ಬೆಂಗಳೂರು: ಶುಕ್ರವಾರ ರಾಜ್ಯದಲ್ಲಿ ಒಣಹವೆ (Dry weather) ಇತ್ತು. ಕಡಿಮೆ ಉಷ್ಣಾಂಶ 10 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು. ಮುಂದಿನ 24 ಗಂಟೆಯು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ನಂತರ 48 ಗಂಟೆಯೊಳಗೆ ತಾಪಮಾನ ಎಚ್ಚರಿಕೆಯನ್ನು (Temperature warning) ಹವಾಮಾನ ಇಲಾಖೆ (Karnataka weather Forecast) ನೀಡಿದೆ.
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಚಳಿಯು ಹೆಚ್ಚಾಗಲಿದ್ದು, ಮೈ ನಡುಗಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಬೆಳಗ್ಗೆ ಹಾಗೂ ಸಂಜೆ ವೇಳೆ ಜೋರಾಗಿ ಗಾಳಿ ಬೀಸಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಮಂದಿಯನ್ನು ಗಡಗಡ ನಡುಗುವಂತೆ ಮಾಡುತ್ತದೆ.
ಇದನ್ನೂ ಓದಿ: Murder Case : ಎಣ್ಣೆ ಜಾಸ್ತಿ ಕುಡಿಯಲ್ಲ ಎಂದಿದ್ದಕ್ಕೆ ಕೊಲೆಯಾದ ಗೆಳೆಯ
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲಿ ಶುಷ್ಕ ವಾತಾವರಣ ಇರಲಿದೆ. ಜತೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ.
ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು/ ದಟ್ಟಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Lalbagh Flower Show : ಜ.18 ರಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ
ಚಳಿಗಾಲದಲ್ಲಿ ಕೀಲು ನೋವಿನಿಂದ ಪಾರಾಗುವುದು ಹೇಗೆ?
ಚಳಿಗಾಲದ ಮುನ್ಸೂಚನೆ ನೀಡುವುದಕ್ಕೆ ದೇಹದಲ್ಲಿ ಹಲವು ಅಂಗಗಳು ಸಿದ್ಧವಾಗಿರುತ್ತವೆ. ಅವುಗಳಲ್ಲಿ ಒಂದು ನಮ್ಮ ದೇಹದ ಕೀಲುಗಳು. ಎಷ್ಟೊ ಜನರಿಗೆ ಕೀಲುಗಳು ಬಿಗಿದು, ನೋವು ಪ್ರಾರಂಭವಾದಾಗಲೇ ಚಳಿಗಾಲ ಶುರು ಎಂಬುದು ಅರಿವಿಗೆ ಬರುತ್ತದೆ. ಅಷ್ಟು ಸೂಕ್ಷ್ಮ ಅವು. ಹಾಗಾಗಿ ಚಳಿಗಾಲದಲ್ಲಿ ಕೀಲುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. ಅದರಲ್ಲೂ ಹಿರಿಯ ನಾಗರಿಕರು ಮತ್ತು ಆರ್ಥರೈಟಿಸ್ ಸಮಸ್ಯೆಯಿಂದ ಬಳಲುವವರಿಗೆ ಚಳಿಗಾಲವನ್ನು ನೋವಿಲ್ಲದೆ ದಾಟುವುದೇ ಕಷ್ಟ (pain management in winter) ಎನ್ನುವಷ್ಟಾಗುತ್ತದೆ. ಚಳಿಗಾಲದಲ್ಲಿ ಕೀಲುಗಳಿಗೆ ಏನೆಲ್ಲ ಆರೈಕೆ ಮಾಡಿದರೆ ನೋವು ಶಮನವಾಗುತ್ತದೆ ಎಂಬ ವಿವರ ಇಲ್ಲಿ ಕೊಡಲಾಗಿದೆ.
ಕೆಲವೊಮ್ಮೆ ಮಾಂಸಖಂಡಗಳ ಸೆಡವು, ಬಿಗಿತ ಎಲ್ಲ ವಯೋಮಾನದವರನ್ನೂ ಚಳಿಗಾಲದಲ್ಲಿ ಕಾಡಬಲ್ಲದು. ಅದಕ್ಕೆ ವಯಸ್ಸಾಗಿರಬೇಕು, ಅರ್ಥರೈಟಿಸ್ ಇರಬೇಕೆಂದೇನೂ ಇಲ್ಲ. ಆದರೆ ಇದರ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ ತೆರನಾಗಿ ಇರುತ್ತದೆ. ಕೀಲುಗಳಲ್ಲಿ ನೋವು, ಬಿಗಿತ, ನಿತ್ಯದ ಚಟುವಟಿಕೆಗಳಿಗೆ ತೊಂದರೆ, ಸುಸ್ತು ಇತ್ಯಾದಿಗಳು ಹೈರಾಣಾಗಿಸುತ್ತವೆ.
