ಉಡುಪಿ: ನಿರಂತರವಾಗಿ ಸುರಿದ ಭಾರಿ ಮಳೆಯಿಂದ (Karnataka Rain) ಬೈಂದೂರು ಸೋಮೇಶ್ವರ ದೇವಳದ ಮೇಲ್ಭಾಗದಲ್ಲಿ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಖಾಸಗಿ ರೆಸಾರ್ಟ್ ಕಾಮಗಾರಿಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕಟ್ಟಡ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಗುಡ್ಡ ಕುಸಿದಿದೆ. ಮಣ್ಣು ರಸ್ತೆಗೆ ಬಿದ್ದಿದ್ದರೂ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಭೂಲೋಕದ ಸ್ವರ್ಗದಂತಾದ ಮುಳ್ಳಯ್ಯನಗಿರಿ
ಚಿಕ್ಕಮಗಳೂರು: ಮುಂಗಾರು ಮಳೆ ಸಿಂಚನಕ್ಕೆ ಮುಳ್ಳಯ್ಯನಗಿರಿ ಭೂಲೋಕದ ಸ್ವರ್ಗದಂತಾಗಿದೆ. ಗಿರಿ ಸೌಂದರ್ಯ ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಮುಳ್ಳಯ್ಯನಗಿರಿ ತಪ್ಪಲನ್ನು ಮಂಜಿನ ರಾಶಿ ಆವರಿಸೋ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಶಿಖರದಲ್ಲಿ ಮಂಜು ಮತ್ತು ಮಳೆಯ ಸಿಂಚನಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಹಸಿರ ತಪ್ಪಲಿಗೆ ಮಂಜು ಆವರಿಸಿರುವ ಅದ್ಭುತ ದೃಶ್ಯ ಗಮನ ಸೆಳೆಯುತ್ತಿದೆ.
ಬೆಳಗಾವಿಯಲ್ಲಿ ಭಾರಿ ಮಳೆ ಕುಸಿದ ಮುಖ್ಯ ರಸ್ತೆ
ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಸಾವಗಾಂವ ಬಳಿ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿದಿದೆ. ಬೆಳಗಾವಿ ನಗರದಿಂದ ಸಾವಗಾಂವಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅರ್ಧ ಕಿ.ಮೀ.ಗೂ ಹೆಚ್ಚು ಬಿರುಕು ಬಿಟ್ಟಿದೆ.
ನಿರಂತರ ಮಳೆ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತವಾಗಿದೆ. ಎರಡು ವರ್ಷದ ಹಿಂದೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಇದಾಗಿದೆ. ಈ ರಸ್ತೆಯಲ್ಲಿ ಅತೀ ಹೆಚ್ಚು ಶಾಲಾ ವಾಹನಗಳೇ ಓಡಾಡುತ್ತವೆ, ವಾಹನ ಸವಾರರು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ.
ನಾಳೆ ರಾಜ್ಯದ ವಿವಿಧೆಡೆ ಭಾರಿ ಮಳೆ
ಜುಲೈ 11ರಂದು ಗುರುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದೆ. ಅದೇ ರೀತಿ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಪ್ರತ್ಯೇಕ ಕಡೆ ಗುಡುಗು, ಬಿರುಗಾಳಿ ಸಹಿತ (30-40 kmph ವೇಗ) ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ
ಉತ್ತರ ಒಳ ಕರ್ನಾಟಕದ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹಲವೆಡೆ ಗಾಳಿಯ ವೇಗ (30-40 kmph) ಸಹಿತ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಒಳಗಿನ ಕರ್ನಾಟಕದ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮಾಹಿತಿ ನೀಡಿದೆ.
ಇನ್ನು ಜುಲೈ 12ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕಲಬುರ್ಗಿ, ಬೆಳಗಾವಿ ಜಿಲ್ಲೆಗಳಪ್ರತ್ಯೇಕ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ತಲುಪುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಅದೇ ರೀತಿ ಜುಲೈ 16ರವರೆಗೆ ಉತ್ತರ ಒಳನಾಡಿನ ಬಾಗಲಕೋಟೆ, ಯಾದಗಿರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಗಾಳಿಯ ವೇಗ (30-40 kmph) ತಲುಪುವ ಸಾಧ್ಯತೆಯಿದ್ದು, ಹಗುರದಿಂದ ಸಾಧಾರಣ ಮಳೆ ಸಾಧ್ಯತೆಯಿದೆ. ದಕ್ಷಿಣ ಒಳ ಕರ್ನಾಟಕದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮೀನುಗಾರರಿಗೆ ಎಚ್ಚರಿಕೆ
ದಕ್ಷಿಣ ಕನ್ನಡ: ಕರ್ನಾಟಕ ಕರಾವಳಿಗೆ ಮುಲ್ಕಿಯಿಂದ ಮಂಗಳೂರಿನವರೆಗೆ ಹೈ ವೇವ್ ವಾಚ್: ಜುಲೈ 11ರಂದು ರಾತ್ರಿ 11:30 ಗಂಟೆಗಳವರೆಗೆ 2.1 – 2.3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ.
ಬೈಂದೂರಿನಿಂದ ಕಾಪುವರೆಗಿನ ಉಡುಪಿ, ಕರ್ನಾಟಕ ಕರಾವಳಿಗೆ ಹೈ ವೇವ್ ವಾಚ್: ರಾತ್ರಿ 11:30 ಗಂಟೆಗಳವರೆಗೆ 2.2-2.4 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ.
ಉತ್ತರ ಕನ್ನಡ: ಕರ್ನಾಟಕ ಕರಾವಳಿಯ ಮಾಜಾಳಿಯಿಂದ ಭಟ್ಕಳದವರೆಗೆ ಹೈ ವೇವ್ ವಾಚ್: ರಾತ್ರಿ 11:30 ಗಂಟೆಗಳವರೆಗೆ 2.4 2.5 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ. ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ° C ಮತ್ತು 20° C ಆಗಿರಬಹುದು.