ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಹೊಡೆತಕ್ಕೆ ಜನ ಸುಸ್ತೆದ್ದು ಹೋಗಿದ್ದಾರೆ. ಹೊರಗೆ ಕಾಲಿಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಹೀಟ್ ವೇವ್ (ಬಿಸಿ ಗಾಳಿ) ಸಹ ಜಾಸ್ತಿಯಾಗಿದ್ದರಿಂದ ನಾಗರಿಕರು ಬಿಸಿಲಿನಿಂದ ಬರುವ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಿರಿಯರು, ಮಕ್ಕಳು ಬಸವಳಿದಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ (ಮಾ. 6) ಗರಿಷ್ಠ ತಾಪಮಾನ ದಾಖಲಾಗಿದೆ. ಆದರೆ, ಏಪ್ರಿಲ್ 9ರ ಯುಗಾದಿ ಹಬ್ಬದ ನಂತರ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು (Karnataka Weather) ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಾದ್ಯಂತ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದ್ದು, ಮಾಸಾಂತ್ಯದವರೆಗೂ ವರ್ಷಧಾರೆಯಾಗಲಿದೆ. ಹೀಗಾಗಿ ಬಿಸಿಲಿನ ತೀವ್ರತೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಯುಗಾದಿಯಿಂದ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು. ಆ ವಾರದಲ್ಲಿ ತೀವ್ರತೆಯನ್ನು ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ ಉತ್ತರಾರ್ಧದಲ್ಲಿ ನಗರಾದ್ಯಂತ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೆ, ಯುಗಾದಿವರೆಗೆ ಬೆಂಗಳೂರು ಮಂದಿ ಬಿಸಿಲಿನ ತಾಪವನ್ನು ತಡೆದುಕೊಳ್ಳಬೇಕಾಗುತ್ತದೆ.
ಕರ್ನಾಟಕದ ಅನೇಕ ಭಾಗಗಳಲ್ಲಿ ತಾಪಮಾನವು ಏರುತ್ತಲೇ ಇದೆ. ಇದರ ಪರಿಣಾಮವಾಗಿ ಮಾರ್ಚ್‌ನಿಂದ ಇಲ್ಲಿಯವರೆಗೆ 521 ಹೀಟ್ ಸ್ಟ್ರೋಕ್ ಪ್ರಕರಣಗಳು ಕಂಡುಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ.
ಈಗಾಗಲೇ ಹೀಟ್‌ವೇವ್‌ಗೆ 2 ಸಾವು
ಮಾರ್ಚ್ 1 ಮತ್ತು ಏಪ್ರಿಲ್ 3ರ ನಡುವೆ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದು ಹೀಟ್ ಸ್ಟ್ರೋಕ್ ಸಂಬಂಧಿತ ಸಾವು ಪ್ರಕರಣಗಳು ವರದಿಯಾಗಿವೆ. ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮಂಡ್ಯದಂತಹ ಜಿಲ್ಲೆಗಳು ಪ್ರಸ್ತುತ ಸೂರ್ಯನ ಶಾಖದಿಂದ ಹೆಚ್ಚು ಬಾಧಿತವಾಗಿವೆ. ಕ್ರಮವಾಗಿ 102, 69, 56 ಮತ್ತು 54 ಶಂಕಿತ ಹೀಟ್ ಸ್ಟ್ರೋಕ್ ಪ್ರಕರಣಗಳು ಈ ಭಾಗಗಳಲ್ಲಿ ವರದಿಯಾಗಿವೆ.
ಐಎಂಡಿ ಮುನ್ಸೂಚನೆ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಬಿಸಿಗಾಳಿ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಾಗರಿಕರಿಗೆ ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹವಾಮಾನ ತಜ್ಞರ ಹೆಲ್ತ್ ಟಿಪ್ಸ್
ಹೀಟ್ ವೇವ್ಸ್ ಅಥವಾ ಶಾಖದ ಅಲೆಯ ಸಮಯದಲ್ಲಿ ಮಾಡಬೇಕಾದದ್ದು ಮತ್ತು ಮಾಡಬಾರದ ಕೆಲಸಗಳ ಕುರಿತು ಹವಾಮಾನ ತಜ್ಞರು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ಹೀಟ್ ವೇವ್ಸ್‌ನಿಂದಾಗಿ ಅತಿಯಾದ ಒತ್ತಡ ಉಂಟಾಗಿ ಇದು ಸಾವಿಗೆ ಕಾರಣವಾಗಬಹುದು.
1.ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ.
2.ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ.
3.ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ.
4.ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಿ.
5.ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ.
6.ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗಿನ ಕೆಲಸ ಮಾಡುವುದನ್ನು ತಪ್ಪಿಸಿ.
7.ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕುಡಿಯಬೇಡಿ.
8.ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ ಮತ್ತು ಹಳೆಯ ಆಹಾರವನ್ನು ಸೇವಿಸಬೇಡಿ.
9.ನೀವು ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿ ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ.
10.ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ
11.ನಿಮಗೆ ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ.
12.ORS, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ. ಇದು ದೇಹವನ್ನು ತಂಪಾಗಿ ಇರಲು ಸಹಾಯ ಮಾಡುತ್ತದೆ.
13. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ.
14. ನಿಮ್ಮ ಮನೆಯನ್ನು ತಂಪಾಗಿ ಇರಿಸಿ, ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ.
15. ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ.
ಸನ್‌ಸ್ಟ್ರೋಕ್ ಚಿಕಿತ್ಸೆಗಾಗಿ ಸಲಹೆಗಳು
-ವ್ಯಕ್ತಿಯನ್ನು ತಂಪಾದ ಸ್ಥಳದಲ್ಲಿ, ನೆರಳಿನ ಕೆಳಗೆ ಇರಿಸಿ. ಒದ್ದೆ ಬಟ್ಟೆಯಿಂದ ಒರೆಸಿ/ಆಗಾಗ ದೇಹವನ್ನು ತೊಳೆಯಿರಿ. ತಲೆಯ ಮೇಲೆ ಸಾಮಾನ್ಯ ತಾಪಮಾನದ ನೀರನ್ನು ಸುರಿಯಿರಿ. ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು ಮುಖ್ಯ ವಿಷಯ.
-ವ್ಯಕ್ತಿಗೆ ORS ಕುಡಿಯಲು ಅಥವಾ ನಿಂಬೆ ಸರಬತ್/ತೋರಣಿ ಅಥವಾ ದೇಹವನ್ನು ಪುನರ್ಜಲೀಕರಣಗೊಳಿಸಲು ಉಪಯುಕ್ತವಾದ ಯಾವುದನ್ನಾದರೂ ನೀಡಿ.
-ತಕ್ಷಣ ವ್ಯಕ್ತಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಏಕೆಂದರೆ ಶಾಖದ ಹೊಡೆತಗಳು ಮಾರಣಾಂತಿಕವಾಗಬಹುದು.
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ವನ್ ಶೋಲ್ಡರ್ ಡ್ರೆಸ್ ಕ್ರೇಜ್!
ರೈತರು/ಕೃಷಿ ಕಾರ್ಮಿಕರು
ಹೊಲದಲ್ಲಿ ಕೆಲಸ ಮಾಡುವವರು ಟೋಪಿ ಅಥವಾ ಛತ್ರಿ ಬಳಸಿ. ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ. ಇನ್ನೂ ಪ್ರಯಾಣಿಸುವಾಗ ನಿಮ್ಮೊಂದಿಗೆ ನೀರನ್ನು ಒಯ್ಯಿರಿ. ಕ್ರೀಡಾಪಟು ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ.