ಬೆಂಗಳೂರು: ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ರೈಲು (Vande Bharat) ಅತಿಶೀಘ್ರದಲ್ಲೇ ಬರಲಿದೆ. 2023ರ ಮಾರ್ಚ್ ತಿಂಗಳೊಳಗೆ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಸಂಚಾರ ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಶುಕ್ರವಾರ ಘೋಷಿಸಿದ್ದಾರೆ.
ಕೇಂದ್ರ ಸಚಿವೆ ದರ್ಶನಾ ಜರ್ದೋಶ್ ಶುಕ್ರವಾರ ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ವಂದೇ ಭಾರತ್ ರೈಲು ಸಂಚಾರವನ್ನು ಶೀಘ್ರದಲ್ಲೇ ಕರ್ನಾಟಕದಲ್ಲಿ ಪ್ರಾರಂಭಿಸುವ ಭರವಸೆ ನೀಡಿದ್ದಾರೆ. ಹಾಗೇ, ‘ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ವೇಗವನ್ನು ಇನ್ನಷ್ಟು ತ್ವರಿತಗೊಳಿಸಬೇಕು ಮತ್ತು ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕು ಎಂದೂ ಈ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು, ಕೇಂದ್ರ ಸಚಿವೆಯನ್ನು ಒತ್ತಾಯಿಸಿದರು.
ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲು ಅತ್ಯಂತ ವೇಗವಾಗಿ ಚಲಿಸಬಲ್ಲ, ಸ್ವಯಂ ಚಾಲಿತ ಎಂಜಿನ್ ಹೊಂದಿರುವ ಟ್ರೇನ್. 2019ರಿಂದ ಭಾರತದ ಎರಡು ಪ್ರಮುಖ ಮಾರ್ಗಗಳಲ್ಲಿ ಮಾತ್ರ ಸಂಚಾರ ಮಾಡುತ್ತಿದೆ. ಒಂದು ರೈಲು ದೆಹಲಿಯಿಂದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮಧ್ಯೆ ಹಾಗೂ ಮತ್ತೊಂದು ರೈಲು ದೆಹಲಿ-ವಾರಣಾಸಿ ನಡುವೆ ಸಂಚಾರ ಮಾಡುತ್ತಿದೆ. ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸಬಲ್ಲ ವಂದೇ ಭಾರತ್ ಇತ್ತೀಚೆಗೆ, ಕೇವಲ 52 ಸೆಕೆಂಡ್ಗಳಲ್ಲಿ 100 ಕಿಮೀ ದೂರ ಕ್ರಮಿಸುವ ಮೂಲಕ ಜಪಾನ್ ನಿರ್ಮಿತ ಬುಲೆಟ್ ಟ್ರೇನ್ನ್ನೂ ಮೀರಿಸಿದೆ. ಈ ಬುಲೆಟ್ ರೈಲು 55ಸೆಕೆಂಡ್ಗಳಲ್ಲಿ 100 ಕಿಮೀ ವೇಗದಲ್ಲಿ ಚಲಿಸಿ ದಾಖಲೆ ಮಾಡಿತ್ತು. ಅದನ್ನು ವಂದೇ ಭಾರತ್ ಮೀರಿದೆ.
ಇದನ್ನೂ ಓದಿ: Hydrogen Rail | ಮುಂದಿನ ವರ್ಷ ಭಾರತದಲ್ಲಿ ಓಡಲಿದೆ ಹೈಡ್ರೋಜನ್ ರೈಲು!