ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬದಲಾಗಲಿದ್ದಾರೆ. ಏಕೆಂದರೆ ದೇಶದ ಉನ್ನತ ಹುದ್ದೆಯಲ್ಲೊಂದಾಗಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ (CBI Director) ಸ್ಥಾನಕ್ಕೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ (Praveen Sood) ನೇಮಕಗೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಪ್ರವೀಣ್ ಸೂದ್ ಎರಡು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ.
ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದಿದೆ. ಸದ್ಯ ಮೂವರು ಐಪಿಎಸ್ ಅಧಿಕಾರಿಗಳು ಹೆಸರು ಸಂಭಾವ್ಯ ಪಟ್ಟಿಯಲ್ಲಿತ್ತು. ಆದರೆ, ಅಂತಿಮವಾಗಿ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: DK Shivakumar: ನಾನೇ ಮುಂದಿನ ಸಿಎಂ ಅಂದರೇ ಡಿ.ಕೆ. ಶಿವಕುಮಾರ್?; ಸಿದ್ದರಾಮಯ್ಯ ಸಹಕಾರ ಕೋರಿದ ಡಿಕೆಶಿ
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ ರಂಜನ್ ಚೌಧರಿ ಒಳಗೊಂಡ ಉನ್ನತ ಮಟ್ಟದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಕರ್ನಾಟಕ, ದೆಹಲಿ ಸೇರಿದಂತೆ ಮೂರು ರಾಜ್ಯಗಳ ಅಧಿಕಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಹೆಸರು ಅಂತಿಮವಾಗಿದೆ.
ಕೇಂದ್ರದಿಂದ ಬಂತು ಅಧಿಕೃತ ಆದೇಶ
ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿ ಭಾನುವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜೈಸ್ವಾಲ್ ಅಧಿಕಾರಾವಧಿ ಮುಕ್ತಾಯದ ಬಳಿಕ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎರಡು ವರ್ಷ ಕಾಲ ಅಧಿಕಾರ ವಿಸ್ತರಣೆ
ಪ್ರವೀಣ್ ಸೂದ್ ಮುಂದಿನ ಎರಡು ವರ್ಷ ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಕರ್ನಾಟಕ ಕೇಡರ್‌ನ 1986 ಐಪಿಎಸ್ ಬ್ಯಾಚ್‌ನ ಅಧಿಕಾರಿ ಆಗಿರುವ ಪ್ರವೀಣ್ ಸೂದ್ ಮುಂದಿನ ವರ್ಷ ನಿವೃತ್ತರಾಗಬೇಕಿತ್ತು. ಈಗ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರೆ ಎರಡು ವರ್ಷ ಸೇವೆ ವಿಸ್ತರಣೆಯಾಗಲಿದೆ. ಅಲ್ಲದೆ, ಇವರ ಸೇವಾ ಅವಧಿಯನ್ನು 5 ವರ್ಷಗಳ ವರೆಗೆ ವಿಸ್ತರಿಸುವ ಅವಕಾಶವೂ ಇದೆ. ಈ ಹಿಂದೆ ಸಹ ಕೇಂದ್ರದಲ್ಲಿ ಪ್ರವೀಣ್ ಸೂದ್ ಸೇವೆ ಸಲ್ಲಿಸಿದ್ದರು. ಸೇವೆ ಪರಿಗಣಿಸಿದ ಸಮಿತಿಯು ಉನ್ನತ ಹುದ್ದೆಯನ್ನು ನೀಡಿದೆ.
ಇದನ್ನೂ ಓದಿ: Karnataka Election 2023: ಯಾರಾಗಲಿದ್ದಾರೆ ಮುಂದಿನ ಸಿಎಂ? 50:50 ಫಾರ್ಮುಲಾ!
ರೇಸ್‌ನಲ್ಲಿದ್ದ ಮತ್ತಿಬ್ಬರು
ಸುಧೀರ್ ಸಕ್ಸೇನಾ (ಡಿಜಿಪಿ ಮಧ್ಯಪ್ರದೇಶ) ಮತ್ತು ತಾಜ್ ಹಾಸನ್ (ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರು, ನವದೆಹಲಿ) ಅವರ ಹೆಸರುಗಳು ಸಹ ಪಟ್ಟಿಯಲ್ಲಿದ್ದವು. ಅಂತಿಮವಾಗಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ.