Site icon Vistara News

Karnataka Weather : ಬೆಂಗಳೂರಲ್ಲಿ ಮಳೆ ಮಾಯ; ಕರಾವಳಿ ಮಳೆ ಮಯ!

Girl holding umbrella and another girl having hot weather

ಬೆಂಗಳೂರು: ವಾರಾಂತ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ನಿರೀಕ್ಷೆ ಇದೆ. ಒಂದೆರಡರು ಕಡೆ ಗುಡುಗು, ಮಿಂಚಿನ ಸಾಧ್ಯತೆಯೂ ಇದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಲಘು ಮಳೆ (Karnataka weather Forecast) ಸಂಭವ ಇದೆ. ಉಳಿದಂತೆ ಎಲ್ಲೆಡೆ ಒಣಹವೆಯಿಂದ ಕೂಡಿರಲಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆ ಸುರಿಯಲಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ. ಉತ್ತರ ಒಳನಾಡಿನ ಬೆಳಗಾವಿಯೊಂದರಲ್ಲಿ ಮಳೆ ಸಂಭವ ಇದ್ದು, ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.

ಬೆಂಗಳೂರಿಗಿಲ್ಲ ಮಳೆ ಅಲರ್ಟ್‌

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಬಿಸಿಲಿನಿಂದ ಕೂಡಿದರೆ ನಂತರ ಮೋಡ ಕವಿದ ವಾತಾವರಣ ಇರಲಿದೆ. ವಾರಾಂತ್ಯದಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಗರಿಷ್ಠ ಉಷ್ಣಾಂಶ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 31 ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ತಾಪಮಾನ ಏರಿಕೆ

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲಿದೆ. ಇತ್ತ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ 2-3 ಡಿಗ್ರಿಗಳಷ್ಟು ಗರಿಷ್ಠ ತಾಪಮಾನ ಏರಿಕೆ ಆಗಲಿದೆ.

ಒಳನಾಡಲ್ಲಿ ದುರ್ಬಲಗೊಂಡ ಮುಂಗಾರು

ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಲ್ಲಿ ದುರ್ಬಲಗೊಂಡಿದೆ. ಕರಾವಳಿಯಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ದಕ್ಷಿಣ ಕನ್ನಡದ ಮಣಿಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ 3, ಪುತ್ತೂರು, ಉಪ್ಪಿನಂಗಡಿ, ಸಿದ್ದಾಪುರ, ಜೋಯಿಡಾ ಮತ್ತು ಮಂಕಿ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಬಾಳೆಹೊನ್ನೂರು, ಕೊಟ್ಟಿಗೆಹಾರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಧರ್ಮಸ್ಥಳ, ಸಿ.ಆರ್‌.ಪಟ್ಟಣ, ಭಾಗಮಂಡಲ, ಶೃಂಗೇರಿ, ಕಳಸ, ಮಡಿಕೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 35. 7 ಡಿ.ಸೆ ಹಾಗೂ ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 17.5 ಡಿ.ಸೆ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version