ಬೆಂಗಳೂರು: ರಾಜ್ಯದಲ್ಲಿ ಇನ್ನೊಂದು ವಾರ ಬೆಳಗ್ಗೆ ಹೊತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇರಲಿದೆ. ಅಂದರೆ ಹೆಚ್ಚಾಗಿ ಒಣಹವೆ (Dry weather) ಇರಲಿದ್ದು, ಮೈ ಒಡೆಯುವ ಗಾಳಿ ಬೀಸಲಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಗಾಳಿಯ ವೇಗವು ಹೆಚ್ಚುವುದಲ್ಲದೆ, ಚಳಿಯೂ ಜಾಸ್ತಿಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ತಿಳಿಸಿದೆ.
ಉತ್ತರ ಒಳನಾಡಿನಲ್ಲೂ ಚಳಿ
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಜತೆಗೆ ಚಳಿಯೂ ಇರಲಿದೆ. ಬೆಳಗಾವಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಬಿಸಿಲು ತುಸು ಹೆಚ್ಚೇ ಇರಲಿದೆ. ಅಂದರೆ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೀದರ್, ಬಾಗಲಕೋಟೆಯಲ್ಲಿಯೂ ಒಣ ಹವೆ ಹಾಗೂ ಚಳಿಯ ವಾತಾವರಣ ಇರಲಿದೆ. ರಾತ್ರಿ ಮತ್ತು ಮುಂಜಾನೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಬೆಚ್ಚಗಿರಬೇಕು ಅಂತ ಹೀಗೆಲ್ಲ ಮಾಡಬೇಡಿ, ಹುಷಾರ್!
ಮಲೆನಾಲ್ಲಿ ಭಾರಿ ಚಳಿ
ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದ್ದು, ಹೆಚ್ಚಾಗಿ ತಂಪಾಗಿರುತ್ತದೆ. ರಾತ್ರಿ ಹಾಗೂ ಬೆಳಗಿನ ಜಾವ ಮೈನಡುಗಿಸುವ ಚಳಿ ಉಂಟಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳೂ ಇದಕ್ಕೆ ಹೊರತಾಗಿಲ್ಲ.
ಶುಷ್ಕ ವಾತಾವರಣ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಬಳ್ಳಾರಿ, ವಿಜಯನಗರದಲ್ಲೂ ಶುಷ್ಕ ವಾತಾವರಣ ಇರಲಿದೆ. ಕೆಲವು ಕಡೆ ಮಾತ್ರ ಚಳಿಯ ವಾತಾವರಣ ಇರಲಿದ್ದು, ರಾತ್ರಿ ವೇಳೆ ಬೀಸುವ ಗಾಳಿಗೆ ಮೈಯೊಡ್ಡುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಬೆಂಗಳೂರಲ್ಲಿ ಕನಿಷ್ಠ ತಾಪಮಾನ 17 ಡಿ.ಸೆ!
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನಿಂದ ಕೂಡಿದ್ದರೆ, ಸಂಜೆ ಹಾಗೂ ರಾತ್ರಿ ವೇಳೆ ಚಳಿಯ ವಾತಾವರಣ ಇರಲಿದೆ. ಮಂಗಳವಾರ ಮುಂಜಾನೆ ಕೆಲವು ಕಡೆ ದಟ್ಟ ಮಂಜು ಆವರಿಸಿತ್ತು. ಬುಧವಾರವೂ ಇದೇ ರೀತಿ ಇರಲಿದೆ ಎಂದು ಅಂದಾಜಿಸಲಾಗಿದೆ. ಸಂಜೆ ವೇಳೆಗೆ ಚಳಿ ಹೆಚ್ಚಲಿದೆ. ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 17 ಡಿ.ಸೆ. ಇರಲಿದೆ.
ಇದನ್ನೂ ಓದಿ: Skin Care Secrets In winter: ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 30 ಡಿ.ಸೆ -17 ಡಿ.ಸೆ
ಮಂಗಳೂರು: 32 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 15 ಡಿ.ಸೆ
ಗದಗ: 33 ಡಿ.ಸೆ – 15 ಡಿ.ಸೆ
ಹೊನ್ನಾವರ: 34 ಡಿ.ಸೆ- 20 ಡಿ.ಸೆ
ಕಲಬುರಗಿ: 34 ಡಿ.ಸೆ – 18 ಡಿ.ಸೆ
ಬೆಳಗಾವಿ: 31 ಡಿ.ಸೆ – 14 ಡಿ.ಸೆ
ಕಾರವಾರ: 36 ಡಿ.ಸೆ – 20 ಡಿ.ಸೆ