Site icon Vistara News

Karnataka Weather : ನಾಳೆ ಇಲ್ಲೆಲ್ಲ ಮಳೆ; ಚಳಿಯೂ ಸಾಥ್‌

Isolated to scattered very light to light rains likely over

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಒಣ ಹವೆ (Dry weather) ಇರಲಿದೆ. ಸೋಮವಾರದಂದು (Karnataka weather Forecast) ರಾಜ್ಯಾದ್ಯಂತ ಒಣಹವೆ ಇತ್ತು. ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 11.1 ಡಿ.ಸೆ ದಾಖಲಾಗಿದೆ.

ಮಲೆನಾಡಿನ ಹಾಸನ, ಕೊಡಗಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ ಹಾಗೂ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಹೇಗಿರಲಿದೆ ವಾತಾವರಣ?

ಬೆಂಗಳೂರಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯ ಥಂಡಿ ವಾತಾವರಣ ಇರಲಿದೆ. ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Ram Janmabhoomi: ರಾಮ ಮಂದಿರಕ್ಕೆ ನನ್ನ ದುಡ್ಡು ಬೇಕು, ಆಮಂತ್ರಣ ಮಾತ್ರ ಇಲ್ಲವೆಂದ ಲಕ್ಷ್ಮಣ ಸವದಿ

ಚಳಿಗಾಲದಲ್ಲಿ ಓಡುವಾಗ ಈ ಬಗ್ಗೆ ಗಮನವಿರಲಿ!

ಚಳಿ ನಡುಗುವವರನ್ನು ಮಾತ್ರವೇ ನಡುಗಿಸುತ್ತದೆ ಎಂಬ ಮಾತಿದೆ. ಅದರಲ್ಲೂ ಮ್ಯಾರಥಾನ್‌ನಂಥ ಕ್ರೀಡೆಗಳಲ್ಲಿ ತೊಡಗಿಸಿಕೊಂಡ ಉತ್ಸಾಹಿಗಳಿಗೆ ಚಳಿಯೇನು, ಮಳೆಯೇನು! ಉತ್ತರ ಭಾರತದ ಹಲವೆಡೆಗಳಲ್ಲಿ ಈಗ ಚಳಿ ತೀವ್ರವಾಗಿದ್ದು, ಹಿಮವೂ ಬೀಳುತ್ತಿದೆ. ಇಂಥ ದಿನಗಳಲ್ಲಿ ಹೊರಾಂಗಣದಲ್ಲಿ ಚಟುವಟಿಕೆ ಮಾಡುವಾಗ, ಅದರಲ್ಲೂ ಓಡುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು? ಚಳಿಯ ಹೊಡೆತಕ್ಕೆ ಮಾನಸಿಕವಾಗಿ ಧೈರ್ಯದಿಂದಿದ್ದಂತೆ ದೈಹಿಕವಾಗಿಯೂ ನಲುಗದೆ ಇರಬೇಕಲ್ಲ. ಇದಕ್ಕಾಗಿ ಕೆಲವು ಸಲಹೆಗಳಿವು.

ವಸ್ತ್ರಗಳು

ನಸುಕಿಗೆ ಅಥವಾ ಸಂಜೆ ಮೇಲೆ ಹೊರಾಂಗಣಕ್ಕೆ ವ್ಯಾಯಾಮ ಅಥವಾ ಅಭ್ಯಾಸಕ್ಕಾಗಿ ಧುಮುಕುವುದಕ್ಕಿಂತ ಬೆಚ್ಚಗಿನ ಹಗಲು ಹೊತ್ತಿನಲ್ಲಿ ಹೊರಬರುವುದು ಸೂಕ್ತ. ದಪ್ಪನೆಯ ಒಂದೇ ಜಾಕೆಟ್‌ ಹಾಕುವ ಬದಲು ಹಲವು ಪದರಗಳಲ್ಲಿ ಬಟ್ಟೆ ಧರಿಸಿ. ಆಗ ಹೊರಗಿನ ವಾತಾವರಣಕ್ಕೆ ಸರಿಹೊಂದುವಂತೆ ದೇಹದ ಉಷ್ಣತೆಯನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುವುದಿಲ್ಲ. ಮೊದಲಿಗೆ ಬೆವರು ಹೀರುವಂಥ ವಸ್ತ್ರಗಳು ಮೈಮೇಲಿರಲಿ; ನಂತರ ಬೆಚ್ಚಗಿನ ವಸ್ತ್ರಗಳು ಹಾಗೂ ಕಡೆಯದಾಗಿ ವಾಟರ್‌ಪ್ರೂಫ್‌ ಮಾದರಿಯದ್ದು ಇರಲಿ.