ಇದಕ್ಕೆ ವಿಟಮಿನ್ ಡಿ ಕೊರತೆಯೂ ಸಹ ಕಾರಣವಾಗಬಲ್ಲದು. ಚಳಿಗಾಲದಲ್ಲಿ ಹೆಚ್ಚಾಗಿ ಬಿಸಿಲಿಗೆ ಬೀಳದೆ ಇರುವುದು ಮತ್ತು ವಿಟಮಿನ್ ಡಿ ಯುಕ್ತ ಆಹಾರಗಳನ್ನು ಸೇವಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಸೂರ್ಯನ ಬೆಳಕು ಹೆಚ್ಚಿಲ್ಲದಂಥ ಸ್ಥಳಗಳಲ್ಲಿ ವಿಟಮಿನ್ ಡಿ ಕೊರತೆಯೂ ಹೆಚ್ಚಾಗಿ ನೋವುಗಳ ತೊಂದರೆಯೂ ಹೆಚ್ಚುತ್ತದೆ. ಜೊತೆಗೆ ಚಳಿ ಹೆಚ್ಚಾದಾಗ, ಅದರಲ್ಲೂ ದೀರ್ಘ ಅಚಲ ಸ್ಥಿತಿಯಿಂದ ಎದ್ದಾಗ, ರಕ್ತ ಸಂಚಾರ ಸುಗಮವಾಗಿ ಇರದೆ, ಕೀಲುಗಳಲ್ಲಿನ ದ್ರವದ ಚಲನೆಯೂ ಸರಾಗವಾಗದೆ ಇದ್ದಾಗ ನೋವು ಕಾಣಿಸಿಕೊಳ್ಳುತ್ತದೆ.
ವ್ಯಾಯಾಮವನ್ನು ತಪ್ಪಿಸಬೇಡಿ
ಚಳಿಗಾಲದಲ್ಲಿ ನೋವು ಅನುಭವಿಸುವವರಿಗೆ ಇದು ಮುಖ್ಯವಾದ ವಿಷಯ. ಇದರರ್ಥ ಬಕೆಟ್‌ಗಟ್ಟಲೆ ಬೆವರು ಹರಿಸಿ ಎಂದಲ್ಲ. ನಿಮ್ಮ ಕೀಲುಗಳ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮಗಳನ್ನು ವೈದ್ಯರು ಅಥವಾ ಫಿಸಿಯೊ ಮಾರ್ಗದರ್ಶನದಲ್ಲಿ ರೂಢಿಸಿಕೊಂಡರೆ ಮಂಡಿ, ಕುತ್ತಿಗೆ, ಬೆನ್ನು ಮುಂತಾದ ನೋವುಗಳನ್ನು ಹತೋಟಿಯಲ್ಲಿ ಇರಿಸಬಹುದು. ಬೆಳಗ್ಗೆ ಏಳುತ್ತಿದ್ದಂತೆ ಕೆಲಸ ಮಾಡುವುದಕ್ಕೆ ಕೀಲುಗಳು ಮುಷ್ಕರ ಹೂಡುವುದು ಸಹ ಕಡಿಮೆಯಾಗುತ್ತದೆ. ವಾರಕ್ಕೆ ಐದು ದಿನಗಳಾದರೂ ವ್ಯಾಯಾಮ ಬೇಕು. ಮನೆಯಲ್ಲೆ ನಿಮ್ಮ ಆರೋಗ್ಯಕ್ಕೆ ಹೊಂದುವಂಥ ಸ್ಟ್ರೆಚ್‌ಗಳನ್ನು ದಿನವೂ ಮಾಡಬೇಕು. ಯೋಗ, ನಡಿಗೆ ಮುಂತಾದ ಯಾವುದೂ ಆಗಬಹುದು.
