Site icon Vistara News

Karnataka Weather: ಬೆಂಗಳೂರಿಗರ ಚಳಿ ಬಿಡಿಸಲಿದೆ ಡಿಸೆಂಬರ್‌ ಕೊನೇ ವಾರ! ರಾಜ್ಯ ಹವಾಮಾನ ಸ್ಥಿತಿ ಏನು?

cold in bangalore

ಬೆಂಗಳೂರು: ರಾಜ್ಯಾದ್ಯಂತ ಮಳೆ ಕ್ಷೀಣಿಸಿದೆ. ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಬಹುದು. ಆದರೆ, ರಾಜಧಾನಿ ಬೆಂಗಳೂರು (Bangalore Weather) ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಕಾಲ ಭಾರಿ ಪ್ರಮಾಣದಲ್ಲಿ ಚಳಿ ಬೀಳಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ಹೇಳಿದೆ. ಹೀಗಾಗಿ ಹೊಸ ವರ್ಷಾಚರಣೆಗೆ ಚಳಿ ಸಾಥ್‌ ನೀಡಲಿದೆ.

ಬೆಂಗಳೂರಿನಲ್ಲಿ ಈಗಾಗಲೇ ಚಳಿ ತನ್ನ ಆಟವನ್ನು ಪ್ರದರ್ಶಿಸತೊಡಗಿದೆ. ರಾತ್ರಿಯಾಗುತ್ತಿದ್ದಂತೆ ಅಲ್ಪಮಟ್ಟಿಗೆ ಚಳಿ ಗಾಳಿ ಶುರುವಾಗಿದೆ. ಮಧ್ಯ ರಾತ್ರಿ ಹಾಗೂ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಚಳಿಯಾಗಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕನಿಷ್ಠ ಉಷ್ಣಾಂಶ 15 – 16 ಡಿಗ್ರಿ ಸೆಲ್ಸಿಯಸ್‌ ಇದ್ದು, ನಾಲ್ಕೈದು ದಿನಗಳ ಬಳಿಕ ಇದು 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಂಗಳೂರಿನಲ್ಲಿ ಹವಾಮಾನ ಹೇಗಿದೆ?

ಬೆಂಗಳೂರಿನಲ್ಲಿ ಈಗಾಗಲೇ ಚಳಿ ಆವರಿಸಿಕೊಂಡಿದೆ. ಹಾಲಿ ಬುಧವಾರ (ಡಿ. 20) ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಗುರುವಾರ (ಡಿ. 21) ಇದೇ ಪ್ರಮಾಣ ಮುಂದುವರಿಯಲಿದೆ. ಆದರೆ, ಡಿಸೆಂಬರ್‌ 22ರ ಶುಕ್ರವಾರ ಮತ್ತು ಡಿ. 23ರ ಶನಿವಾರ 15 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಡಿ. 24ರಿಂದ 3 ದಿನ 14 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ!

ಡಿಸೆಂಬರ್ 24ರಿಂದ ಡಿ. 26ರವರೆಗೆ ಕನಿಷ್ಠ ತಾಪಮಾನದಲ್ಲಿ ಭಾರಿ ಕುಸಿತವಾಗಲಿದೆ. ಅಂದರೆ 14 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿಕೆ ಆಗಲಿದ್ದು, ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ಗರಿಷ್ಠ ತಾಪಮಾನವನ್ನು ನೋಡುವುದಾದರೆ 29 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಲ್ಲಿ ಮುಂಜಾನೆ ಮಂಜು

ಬೆಂಗಳೂರಲ್ಲಿ ಮುಂದಿನ ಎರಡು ದಿನಗಳಲ್ಲಿ (ಡಿ. 21-22) ಸ್ವಚ್ಛ ವಾತಾವರಣ ಇರಲಿದ್ದು, ರಾತ್ರಿಯಾಗುತ್ತಿದ್ದಂತೆ ತಣ್ಣನೆಯ ಗಾಳಿ ಹೆಚ್ಚಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಹೀಗಾಗಿ ಚಳಿ ಹೆಚ್ಚಾಗಲಿದೆ. ಕನಿಷ್ಠ ಉಷ್ಣಾಂಶ 15 – 16 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಬೆಂಗಳೂರಲ್ಲಿ ಬುಧವಾರ ಹೇಗಿತ್ತು?

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬುಧವಾರ ಕನಿ‍ಷ್ಠ 17.7 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಗರಿಷ್ಠ 27.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗರಿಷ್ಠ 27.2 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇತ್ತು. ಬೆಂಗಳೂರು ಎಚ್‌ಎಎಲ್‌ನಲ್ಲಿ ಕನಿಷ್ಠ 16.1 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಗರಿಷ್ಠ 27.2 ಡಿಗ್ರಿ ತಾಪಮಾನ ಕಂಡು ಬಂದಿದೆ.

ಇದನ್ನೂ ಓದಿ: Karnataka Weather: ಮಳೆ ಇಲ್ಲ, ಚಳಿಯೇ ಎಲ್ಲ; ತಣ್ಣಗಾಗಿದೆ ಬೆಂಗಳೂರು; ತಾಪಗೊಂಡಿದೆ ಮಂಗಳೂರು!

ಒಳನಾಡು ಜಿಲ್ಲೆಗಳಲ್ಲೂ ಹೆಚ್ಚಲಿದೆ ಚಳಿ

ವಿಜಯಪುರ ಸೇರಿದಂತೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಚಳಿ ಬೀಳಲಿದೆ. ಚಿತ್ರದುರ್ಗ, ಗದಗದಲ್ಲಿ 16 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗುವ ಸಾಧ್ಯತೆ ಇದ್ದರೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ 17 ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕರಾವಳಿಯ ಮಂಗಳೂರು ಹಾಗೂ ಕಾರವಾರದಲ್ಲಿ 22 ಡಿಗ್ರಿ ಸೆಲ್ಸಿಯಸ್‌ನಿಂದ 23 ಡಿಗ್ರಿ ಸೆಲ್ಸಿಯಸ್‌ವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

Exit mobile version