ಬೆಂಗಳೂರು: ಮದ್ಯ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ಮಾತಿನ ನಡುವೆಯೇ, ಮದ್ಯ ಸೇವನೆಗೆ ಸದ್ಯ ಇರುವ 21 ವರ್ಷವನ್ನು 18 ವರ್ಷಕ್ಕೆ ಇಳಿಕೆ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಅಬಕಾರಿ ಇಲಾಖೆಯ ವಿವಿಧ ನಿಯಮಗಳಲ್ಲಿ ತಿದ್ದುಪಡಿ ತರುವ ಕರಡು ಅಧಿಸೂಚನೆಯನ್ನು ಜನವರಿ 9ರಂದು ಕರ್ನಾಟಕ ರಾಜ್ಯಪತ್ರದಲ್ಲಿ ರಾಜ್ಯ ಸರ್ಕಾರ ಹೊರಡಿಸಿತ್ತು
ಕರ್ನಾಟಕ ಅಬಕಾರಿ (ಸಾಮಾನ್ಯ ಪರವಾನಗಿ ನಿಬಂಧನೆಗಳು) ನಿಯಮಗಳು-2023ರ ಕರಡು ಪ್ರಕಟಿಸಿತ್ತು. ನಿಯಮ 10ರ ಉಪ ನಿಯಮ 1 (e) ಯಲ್ಲಿ, ಮದ್ಯ ಸೇವನೆಗೆ 21 ವರ್ಷವನ್ನು ನಿಗದಿಪಡಿಸಲಾಗಿತ್ತು. ಇದೀಗ 21ರ ಬದಲಿಗೆ 18 ವರ್ಷ ಎಂದು ಬದಲಾವಣೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.
ಇದೂ ಸೇರಿ ಇನ್ನಿತರ ತಿದ್ದುಪಡಿಗಳ ಕುರಿತು ಸಾರ್ವಜನಿಕರ ಆಕ್ಷೇಪಣೆಗಳನ್ನು ಇಲಾಖೆ ಕೋರಿತ್ತು. ಕರಡು ಪ್ರಕಟವಾದ 30 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಆನಂತರದಲ್ಲಿ ಸರ್ಕಾರ ಪರಾಮರ್ಶೆ ನಡೆಸಿ ಅಂತಿಮ ಅಧಿಸೂಚನೆ ಹೊರಡಿಸಲಿದೆ ಎಂದು ಹೇಳಿತ್ತು.
ಆದರೆ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಬಕಾರಿ ಇಲಾಖೆ, ವಯಸ್ಸಿನ ಮಿತಿಯನ್ನು ಇಳಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ.
ಮದ್ಯ ಸೇವಿಸುವ ವಯಸ್ಸನ್ನು ಇಳಿಕೆ ಮಾಡುವ ಕುರಿತು ಮಾಧ್ಯಮಗಳೂ ಸಾರ್ವಜನಿಕರ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದವು. ʼವಿಸ್ತಾರ ನ್ಯೂಸ್ʼ ಈ ಕುರಿತು ಸಂಪಾದಕೀಯದ ಮೂಲಕ ಖಂಡಿಸಿತ್ತು.
ದೇಶದ ವಿವಿಧ ರಾಜ್ಯಗಳಲ್ಲಿ ಮದ್ಯ ಸೇವನೆ ವಯಸ್ಸು ವಿಭಿನ್ನವಾಗಿದೆ. ಮಹಾರಾಷ್ಟ್ರದಲ್ಲಿ 25 ವರ್ಷ ಇದೆ, ದೆಹಲಿಯಲ್ಲಿ ಕಳೆದ ವರ್ಷವೇ 21ರಿಂದ 25ಕ್ಕೆ ಹೆಚ್ಚಿಸಿದೆ, ಉತ್ತರ ಪ್ರದೇಶದಲ್ಲಿ 21, ಕೇರಳದಲ್ಲಿ 2017ರಲ್ಲಿ 21ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕದಲ್ಲಿ 18 ಇದ್ದದ್ದನ್ನು 21ಕ್ಕೆ 2015ರಲ್ಲಿ ಹೆಚ್ಚಿಸಲಾಗಿತ್ತು.
ಇದನ್ನೂ ಓದಿ | Hooch tragedy | ಬಿಹಾರ ವಿಷ ಮದ್ಯ ದುರಂತದಲ್ಲಿ 70 ತಲುಪಿದ ಸಾವಿನ ಸಂಖ್ಯೆ