ಬೆಚ್ಚಗಿರಿ
ಚಳಿಯಲ್ಲಿ ಬೆಚ್ಚಗಿರುವುದು ನೋವು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಾಂಸಖಂಡಗಳಲ್ಲಿನ ಬಿಗಿತ, ಸೆಡವುಗಳು ಚಳಿ ಸೋಕಿದಷ್ಟೂ ಹೆಚ್ಚುತ್ತವೆ. ಹಾಗಾಗಿ ಬೆಚ್ಚಗಿರಿ. ಪದರಗಳಲ್ಲಿ ವಸ್ತ್ರಗಳನ್ನು ಧರಿಸಿ. ಇದರಿಂದ ಹೊರಗಿನ ವಾತಾವರಣಕ್ಕೆ ಸರಿ ಹೊಂದುವಂತೆ ದೇಹದ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಸುಲಭವಾಗುತ್ತದೆ.
ಆಹಾರ
ಇದು ಇನ್ನೊಂದು ಮುಖ್ಯವಾದ ಅಂಶ. ಆಹಾರದಲ್ಲಿ ಹೆಚ್ಚಾಗಿ ಒಮೇಗಾ ೩ ಕೊಬ್ಬಿನಾಮ್ಲವಿರಲಿ. ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ, ದೇಹದಲ್ಲಿನ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು, ವಾಲ್‌ನಟ್, ಅಗಸೆ ಬೀಜಗಳು, ಬೆಣ್ಣೆಹಣ್ಣು ಮುಂತಾದವು ದಿನವೂ ಬೇಕು. ಜೊತೆಗೆ ಲೀನ್ ಪ್ರೊಟೀನ್‌ಗಳು, ನಾರು, ಸಂಕೀರ್ಣ ಪಿಷ್ಟಗಳು ಆಹಾರದಲ್ಲಿ ಅಗತ್ಯವಾಗಿ ಇರಲಿ. ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಮರೆಯದೆ ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳು ಸಹ ಕೊರತೆಯಾಗುವುದಿಲ್ಲ. ಆಹಾರ ಸತ್ವಪೂರ್ಣವಾದಷ್ಟೂ ದೇಹ ಶಕ್ತಿಯುತವಾಗುತ್ತದೆ.
ಮಸಾಜ್
ಅಭ್ಯಂಗ, ಎಣ್ಣೆ ಸ್ನಾನದಂಥವು ಕೀಲುಗಳಿಗೆ ಮತ್ತು ಮಾಂಸಪೇಶಿಗಳಿಗೆ ಆರಾಮ ಒದಗಿಸುತ್ತವೆ. ಆದರೆ ನೋವಿರುವ ಕೀಲು ಮತ್ತು ಮಾಂಸಖಂಡಗಳಿಗೆ ಎಣ್ಣೆ ನೀವುದಕ್ಕಿಂತ ಮೊದಲು ವೈದ್ಯರಲ್ಲಿ ಸಲಹೆ ಪಡೆಯಿರಿ. ಕಾರಣ, ಇರುವಂಥ ನೋವು ಯಾವುದರಿಂದ ಬಂದಿದೆ ಮತ್ತು ಯಾಕಾಗಿ ಬಂದಿದೆ ಎಂಬುದನ್ನು ಪರಿಶೀಲಿಸಿದ ನಂತರ, ಆ ಸ್ಥಿತಿಯಲ್ಲಿ ಮಸಾಜ್ ಸೂಕ್ತವೇ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗುತ್ತದೆ. ನೋವಿಲ್ಲದಿದ್ದಾಗ ಸುಮ್ಮನೆ ಅಭ್ಯಂಗವನ್ನು ಎಲ್ಲರೂ ಮಾಡಬಹುದು.
ನೀರು
ಬೇಸಿಗೆಯಲ್ಲಿ ನಾವೇ ಮರೆತರೂ ದೇಹ ನೀರು ಕೇಳುತ್ತದೆ. ಆದರೆ ಚಳಿಗಾಲದಲ್ಲಿ ದಾಹ ಕಡಿಮೆ. ಹಾಗೆಂದು ನೀರು ಕಡಿಮೆ ಕುಡಿದರೆ ಸಮಸ್ಯೆಗಳು ಅಮರಿಕೊಳ್ಳುತ್ತವೆ. ದೇಹದ ಕೋಶಗಳಲ್ಲಿ ನೀರು ಕಡಿಮೆಯಾದಷ್ಟೂ ಬಿಗಿತ ಹೆಚ್ಚುತ್ತದೆ, ನೋವು ಉಲ್ಭಣಿಸುತ್ತದೆ. ಹಾಗಾಗಿ ದಿನಕ್ಕೆ ೧೦ ಗ್ಲಾಸ್ ನೀರು ಕುಡಿಯುವ ಗುರಿ ಇರಿಸಿಕೊಳ್ಳಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