ಮಂಗಳೂರು: ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷದಿಂದ ಕಠಿಣ ತರಬೇತಿ ಪಡೆದ ಕರ್ನಾಟಕದ ಕುವರ, ಬೆಳ್ತಂಗಡಿಯ ಸಾತ್ವಿಕ ಕುಳಮರ್ವ ಭಾರತೀಯ ಸೇನಾಪಡೆಯ ತಾಂತ್ರಿಕ ವಿಭಾಗದ ಲೆಪ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ. ಕಳೆದ ಶುಕ್ರವಾರ ಡೆಹ್ರಾಡೂನ್‌ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್‌ನಲ್ಲಿ ಪಾಲ್ಗೊಂಡ 288 ಯುವ ಯೋಧರಲ್ಲಿ ಸಾತ್ವಿಕ ಕುಳಮರ್ವ ಅವರೂ ಒಬ್ಬರು.
ʼಬಾಲ್ಯದಿಂದಲೂ ನನಗೆ ಸೇನೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಈಗ ಭಾರತೀಯ ಸೇನೆ ಸೇರಿದ್ದರಿಂದ ನನ್ನ ಕನಸು ನನಸಾಗಿದೆʼʼ ಎನ್ನುತ್ತಾರೆ ಸಾತ್ವಿಕ ಕುಳಮರ್ವ. ತಮ್ಮ ಮಗ ಭಾರತೀಯ ಸೇನೆಯ ಉನ್ನತ ಹುದ್ದೆ ಪಡೆದಿರುವ ಬಗ್ಗೆ ತಂದೆ ಗಣಪತಿ ಭಟ್ ಮತ್ತು ತಾಯಿ ವಸಂತಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಕೋರ್ಟ್‌ನಲ್ಲಿ ಮಳಲಿ ಮಸೀದಿ-ಮಂದಿರ ಫೈಟ್
ಈ ಪಾಸಿಂಗ್ ಔಟ್ ಪರೇಡ್ ಬಳಿಕ ಹೊಸದಾಗಿ ನೇಮಕಗೊಂಡಿರುವ ಎಲ್ಲ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸಾತ್ವಿಕ ಕುಳಮರ್ವ ಜಮ್ಮುವಿನ ಸಾತ್ವಾರಿಯಲ್ಲಿ 26 ಐಡಿಎಸ್‌ಆರ್ (ಇನ್‌ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್)ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಎಲ್ಲ ಕೆಡೆಟ್‌ಗಳಿಗೆ ಮೂರು ವಾರಗಳ ವಿಶ್ರಾಂತಿ ನೀಡಲಾಗಿದ್ದು, ಆ ಬಳಿಕ ನಿಯೋಜಿತ ಹುದ್ದೆಗಳಲ್ಲಿ ಮತ್ತು ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.
ಪಾಸಿಂಗ್ ಔಟ್ ಪರೇಡ್‌ನಲ್ಲಿ ಪಾಲ್ಗೊಳ್ಳಲು ಎಲ್ಲ ಯೋಧರ ಹೆತ್ತವರು ