ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ʼನನ್ನ ಮಣ್ಣು ನನ್ನ ದೇಶʼ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳು ನಗರದ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‍ನಿಂದ ಶನಿವಾರ ಸಂಜೆ ತೆರಳಿದರು. ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರಗಳು ಸೇರಿದಂತೆ ವಿವಿಧೆಡೆಯಿಂದ ಸಂಗ್ರಹಿಸಿದ ಮಣ್ಣಿನ ಅಮೃತ ಕಳಸಗಳೊಂದಿಗೆ ಪ್ರತಿನಿಧಿಗಳು ತೆರಳಿದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ದೆಹಲಿಗೆ ತೆರಳುವ ಪ್ರತಿನಿಧಿಗಳಿಗೆ ಶುಭ ಹಾರೈಸಿ, ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಟ್ಟರು.
ಹುತಾತ್ಮರ ಗೌರವಾರ್ಥ ನವ ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಮಣ್ಣಿನ ಅಮೃತ ಕಳಸವನ್ನು ದೆಹಲಿಗೆ ಅ.30ರಂದು ಪ್ರತಿನಿಧಿಗಳು ತಲುಪಿಸಲಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆದಿದ್ದು, ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರ ಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ, ಸಾಧು ಸಂತರ ಮಠಗಳಿಂದ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿತ್ತು. ಈ ಮಣ್ಣನ್ನು ಅಮೃತ ವನದಲ್ಲಿ ವಿಲೀನಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ದೆಹಲಿಯಲ್ಲಿ ಅ. 31ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ರಾಜ್ಯದ 580 ಯುವಕರು, ನೆಹರೂ ಯುವಕ ಕೇಂದ್ರದಿಂದ 1500 ಯುವಕರು ಸೇರಿ ಒಂದೇ ರೈಲಿನಲ್ಲಿ ದೆಹಲಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ | Nigama Mandali : ನಿಗಮ, ಮಂಡಳಿ ಮಾರಾಟ; Rate Card ಬಿಡುಗಡೆ ಮಾಡಿದ ಬಿಜೆಪಿ!
ಅ. 30ಕ್ಕೆ ದೆಹಲಿಗೆ ಅಮೃತ ಕಳಸ ತಲುಪಿಸಲು ವ್ಯವಸ್ಥೆ: ಗೋವಿಂದ ಕಾರಜೋಳ
ಬೆಂಗಳೂರು: ಹುತಾತ್ಮರ ಗೌರವಾರ್ಥ ನವದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗಲಿರುವ ಅಮೃತ ಉದ್ಯಾನ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಅಮೃತ ಕಳಸವನ್ನು (My Soil My Country) ಅ. 30ಕ್ಕೆ ತಲುಪಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರ ಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ, ಸಾಧು ಸಂತರ ಮಠಗಳಿಂದ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿದೆ. ಏಕ್ ಭಾರತ್, ಶ್ರೇಷ್ಠ್ ಭಾರತ್ ಕಲ್ಪನೆಯೊಂದಿಗೆ ಅಮೃತ್ ವನದಲ್ಲಿ ಮಣ್ಣನ್ನು ವಿಲೀನಗೊಳಿಸಲಾಗುವುದು ಎಂದು ತಿಳಿಸಿದರು.
ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಲೋಚನೆಯೊಂದಿಗೆ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಸೆ. 3ರಂದು ಪ್ರಾರಂಭಿಸಲಾಗಿತ್ತು. ಅ. 31ರವರೆಗೆ ಅಭಿಯಾನ ನಡೆಯಲಿದೆ. ದೆಹಲಿ ಕರ್ತವ್ಯಪಥದ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಮಣ್ಣನ್ನು ಸಮರ್ಪಿಸಲಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ | ವಾರಕ್ಕೆ 70 ಗಂಟೆ ಕೆಲಸ; ಮೋದಿ ಉದಾಹರಣೆ ಕೊಟ್ಟು ಮೂರ್ತಿ ಹೇಳಿಕೆಗೆ ಉದ್ಯಮಿಗಳ ಬೆಂಬಲ
ದೇಶದ 7500 ಪುಣ್ಯ ಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ಕರ್ನಾಟಕದ 6 ಸಾವಿರಕ್ಕೂ ಹೆಚ್ಚು ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ದೇಶದ 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ಮಣ್ಣು ಸಂಗ್ರಹ ಕಾರ್ಯ ನಡೆದಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ಅ. 31ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ರಾಜ್ಯದ 580 ಯುವಕರು, ನೆಹರೂ ಯುವಕ ಕೇಂದ್ರದಿಂದ 1500 ಯುವಕರು ಸೇರಿ ಒಂದೇ ರೈಲಿನಲ್ಲಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರು ಮಾತನಾಡಿ, 2 ತಿಂಗಳಿನಿಂದ ಪ್ರತಿ ಗ್ರಾಮದ ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲಾಗಿದೆ. ಗ್ರಾಮಗಳಲ್ಲಿ ಅಮೃತ ವನ ನಿರ್ಮಿಸಲು ಪ್ರಧಾನಿಯವರು ಸೂಚಿಸಿದ್ದು, 1250 ಅಮೃತ ವನಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಉಪಸ್ಥಿತರಿದ್ದರು.
ನನ್ನ ಮಣ್ಣು – ನನ್ನ ದೇಶ ಅಭಿಯಾನದ ವಿವರ
ಮನೆಗಳಿಂದ ಮಣ್ಣು ಸಂಗ್ರಹ- 1,43,900
ಗ್ರಾಮಗಳು – 2878
ಕಳಸಗಳು- 1920
ಅಮೃತವನ – 1250
ಪ್ರತಿಜ್ಞಾವಿಧಿ – 2878
ಭಾಗವಹಿಸಿದವರ ಸಂಖ್ಯೆ – 10 ಲಕ್ಷ
ಇದನ್ನೂ ಓದಿ | ವಿಸ್ತಾರ ಅಂಕಣ: ʼಭಾರತʼದಲ್ಲಿರುವ ಗಾಂಭೀರ್ಯ ‘ಇಂಡಿಯಾʼದಲ್ಲಿ ಏಕಿಲ್ಲ?
ಅ.28ರಂದು ಸಂಜೆ 6.30ಕ್ಕೆ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಕರ್ನಾಟಕದ ಪ್ರತಿನಿಧಿಗಳು ವಿಶೇಷ ರೈಲಿನ ಮೂಲಕ ಅಮೃತ ಕಳಸವನ್ನು ತೆಗೆದುಕೊಂಡು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ತುಮಕೂರು, ಅರಸಿಕೆರೆ, ಹುಬ್ಬಳ್ಳಿ, ಬೆಳಗಾವಿ, ರೈಲು ನಿಲ್ದಾಣಗಳಿಂದ ಆ ಭಾಗದ ಕಾರ್ಯಕರ್ತರು ರೈಲಿನಲ್ಲಿ ತೆರಳಲಿದ್ದಾರೆ. ರಾಜ್ಯದಿಂದ ಒಟ್ಟು 580ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.