ಬೆಂಗಳೂರು: ರಾಜ್ಯದ ಹಲವು ಕಡೆ ವರುಣ (Rain News) ಬಿಡುವು ಕೊಟ್ಟಿದ್ದ. ಗುರುವಾರ ಅಲ್ಲಲ್ಲಿ ಮಳೆಯಾಗಿದೆಯಾದರೂ ಸಾಧಾರಣವಾಗಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲಿನ ಧಗೆ ಇತ್ತು. ರಾತ್ರಿ ವೇಳೆಗೆ ಚಳಿ ಅಲ್ಪ ಪ್ರಮಾಣದಲ್ಲಿ ಇಳಿಕೆಯೂ ಆಗಿತ್ತು. ಆದರೆ, ಈಗ ಪುನಃ ಮಳೆಯಾಗುವ ಮುನ್ಸೂಚನೆಯನ್ನು (Karnataka Weather) ರಾಜ್ಯ ಹವಾಮಾನ ಇಲಾಖೆ ನೀಡಿದೆ. ಇನ್ನು ಎರಡು ದಿನ ದಕ್ಷಿಣ ಒಳನಾಡಿನ (south interior) ಕೆಲವು ಕಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಭಾಗಗಳಲ್ಲಿ ಮಳೆ ಅಷ್ಟಾಗಿ ಬಾರದು ಎಂದು ಅಂದಾಜಿಸಲಾಗಿದೆ. ಈ ವಾತಾವರಣವು ಇನ್ನೆರಡು ದಿನ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಆದರೆ, ರಾತ್ರಿ ವೇಳೆ ಸ್ವಲ್ಪ ಚಳಿ ಬೀಳಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಹವಾಮಾನ ವರದಿಯನ್ನು ಗಮನಿಸುವುದಾದರೆ ಇಲ್ಲಿ ಬೆಳಗ್ಗೆ ಹೊತ್ತು ಬಿಸಿಲಿನ ವಾತಾವರಣ ಇರಲಿದೆ. ಹೀಗಾಗಿ ಸ್ವಲ್ಪ ಸೆಖೆ ಕೂಡಾ ಆಗಲಿದೆ. ಆದರೆ, ಬಹುತೇಕ ಸಮಯ ಮೋಡ ಮುಸುಕಿದ ವಾತಾವರಣ ಇರುವ ಸಾಧ್ಯತೆ ಹೆಚ್ಚಿದೆ. ಇನ್ನು ಎರಡು ದಿನದ ವಾತಾವರಣವನ್ನು ನೋಡುವುದಾದರೆ ಮುಂಜಾನೆ ಮೋಡ ಕವಿದ ವಾತಾವರಣ ಇರುತ್ತದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ರಾತ್ರಿ ವೇಳೆ ತುಸು ಚಳಿಯ ವಾತಾವರಣ ಹೆಚ್ಚಾಗಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Chakravarty Sulibele: ಸಿದ್ದರಾಮಯ್ಯ ವಿರುದ್ಧ ಕೋಮುದ್ವೇಷದ ಹೇಳಿಕೆ; ಸೂಲಿಬೆಲೆ ಮೇಲಿನ FIRಗೆ ತಡೆ
ನ. 16ರಂದು ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ!
ಇನ್ನು ಗುರುವಾರ (ನ. 16) ರಾಜ್ಯದಲ್ಲಿನ ಉಷ್ಣಾಂಶವನ್ನು ಗಮನಿಸುವುದಾದರೆ ವಿಜಯಪುರದಲ್ಲಿ ಅತಿ ಕಡಿಮೆ ಅಂದರೆ 14.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಾಗಿ ಆ ಭಾಗದಲ್ಲಿ ವಿಪರೀತ ಚಳಿಯ ಸ್ಥಿತಿ ನಿರ್ಮಾಣವಾಗಿತ್ತು.