ಬೆಂಗಳೂರು: ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಎಂಬುದೆಲ್ಲ ಬದಲಾಗಿದೆ. ಬೇಸಿಗೆ ಕಾಲದಲ್ಲಿ ಸೂರ್ಯ ಮಂಕಾದರೆ, ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆಯ ಸಿಂಚನವಾಗುತ್ತದೆ. ಸದ್ಯ ಹವಾಮಾನ ವೈಪರಿತ್ಯದಿಂದಾಗಿ ಚಳಿಗಾಲ ಶುರುವಾದರೂ ಮಳೆಯಾಟ ಮಾತ್ರ (Karnataka weather Forecast) ನಿಂತಿಲ್ಲ. ಡಿ.31ರ ನಂತರ ಇನ್ನೊಂದು ವಾರ ಮಳೆ (Rain News) ಮುನ್ಸೂಚನೆ ಇದೆ.
ಜನವರಿ 1ರಿಂದ 4ರವರೆಗೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಆದರೆ ನಾಲ್ಕನೇ ದಿನಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮಳೆ ಪ್ರಭಾವ ಕಡಿಮೆ ಆಗಲಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಮಳೆ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು, ತುಮಕೂರಲ್ಲಿ ಅಲ್ಲಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಲ್ಲಿ ಥಂಡಿ
ಉತ್ತರ ಒಳನಾಡಿನ ಜಿಲ್ಲೆಗಳಿಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಬದಲಿಗೆ ಉತ್ತರ ಒಳನಾಡಲ್ಲಿ ಥಂಡಿ ವಾತಾವರಣವು ಜನರನ್ನು ಹೈರಣಾಗಿಸಲಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಲಿದೆ. ಇದರಿಂದಾಗಿ ಚಳಿಯು ಗಡಗಡ ನಡುಗಿಸಲಿದೆ.
ಬೆಂಗಳೂರಿಗಿಲ್ಲ ಮಳೆ ಸೂಚನೆ
ರಾಜಧಾನಿ ಬೆಂಗಳೂರಲ್ಲಿ ಯಾವುದೇ ಮಳೆ ಸೂಚನೆ ಇಲ್ಲ. ಆದರೆ ಬೆಂಗಳೂರಲ್ಲಿ ಇನ್ನೊಂದು ವಾರವೂ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶವು 18 ಡಿ.ಸೆ ಇರಲಿದೆ.
ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್; ಪಾಳು ಬಿದ್ದ ಮನೆಯಲ್ಲಿ ಮೊದಲು ಬುರುಡೆ ನೋಡಿದ್ದೇ ವಿದ್ಯಾರ್ಥಿಗಳು
ಚಳಿಗಾಲದಲ್ಲಿ ಸುಖನಿದ್ರೆ ಬೇಕಾದರೆ ಇವುಗಳನ್ನು ಮಾಡಬೇಡಿ!
ಚಳಿ ಚಳಿ ತಾಳೆನು ಈ ಚಳಿಯ ಎಂದು ಬೆಡ್‌ಶೀಟ್ ಅಡಿಯಲ್ಲಿ ಹುದುಗಿ ಮಲಗುವುದು ಸುಲಭ. ಆದರೆ ನಿದ್ದೆ ಬರಬೇಕಲ್ಲ? ಬಹಳಷ್ಟು ಮಂದಿ ಚಳಿಗಾಲದಲ್ಲೇ ನಿದ್ದೆಯ ತೊಂದರೆ ಅನುಭವಿಸುತ್ತಾರೆ. ಚಳಿ ಎಂದು ಕೆಲವರು ಹಗಲು ನಿದ್ದೆ ಮಾಡಿಯೋ, ಬದಲಾದ ಸಮಯದಿಂದಲೋ ಸರಿಯಾದ ಸಮಯಕ್ಕೆ ನಿದ್ದೆ ಬರದ ತೊಂದರೆ ಅನುಭವಿಸುತ್ತಾರೆ. ಬೇರೆ ಕಾಲಗಳಂತೆ ಚಳಿಗಾಲದಲ್ಲಿ ಸುಸ್ತಾಗುವ ಸಂಭವ ಕಡಿಮೆ ಇರುವುದರಿಂದಲೋ ಏನೋ ಬಹಳಷ್ಟು ಮಂದಿಯ ನಿದ್ದೆಯ ಸೈಕಲ್ ತಪ್ಪಿ ಹೋಗುತ್ತದೆ. ಎಷ್ಟೇ ಹೊದಿಕೆಗಳನ್ನು ಎಳೆದುಕೊಂಡು ಬೆಚ್ಚಗೆ ಮಲಗಿ (Sleeping Tips) ಗಂಟೆ ಕಳೆದರೂ ನಿದ್ದೆ ಸುಳಿಯುವುದಿಲ್ಲ ಎಂಬ ಸಮಸ್ಯೆ ಹಲವರದ್ದು.
