ಬೆಂಗಳೂರು: ರಾಜ್ಯದಲ್ಲಿ ಇಂದು (ಜೂನ್ 27) ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ (Rain News) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಕೊಡಗು ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಗುರುವಾರ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ (45-55 kmph) ಸಂಭವಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.
ದ.ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು(ಜೂ.27) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಇನ್ನು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸಲು ಮಾಹಿತಿ ನೀಡಲಾಗಿದೆ. ದ.ಕ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕೊಡಗಿನ 2 ತಾಲೂಕುಗಳಲ್ಲಿ ರಜೆ
ಕೊಡಗು: ಜಿಲ್ಲೆಯಲ್ಲಿ ಹಲವೆಡೆ ವರುಣಾರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು (ಗುರುವಾರ) ರಜೆ ಘೋಷಿಸಲಾಗಿದೆ.
ಇನ್ನು ಜೂನ್ 28ರಂದು ಕೂಡ ಕರಾವಳಿ ಜಿಲ್ಲೆಗಳ ಪ್ರತ್ಯೇಕ ಕಡೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕ ಕಡೆ ಭಾರಿ ಮಳೆ ಸಾಧ್ಯತೆಯಿದೆ. ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳು. ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ (45-55 kmph) ಆಗುವ ಸಾಧ್ಯತೆಯಿದೆ. ಜೂನ್ 30ರವರೆಗೆ ಇದೇ ರೀತಿಯ ಸ್ಥಿತಿ ಕರಾವಳಿ ಜಿಲ್ಲೆಗಳಲ್ಲಿ ಇರಲಿದೆ.
ಮೀನುಗಾರರಿಗೆ ಎಚ್ಚರಿಕೆ
ಕರ್ನಾಟಕ ಕರಾವಳಿಯಲ್ಲಿ ಗುರುವಾರ ತೀವ್ರ ಬಿರುಗಾಳಿ (ಗಂಟೆಗೆ 35ರಿಂದ 55 ಮಿ.ಮೀ ವೇಗ) ಬೀಸುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡದ ಮುಲ್ಕಿಯಿಂದ ಮಂಗಳೂರಿನವರೆಗೆ ಬೆಳಗ್ಗೆ 8:30ರಿಂದ ರಾತ್ರಿ 11.30ರವರೆಗೆ 3.4 ರಿಂದ 3.5 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇದೆ.
ಉಡುಪಿ ಹೈ ವೇವ್ ಎಚ್ಚರಿಕೆ: ಬೈಂದೂರಿನಿಂದ ಕಾಪುವರೆಗಿನ ಕರಾವಳಿಯಲ್ಲಿ ಸಂಜೆ 5.30ರಿಂದ ರಾತ್ರಿ 11:30 ಗಂಟೆಗಳವರೆಗೆ 3.5 ರಿಂದ 3.7 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಉಂಟಾಗಲಿವೆ.
ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ ಸಂಜೆ 5.30ರಿಂದ ರಾತ್ರಿ 11.30ರವರೆಗೆ 3.7ರಿಂದ 3.9 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಹೀಗಾಗಿ ಸಣ್ಣ ಹಡಗುಗಳು ಸಂಚರಿಸದಂತೆ ಹಾಗೂ ಮನರಂಜನಾ ಚಟುವಟಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ | Rain News: ಕೊಡಗು, ಚಿಕ್ಕಮಗಳೂರು, ಕಾರವಾರದಲ್ಲಿ ವರುಣಾರ್ಭಟ; ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆ!
ಬೆಂಗಳೂರು ಮತ್ತು ಸುತಮುತಲಿನ ಪ್ರದೇಶಗಳ ಮುನ್ಸೂಚನೆ
ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಅಕಾಶವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ (30-40 kmph) ತುಂಬಾ ಸಾಧ್ಯತೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 C ಮತ್ತು 21C ಇರಲಿದೆ.