆಳೆಯುತ್ತಿದ್ದೆವು . ನಂತರ ಕಡಿಮೆಯಾಗುತ್ತಾ ಬಂದಿತು. ಮಳೆ ಕಡಿಮೆಯಾಗುವ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಇತ್ತೀಚೆಗೆ ಸಿರಿಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದೆಂದು ಅರಿತಿರುವ ಜನ ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಕಾರ್ಬೊಹೈಡ್ರೇಟ್ಸ್ ಕಡಿಮೆಯಿದ್ದು, ಲವಣಾಂಶ ಮತ್ತು ನಾರಿನಂಶ ಹೇರಳವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ ಎಂದರು.

ಇದನ್ನೂ ಓದಿ | Belagavi Winter Session: ನಾಲ್ಕು ಏರ್‌ಪೋರ್ಟ್‌ಗಳಿಗೆ ನಾಮಕರಣ; ಟಿಪ್ಪು ಹೆಸರಿಡಲು ಕೈ ಶಾಸಕ ಆಗ್ರಹ

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಬಾಧ್ಯಕ್ಷ ಯು.ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.

Exit mobile version