ಹೀಗಾದರೆ, ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಬೇಕಾದ ನಿದ್ದೆ ಸಿಗುವುದೆಲ್ಲಿಂದ? ಚಳಿಯಲ್ಲೂ ಬೆಚ್ಚಗೆ ಹೊದ್ದುಕೊಂಡು ಮಲಗುವುದಷ್ಟೇ ಅಲ್ಲ, ನಿದ್ದೆಯನ್ನೂ ಮಾಡುವುದು ಹೇಗೆ ಎಂದರೆ ನೀವು ಅದಕ್ಕೊಂದು ಶಿಸ್ತನ್ನು ರೂಢಿ ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲೂ ಎಲ್ಲ ಕಾಲಗಳಂತೆ ಈ ಶಿಸ್ತನ್ನು ಕಾಪಾಡಿಕೊಂಡು ಬಂದಲ್ಲಿ, ನಿದ್ದೆಯ ಸಮಸ್ಯೆ ಎಂದಿಗೂ ಬಾರದು. ಹಾಗಾದರೆ ಅವು ಯಾವುವು ನೋಡೋಣ.
ಮನೆಯೊಳಗೇ ಕೂರಬೇಡಿ
ಮನೆಯೊಳಗೇ ಬೆಚ್ಚಗೆ ಕೂರುತ್ತೇವೆ ಎಂದು ಒಂದೇ ಜಾಗದಲ್ಲಿ ಪ್ರತಿಷ್ಠಾಪನೆ ಕಂಡ ಮೂರ್ತಿಯಂತೆ ಕೂತರೆ ಯಾವ ಕೆಲಸವೂ ಸಾಗದು. ಚುರುಕಾಗಿರುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಸೂರ್ಯ ನಿಧಾನವಾಗಿ ಮೇಲೆದ್ದು ಬರುತ್ತಿದ್ದಂತೆ ಸಣ್ಣಗೆ ಬಿಸಿಲು ಕಾಯತೊಡಗುತ್ತದೆ. ಈ ಬಿಸಿಲು ಬೆಚ್ಚಗೆ ಹಿತವಾಗಿಯೂ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇಂತಹ ಬಿಸಿಲನ್ನು ತಿನ್ನಿ. ನೀವು ಮನೆಯೊಳಗೇ ಇರುವವರಾದರೆ, ಈ ಬಿಸಿಲಿಗೊಮ್ಮೆ ಚಂದದ ವಾಕ್ ಮಾಡಿ. ಇದರಿಂದ ಇಡೀ ದಿನಕ್ಕೆ ಬೇಕಾದ ಚೈತನ್ಯ ನಿಮಗೆ ದಕ್ಕುತ್ತದೆ.
ಸಿಕ್ಕಾಪಟ್ಟೆ ತಿನ್ನಬೇಡಿ
ಮಲಗುವ ಮೂರು ಗಂಟೆಗೂ ಮೊದಲು ಊಟ ಮಾಡಿ. ಸಿಕ್ಕಾಪಟ್ಟೆ ತಿನ್ನುತ್ತಿದ್ದೀರಿ ಎಂದೆನಿಸಿದರೆ, ಖಂಡಿತವಾಗಿಯೂ ಇಷ್ಟು ಕಾಲಾವಕಾಶ ಬೇಕು. ಇಲ್ಲವಾದರೆ, ದೇಹಕ್ಕೆ ಆಹಾರ ಕರಗಿಸಲು ಸಾಕಷ್ಟು ಶ್ರಮ ಹಾಕಬೇಕಾಗಿ ಬರುತ್ತದೆ.
ಹಗಲು ನಿದ್ದೆ ಬೇಡ
ಚಳಿಗಾಲವೆಂದಾಗ, ಮನೆಯಲ್ಲೇ ಇದ್ದರೆ, ಖಂಡಿತ ಹೊದ್ದು ಮಲಗಿಬಿಡುವ ಎಂಬ ಆಕರ್ಷಣೆ ಸಹಜವೇ. ಆದರೂ ಹೆಚ್ಚು ನಿದ್ರಿಸದಂತೆ ನಿಮಗೆ ನೀವೇ ನಿಯಮಗಳನ್ನು ಹಾಕಿಕೊಳ್ಳಿ. ಹಗಲು ಗಡದ್ದಾಗಿ ನಿದ್ದೆ ಹೊಡೆದರೆ ಖಂಡಿತಾ ರಾತ್ರಿ ಬೇಗ ನಿದ್ದೆ ಬಾರದು. ಸಣ್ಣ ನಿದ್ದೆಯಾದರೆ ತೊಂದರೆಯಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲಸದ ಸುಸ್ತಿನಿಂದ ಸಣ್ಣ ನಿದ್ದೆ ಮಾಡಿ ಏಳುವುದು ಕೆಲವರ ಅಭ್ಯಾಸವಿರುತ್ತದೆ. ಆದರೆ, ದೊಡ್ಡ ನಿದ್ದೆಯ ಅಭ್ಯಾಸ ಮಾಡಿಕೊಂಡರೆ ರಾತ್ರಿಯ ನಿದ್ದೆಗೆ ಸಂಚಕಾರ ಖಂಡಿತ.
