ಬೆಂಗಳೂರು: ರಾಜ್ಯಾದ್ಯಂತ ಶನಿವಾರ ಒಣ ಹವೆ (Dry Weather) ಇರಲಿದೆ. ಅಲ್ಲದೆ, ಮುಂದಿನ ವಾರ ಸೇರಿದಂತೆ ಈ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಬಹುತೇಕ ಕಡೆ ಚಳಿ ಜತೆಗೆ ಬಿಸಿಲಿನ ವಾತಾವರಣ ತುಸು ಹೆಚ್ಚಿರಲಿದೆ. ಮುಂದಿನ ವಾರದಲ್ಲಿ ಗರಿಷ್ಠ ಉಷ್ಣಾಂಶವು 3 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಹಾಗೇ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ಕಾಣಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಅಂದಾಜಿಸಿದೆ.
ಉತ್ತರ ಒಳನಾಡಿನ ಕೆಲವೆಡೆ ಕನಿಷ್ಠ ಉಷ್ಣಾಂಶ ಇಳಿಕೆ ಕಂಡಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಹೆಚ್ಚಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮುಂಜಾನೆ ಮಂಜಿನ ವಾತಾವರಣ ಇರುತ್ತದೆ. ಈ ಬಗ್ಗೆ ಹವಾಮಾನ ಇಲಾಖೆ ತಜ್ಞರಾದ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Tele ICU: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು: ದಿನೇಶ್ ಗುಂಡೂರಾವ್
ಕರಾವಳಿ ಉಷ್ಣಾಂಶದಲ್ಲಿ ಏರಿಕೆ!
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ ಆಗಲಿದೆ. ಹೀಗಾಗಿ ಬೆಳಗಿನ ಹೊತ್ತಿನಲ್ಲಿ ಸೆಕೆ ತುಸು ಹೆಚ್ಚಾಗಿಯೇ ಇರಲಿದೆ. ಇನ್ನು ರಾತ್ರಿ ವೇಳೆ ಹೇಳಿಕೊಳ್ಳುವಂತಹ ಚಳಿ ಇರುವುದಿಲ್ಲ.
ದಕ್ಷಿಣ ಒಳನಾಡಿನ ಹಲವೆಡೆ ಒಣ ಹವೆ
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಮೈಸೂರು, ಮಂಡ್ಯ, ಕೋಲಾರ, ರಾಮನಗರ ಸೇರಿದಂತೆ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದಲ್ಲಿ ಒಣ ಹವೆ ಇರಲಿದೆ. ಕೆಲವೊಮ್ಮೆ ಈ ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಯಲ್ಲಿ ಈ ವಾತಾವರಣ ಇರಲಿದೆ.
ಉತ್ತರ ಒಳನಾಡಲ್ಲಿ ಚಳಿ
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ವಾತಾವರಣ ಶುಷ್ಕತೆಯಿಂದ ಕೂಡಿದ್ದರೂ, ಹೆಚ್ಚಿನ ಪ್ರಮಾಣದ ಚಳಿ ಇರಲಿದೆ. ಹೀಗಾಗಿ ರಾತ್ರಿ ಅಥವಾ ಮುಂಜಾನೆ ಹೊರಗೆ ಹೋಗುವವರು ಮೈ ಬೆಚ್ಚಗೆ ಇಡುವ ಉಡುಪುಗಳನ್ನು ಧರಿಸಿ ಹೋದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಲಹೆಗಳು ವ್ಯಕ್ತವಾಗಿವೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 31 ಡಿ.ಸೆ -18 ಡಿ.ಸೆ
ಮಂಗಳೂರು: 33 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 32 ಡಿ.ಸೆ – 16 ಡಿ.ಸೆ
ಗದಗ: 32 ಡಿ.ಸೆ – 16 ಡಿ.ಸೆ
ಹೊನ್ನಾವರ: 34 ಡಿ.ಸೆ- 19 ಡಿ.ಸೆ
ಕಲಬುರಗಿ: 33 ಡಿ.ಸೆ – 20 ಡಿ.ಸೆ
ಬೆಳಗಾವಿ: 31 ಡಿ.ಸೆ – 12 ಡಿ.ಸೆ
ಕಾರವಾರ: 34 ಡಿ.ಸೆ – 20 ಡಿ.ಸೆ
ಇದನ್ನೂ ಓದಿ: HD Kumaraswamy: ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದು ತಪ್ಪು ಎಂದ ದೇವೇಗೌಡ; ಗೌಡರ ಸ್ಥಿತಿ ನೋಡಿದರೆ ಭಯವಾಗುತ್ತೆ ಎಂದ ಡಿಕೆಶಿ
ಬೆಳಗಾವಿಯಲ್ಲಿ 10.4 ಡಿಗ್ರಿ ಸೆಲ್ಸಿಯಸ್!
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿನ ತಾಪಮಾನವನ್ನು ಗಮನಿಸುವುದಾದರೆ, ಶುಕ್ರವಾರ ಅತಿ ಕಡಿಮೆ ಕನಿಷ್ಠ ಉಷ್ಣಾಂಶವು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಅಂದರೆ, 10.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ಬೆಳಗಾವಿಯ ಉಳಿದ ಕಡೆ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.