ಹಾಸನ: ವರ್ಷದ ಬಳಿಕ ಬಾಗಿಲು ತೆರೆದ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮ, ಅಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ಭವಿಷ್ಯ ನುಡಿದಿದ್ದಾರೆ. ಹಾಗೇ, ಇತ್ತೀಚೆಗೆ ರಾಣಿಬೆನ್ನೂರಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ನುಡಿಯಲಾದ ‘ಯುವಕ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ’ ಎಂಬ ಭವಿಷ್ಯವನ್ನೂ ವಿಶ್ಲೇಷಿಸಿದ್ದಾರೆ. ಕರ್ನಾಟಕದ ವಿಧಾನಸೌಧದಿಂದ ಹಿಡಿದು ದೆಹಲಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದವರೆಗೆ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.
ಕಾರಣಿಕ ಭವಿಷ್ಯಕ್ಕೆ ಪ್ರತಿಕ್ರಿಯೆ ನೀಡಿದ ಬ್ರಹ್ಮಾಂಡ ಗುರೂಜಿ ‘ಸಣ್ಣ ವಯಸ್ಸಿನವರು (ಯುವಕರು) ಮುಖ್ಯಮಂತ್ರಿ ಆಗುತ್ತಾರೆ ಎಂದರೆ ಸಣ್ಣ ವಯಸ್ಸಿನವರೇ ಸಿಎಂ ಆಗುತ್ತಾರೆ ಎಂದಲ್ಲ. ಸಣ್ಣ ಅನುಭವ ಇರುವವರು ಅಂತ ಅರ್ಥ. ಚಿಕ್ಕ ವಯಸ್ಸಿನವರಿಗೆಲ್ಲ ಮುಖ್ಯಮಂತ್ರಿಯಾಗಲು ಯಾರೂ ಬಿಡುವುದಿಲ್ಲ. ಈಗ ಶನಿಯ ಅಧಿಪತ್ಯವಿದೆ. ಶನಿ ಶೂದ್ರಪ್ರಿಯ. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿದಂತೆ, ಇಲ್ಲಿಯೂ ಕಂಡರೂ ಕಾಣದಂತೆ ಇದ್ದು, ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲದವರನ್ನು ಕರೆತಂದು ಮುಖ್ಯಮಂತ್ರಿ ಮಾಡಬಹುದು. ಮುಂದೆ ಅಧಿಕಾರಕ್ಕೆ ಬರಲಿರುವ ಬೆರಕೆ ಸರ್ಕಾರದಲ್ಲಿ ಯಾರು ಸಿಎಂ ಆಗುತ್ತಾರೆ ಎಂದು ಹೇಳೋದೇ ಕಷ್ಟ’ ಎಂದು ಹೇಳಿದರು.
ರಾಜ್ಯ ಮೂರು ಭಾಗ ಆಗಲಿದೆ !
‘ಬ್ರಹ್ಮಾಂಡ ಗುರೂಜಿ ಇನ್ನೊಂದು ಮಹತ್ವದ ಭವಿಷ್ಯ ಹೇಳಿದ್ದಾರೆ. ‘ನಮಗೆ ಇನ್ನು 31 ವರ್ಷ ಮಾತ್ರ ಹೀಗಿರಲು ಅವಕಾಶ ಇದೆ. 31 ವರ್ಷದ ಬಳಿಕ ಕರ್ನಾಟಕ ಮೂರು ಭಾಗವಾಗುತ್ತದೆ. ಭಾರತ ಇಬ್ಭಾಗವಾಗುತ್ತದೆ. ಕರ್ನಾಟಕ ಮೂರು ಭಾಗವಾಗಿ ಮೂರು ಮುಖ್ಯಮಂತ್ರಿಗಳಾಗುತ್ತಾರೆ, ಮೂವರು ರಾಜ್ಯಪಾಲರೂ ಬರುತ್ತಾರೆ. ಬೆಳಗಾವಿಯೂ ಪ್ರತ್ಯೇಕ ರಾಜ್ಯವಾಗುತ್ತದೆ. ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹ ಹೆಚ್ಚುತ್ತದೆ. ವಿಧಾನಸೌಧವೂ ಮುಳುಗುತ್ತದೆ ಎಂದು ವೀರಪ್ರಮೇಯದಲ್ಲಿ ಬರೆಯಲಾಗಿದೆ. ಹಾಸನಾಂಬೆಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ. ಇದು ಶಿವನಾಣೆ, ದೇವರಾಣೆ ಸತ್ಯ ಎಂದಿದ್ದಾರೆ. ಇನ್ನು ಭಾರತ ಎರಡು ಭಾಗವಾಗಿ ಎರಡು ರಾಷ್ಟ್ರಪತಿಯೂ ಬರುತ್ತಾರೆ’ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ ‘31 ವರ್ಷದಲ್ಲಿ ಹೀಗೆಲ್ಲ ಆಗುತ್ತದೆ ಎಂದು ನಾನು ಹೇಳುತ್ತಿರುವುದಲ್ಲ. ವೀರ ಬ್ರಹ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ದಾರೆ. ಅದರಂತೆ ಇವೆಲ್ಲ ಖಂಡಿತವಾಗಿಯೂ ಸತ್ಯವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.
ಪಾರ್ಲಿಮೆಂಟ್ ಹೀಗೆ ಕಟ್ಟಬಾರದಿತ್ತು !
ಇದೀಗ ಹೊಸದಾಗಿ ಕಟ್ಟುತ್ತಿರುವ ಸಂಸತ್ತು ಸರಿಯಾಗಿಲ್ಲ. ಇದರ ಪರಿಣಾಮ ಘೋರವಾಗಿರುತ್ತದೆ. ಈ ಬಗ್ಗೆ ವೀರ ಬ್ರಹ್ಮ ಸ್ವಾಮಿ ಚರಿತ್ರೆಯಲ್ಲೂ ಉಲ್ಲೇಖವಿದೆ. ಪಾರ್ಲಿಮೆಂಟ್ ಗುಂಡಾಗಿರಬೇಕು, ಚೌಕಾಗಿರಬೇಕು. ಆದರೆ ಇದೀಗ ತ್ರಿಕೋನಾತ್ಮಿಕ ದೀಪಕವಾಗಿದೆ. ಚಂದ್ರ ಇಲ್ಲವೇ ಕುಜನಾಂಶವಾಗಿರದೆ, ತ್ರಿಕೋನಾಕೃತಿ ಮಾಡಿದಾಗ ಅದರ ಪರಿಣಾಮ ಉಗ್ರವಾಗಿರುತ್ತದೆ. ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತವೆ. ಡಿಸೆಂಬರ್ ಅಂತ್ಯಕ್ಕೆ 5 ಗ್ರಹಗಳು ಒಟ್ಟಿಗೆ ಬಂದು, ಅವು ಹಾಗೇ ಒಂಭತ್ತು ತಿಂಗಳು ಕೂರುತ್ತವೆ. ಎರಡು ಗ್ರಹಣಗಳ ಹತ್ತಿರ ಬರಬಾರದು. ಹೀಗಾದಾಗ ನೀರಿನ ಅಭಾವ, ಬೆಂಕಿ ಅವಘಡ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಜಗಳಗಳು ಹೆಚ್ಚಾಗುತ್ತವೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇವಗಢದ ಬೈದ್ಯನಾಥನ ದರ್ಶನ ಮಾಡಿದ ಪ್ರಧಾನಿ ಮೋದಿ, ಏನೀ ಕಾರಣಿಕ ದೇಗುಲದ ವಿಶೇಷ?