ನೀರು

ಹೊರಗೆ ತಣ್ಣಗಿನ ವಾತಾವರಣದಲ್ಲಿ ಓಡುವಾಗ ದಾಹದ ಅನುಭವ ಕೆಲವೊಮ್ಮೆ ಆಗುವುದೇ ಇಲ್ಲ. ಹಾಗೆಂದು ತಣ್ಣನೆಯ ಗಾಳಿಯನ್ನು ಉಸಿರಾಡುವಾಗ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಹಾಗಾಗಿ ಓಡುವ ಮುನ್ನವೇ ಸಾಕಷ್ಟು ನೀರು ಕುಡಿಯಿರಿ. ಓಡುವಾಗ ಮತ್ತು ನಂತರವೂ ನೀರು ಬೇಕು. ಆಹಾರದಲ್ಲಿ ನೀರು ಮತ್ತು ನಾರು ಸಾಕಷ್ಟಿರಲಿ. ಇದಕ್ಕಾಗಿ ಹೇರಳವಾಗಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ನೀರಿನ ಕೊರತೆಯಾಗುವುದನ್ನು ತಪ್ಪಿಸಬಹುದು.

ಕೇಳಿಸಿಕೊಳ್ಳಿ

ಮೊದಲಿಗೆ ದೇಹದ ಸೂಚನೆಗಳನ್ನು ಕೇಳಿಸಿಕೊಳ್ಳಿ. ಚಳಿಗೆ ಮಾಂಸಖಂಡಗಳಲ್ಲಿ ಸಂಕೋಚವಿದ್ದರೆ ಓಡುವುದು ಸಾಧ್ಯವಾಗದು. ಒಂದೊಮ್ಮೆ ಓಡುವಾಗಲೇ ಸ್ನಾಯು ಸೆಳೆತ ಕಾಣಿಸಿಕೊಂಡರೆ ಓಡುವುದನ್ನು ಮುಂದುವರಿಸಲೇಬೇಡಿ. ನೋವು, ಸೆಡೆತ, ಮರಗಟ್ಟಿದಂತಾಗುವುದು ಇಂಥವನ್ನು ಎಂದಿಗೂ ಕಡೆಗಣಿಸಬೇಡಿ. ದೇಹ ಸ್ವಸ್ಥವಾಗಿದ್ದರೆ ಮಾತ್ರವೇ ಚಳಿಯಲ್ಲಿ ಹೊರಾಂಗಣ ವ್ಯಾಯಾಮ ಸೂಕ್ತ.

ವಾರ್ಮ್‌ಅಪ್‌

ಮನೆಯಿಂದ ಹೊರಬೀಳುವ ಮುನ್ನ ಅಥವಾ ಓಡಲು ತೊಡಗುವ ಮೊದಲು ಚೆನ್ನಾಗಿ ವಾರ್ಮ್‌ಅಪ್‌ ಮಾಡಿ, ದೇಹವನ್ನು ಬಿಸಿ ಮಾಡಿಕೊಳ್ಳಿ. ಮೊದಲಿಗೆ ಚೆನ್ನಾಗಿ ಸ್ಟ್ರೆಚ್‌ ಮಾಡಿ. ನಂತರ ಕೀಲುಗಳನ್ನು ಸಡಿಲ ಮಾಡಿಕೊಳ್ಳಿ. ಲಘುವಾದ ಏರೋಬಿಕ್‌ ಮಾದರಿಯ ವ್ಯಾಯಾಮಗಳು ಸೂಕ್ತ. ಕ್ರಮೇಣ ಚಟುವಟಿಕೆಯ ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನೋವು, ಗಾಯಗಳಾಗದಂತೆ ತಪ್ಪಿಸಬಹುದು.

ಪಾದರಕ್ಷೆ

ಅಡಿಯಲ್ಲಿ ಒಳ್ಳೆಯ ಘರ್ಷಣೆ ಇರುವಂಥ ರನ್ನಿಂಗ್‌ ಶೂಗಳಿಗೆ ಆದ್ಯತೆ ನೀಡಿ. ಇಬ್ಬನಿ ಸುರಿಯುತ್ತಿದ್ದರೆ ರಸ್ತೆ ಕೆಲವೊಮ್ಮೆ ಒದ್ದೆಯಾಗಿರುತ್ತದೆ. ಓಡುವಾಗ ಜಾರಬಹುದು, ಜಾಗ್ರತೆ! ಶೂಗಳಿಗೆ ಪೂರಕವಾದಂಥ ಸ್ವಲ್ಪ ದಪ್ಪನೆಯ ಸಾಕ್ಸ್‌, ಅಗತ್ಯವಿದ್ದರೆ ಕೈಗಳಿಗೆ ಗ್ಲಾಸ್‌ ಧರಿಸಿ. ಕಿವಿ ಮತ್ತು ತಲೆಯನ್ನು ಬೆಚ್ಚಗೆ ಮಾಡಿಕೊಳ್ಳುವುದು ಅಗತ್ಯ ಎನಿಸಿದರೆ, ಅದೂ ಸರಿಯೆ.

ಹೊಂದಿಸಿಕೊಳ್ಳಿ

ಹೊರಗಿನ ವಾತಾವರಣಕ್ಕೆ ಸರಿಯಾಗಿ ಓಡುವ ದೂರವನ್ನು ಹೊಂದಿಸಿಕೊಳ್ಳಿ. ತೀರಾ ಮೋಡ, ಗಾಳಿ, ಚಳಿಯಲ್ಲಿ ಹೆಚ್ಚು ಓಡಲು ಕಷ್ಟವೆನಿಸಿದರೆ ದೂರವನ್ನು ಕಡಿಮೆ ಮಾಡಿ. ಬೆಚ್ಚಗಿನ ವಾತಾವರಣದಲ್ಲಿ ಹೆಚ್ಚಿಗೆ ಓಡಬಹುದು ಎನಿಸಿದ ದಿನಗಳಲ್ಲಿ ದೂರವನ್ನು ಹೆಚ್ಚಿಸಿ. ಹೈವೇ ಪಕ್ಕದಲ್ಲಿ ಓಡುವ ಉದ್ದೇಶವಿದ್ದರೆ, ಅಲ್ಲಿ ಚಲಿಸುವ ವಾಹನಗಳಿಗೆ ಎಷ್ಟು ಗೋಚರಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಮಂಜು ಸುರಿಯುತ್ತಿದ್ದರೆ ಇಬ್ಬರಿಗೂ ಅಪಾಯ.

ಓಟದ ನಂತರ

ರಿಕವರಿ ಎನ್ನಲಾಗುವ ಪ್ರಕ್ರಿಯೆಯನ್ನು ಎಂದಿಗೂ ಮರೆಯುವಂತಿಲ್ಲ. ವ್ಯಾಯಾಮದ ನಂತರ ಕಾಡಬಹುದಾದ ನೋವು, ಗಾಯಗಳನ್ನು ತಪ್ಪಿಸುವಲ್ಲಿ ಇದು ಅತ್ಯಂತ ಮಹತ್ವದ್ದು. ಫೋಮ್‌ ರೋಲರ್‌ಗಳು ಸ್ನಾಯುಗಳಲ್ಲಿನ ನೋವು, ಒತ್ತಡ ತೆಗೆಯುವಲ್ಲಿ ಒಳ್ಳೆಯ ಕೆಲಸ ಮಾಡುತ್ತವೆ. ಇದಲ್ಲದೆ ಆಮೂಲಾಗ್ರವಾಗಿ ದೇಹವನ್ನು ಸ್ಟ್ರೆಚ್‌ ಮಾಡಿ, ಹೆಚ್ಚು ಬಳಕೆಯಾದ ಸ್ನಾಯುಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version