ಬೆಂಗಳೂರು: ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ (Teacher Transfer) ಪ್ರಕ್ರಿಯೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ.
ಇದಕ್ಕೆ ಸಂಬಂಧಿಸಿದ ಕಡತಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯು ಚುನಾವಣಾ ಆಯೋಗದ ಅನುಮತಿಯನ್ನು ಪಡೆದು ಈ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಿದೆ.
ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಡತಕ್ಕೆ ಅನುಮೋದನೆ ನೀಡಿದ್ದಾರೆ.
ಕಳೆದ ಶುಕ್ರವಾರವೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಹಾಗೂ ಸಂಘದ ಪದಾಧಿಕಾರಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.
ವರ್ಗಾವಣೆಗಾಗಿ ಈಗಾಗಲೇ 79 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಆಯಾ ತಾಲೂಕಿನ ಒಳಗಡೆ ಮಾಡಬೇಕು. ದೀರ್ಘಕಾಲದಿಂದ ನನೆಗುದಿಯಲ್ಲಿರುವ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಗಿತ್ತು.
ಇತ್ತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೂಡ ಶಿಕ್ಷಣ ಸಚಿವರಿಗೆ ಈ ಸಂಬಂಧ ಪದೇ ಪದೇ ಮನವಿ ಮಾಡಿಕೊಂಡಿತ್ತಲ್ಲದೇ, ಮುಖ್ಯಮಂತ್ರಿಗಳ ಕಚೇರಿಯ ಸೂಚನೆ ಮೇರೆಗೆ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಪುನರಾರಂಭಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿತ್ತು.
ನೌಕರರ ಸಂಘದ ಮನವಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು, ಈಗಾಗಲೇ ಯಾವುದೇ ವರ್ಗಾವಣೆ ಮಾಡಬೇಕಾಗಿದ್ದಲ್ಲಿ ಆಯೋಗದ ಅನುಮತಿ ಪಡೆಯುವಂತೆ ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿರುವುದರಿಂದ ಆಯೋಗದ ಅನುಮತಿ ಪಡೆದು ವರ್ಗಾವಣೆ ಆರಂಭಿಸಲಾಗುತ್ತದೆ. ಸದ್ಯವೇ ಶಿಕ್ಷಕರ ವರ್ಗಾವಣೆ ಕಡತಕ್ಕೆ ಅನುಮೋದನೆ ನೀಡಿ ವರ್ಗಾವಣೆ ಪ್ರಕ್ರಿಯೆಗೆ ನಿರ್ದೇಶನ ನೀಡುತ್ತೇನೆ ಎಂದು ಸ್ಪಷ್ಟ ಭರವಸೆ ನೀಡಿದ್ದರು. ಅದರಂತೆಯೇ ಶುಕ್ರವಾರ ವರ್ಗಾವಣೆಗೆ ಅನುಮತಿ ನೀಡಲಾಗಿದೆ.
ಚುನಾವಣಾ ಆಯೋಗ ಅನುಮತಿ ನೀಡಿದಲ್ಲಿ ಮಾತ್ರ ಈ ವರ್ಗಾವಣೆ ಪ್ರಕ್ರಿಯೆ ಸದ್ಯವೇ ಪ್ರಾರಂಭವಾಗಲಿದೆ. ಮುಂದಿನ ಶೈಕ್ಷಣಿಕ ಸಾಲು ಆರಂಭವಾಗುವುದಕ್ಕೂ ಮೊದಲು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವನ್ನು ಶಿಕ್ಷಣ ಇಲಾಖೆ ಹೊಂದಿದೆ ಎನ್ನಲಾಗಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಿದ್ದಬಸಪ್ಪ ಅಭಿನಂದಿಸಿದ್ದಾರೆ.