ಬೆಂಗಳೂರು: ಶುಕ್ರವಾರ ಮುಂಜಾನೆ ಹೊತ್ತಿಗೆ ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉತ್ತರ ಒಳನಾಡಲ್ಲಿ (North Inland) ಚಳಿಯ ಆರ್ಭಟ ಜೋರಾಗಿದೆ ಎಂಬುದನ್ನು ತೋರಿಸಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ವಿಜಯಪುರದಲ್ಲಿ ಈ ದಾಖಲೆ ಪ್ರಮಾಣದಲ್ಲಿ ತಾಪಮಾನ ಕುಸಿತ ಕಂಡಿರುವುದು ಗೊತ್ತಾಗಿದೆ. ಅಲ್ಲದೆ, ಮುಂದಿನ 48 ಗಂಟೆಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಒಣ ಹವೆಯ (Dry weather) ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka weather Forecast) ಉಲ್ಲೇಖಿಸಿದೆ.
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಂದರೆ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಚಳಿ ತುಸು ಹೆಚ್ಚಾಗಿಯೇ ಇರಲಿದೆ.
ದಕ್ಷಿಣ ಒಳನಾಡಲ್ಲಿ ಮಂಜಿನ ಆಟ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರುಗಳಲ್ಲಿ ಮುಂಜಾನೆ ಮಂಜಿನ ಸ್ಥಿತಿ ಇದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಕಾಣಿಸಿಕೊಳ್ಳಲಿದೆ. ಆದರೆ, ರಾತ್ರಿ ವೇಳೆ ಪುನಃ ಚಳಿ ತನ್ನ ಪ್ರಭಾವವನ್ನು ಬೀರುತ್ತದೆ.
ಬೆಂಗಳೂರಲ್ಲಿ ಭಾರಿ ಚಳಿ?
ಬೆಂಗಳೂರಲ್ಲಿ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಚಳಿ ಬೀಳುವ ಸಾಧ್ಯತೆ ಹೆಚ್ಚಿದೆ. ಕಾರಣ ಇನ್ನು ಮುಂದಿನ ಐದು ದಿನಗಳ ಕಾಲ ಅಂದರೆ 2024ರ ಜನವರಿ 3ರ ವರೆಗೂ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ರಾತ್ರಿ ಹಾಗೂ ಮುಂಜಾನೆ ಮಂಜಿನ ವಾತಾವರಣದೊಂದಿಗೆ ಭಾರಿ ಚಳಿ ಬಾರಿಸಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕರಾವಳಿ ತಾಪಮಾನ ಹೇಗೆ?
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಇರಲಿದೆ. ಆದರೆ, ಈ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಚಳಿಯ ವಾತಾವರಣ ಇರಲಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದ ಕೆಲವು ಕಡೆ ಮೈ ನಡುಗುವ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Turmeric In Winter: ಚಳಿಗಾಲದಲ್ಲಿ ನೆರವಾಗುವ ಅರಿಶಿನವೆಂಬ ಸಂಜೀವಿನಿ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ -15 ಡಿ.ಸೆ
ಮಂಗಳೂರು: 34 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 15 ಡಿ.ಸೆ
ಗದಗ: 31 ಡಿ.ಸೆ – 14 ಡಿ.ಸೆ
ಹೊನ್ನಾವರ: 36 ಡಿ.ಸೆ- 21 ಡಿ.ಸೆ
ಕಲಬುರಗಿ: 32 ಡಿ.ಸೆ – 18 ಡಿ.ಸೆ
ಬೆಳಗಾವಿ: 30 ಡಿ.ಸೆ – 14 ಡಿ.ಸೆ
ಕಾರವಾರ: 36 ಡಿ.ಸೆ – 22 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