ಮೂಡ್ ಬದಲಾವಣೆ
ಕೆಲವರಿಗೆ ಋತುಮಾನ ಬದಲಾದ ಹಾಗೆ ಮೂಡುಗಳು ಬದಲಾಗುವುದುಂಟು. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಾಣದೆ ಅಥವಾ ಕೇವಲ ಚಳಿಯಿಂದಾಗಿ ತೀರಾ ಬೇಸರದ ದಿನಗಳಂತೆ ಇದ್ದಕ್ಕಿದ್ದಂತೆ ಖಿನ್ನತೆ ಕಾಣಿಸಿಕೊಳ್ಳಬಹುದು. ಇದರಿಂದ ಅತಿಯಾದ ಹಗಲಿನ ನಿದ್ದೆ ಅಥವಾ ಅತಿಯಾದ ರಾತ್ರಿ ನಿದ್ದೆಯನ್ನೂ ಮಾಡತೊಡಗಬಹುದು. ಇಂತಹ ತೊಂದರೆಗಳುಂಟಾದಲ್ಲಿ ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ವಿಟಮಿನ್ ಡಿ ಸೇರಿದಂತೆ ಕೆಲವು ಔಷಧಿಗಳ ಮೂಲಕ ನಿದ್ದೆಯನ್ನು ಸರಿದಾರಿಗೆ ತರಬಹುದು.
ರೂಮನ್ನು ಹೆಚ್ಚು ಬಿಸಿಯಾಗಿಸಬೇಡಿ
ಚಳಿಗಾಲವೆಂದು ರೂಂ ಹೀಟರ್ ಬಳಸುತ್ತಿದ್ದರೆ, ಉಷ್ಣತೆಯನ್ನು ಅತಿಯಾಗಿ ಏರಿಸಿ ಇಟ್ಟುಕೊಳ್ಳಬೇಡಿ. ಹೊರ ಕೋಣೆಗಳಲ್ಲಿ ತಂಪಾದ ವಾತಾವರಣದಿಂದ ದೇಹ ಮತ್ತೆ ಬಿಸಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ನಿದ್ದೆಗೆ ತೊಂದರೆಯಾಗುತ್ತದೆ.
ನೀರು ಕುಡಿಯದಿರಬೇಡಿ
ಚಳಿಗಾಲವೆಂದು ನೀರಿನ ಅಗತ್ಯ ಇಲ್ಲ ಎಂದುಕೊಂಡರೆ ತಪ್ಪಾದೀತು. ಚಳಿಗಾಲದಲ್ಲಿ ಬೆವರದಿದ್ದರೂ, ಬಾಯಾರಿಕೆ ಆಗದಿದ್ದರೂ ನೀರು ಕುಡಿಯುವುದು ಬಹಳ ಮುಖ್ಯ. ನೀರು ಸರಿಯಾಗಿ ಕುಡಿಯದಿದ್ದರೆ ನಿರ್ಜಲೀಕರಣದಂತಹ ತೊಂದರೆಗಳು ಬರಬಹುದು. ರಾತ್ರಿ ಆಗಾಗ ಎದ್ದು ಬಾತ್‌ರೂಮಿಗೆ ಹೋಗಬೇಕಾಗುತ್ತದೆ, ಎಂಬುದು ನಿಮ್ಮ ಕಾರಣವಾದರೆ, ಮಧ್ಯಾಹ್ನದ ಹೊತ್ತಲ್ಲಿ ನೀರು ಕುಡಿಯಿರಿ. ಒಟ್ಟಿನಲ್ಲಿ ದೇಹಕ್ಕೆ ನೀರು ಬೇಕು.
ಜಡತನ ಬೇಡ, ವ್ಯಾಯಾಮ ಇರಲಿ
ಏನೇ ಆದರೂ, ಎಷ್ಟೇ ಚಳಿ ಇದ್ದರೂ ನಿಮ್ಮ ಎಂದಿನ ನಿಯಮಿತ ವ್ಯಾಯಾಮ, ನಡಿಗೆಯನ್ನು ಬಿಟ್ಟುಬಿಡಬೇಡಿ. ಚಳಿಗಾಲದಲ್ಲಿ ಇದನ್ನು ಮಾಡುವುದು ಕಷ್ಟವೇ ಆದರೂ, ಕೆಲವು ಬೇರೆ ಪರ್ಯಾಯಗಳನ್ನಾದರೂ ಬಳಸಿ ನೋಡಿ. ಚಂದ ವ್ಯಾಯಾಮ ಮಾಡಿ, ದೇಹವನ್ನು ಚುರುಕಾಗಿ ಇಟ್ಟರೆ ದೇಹವೂ ರಾತ್ರಿ ನೆಮ್ಮದಿಯಿಂದ ನಿದ್ದೆಯನ್ನು ಕಾಣುವಂತಾಗುತ್ತದೆ. ಒಟ್ಟಿನಲ್ಲಿ ವ್ಯಾಯಾಮ ಬಿಟ್ಟರೆ ತೊಂದರೆ ಕಟ್ಟಿಟ್ಟ ಬುತ್ತಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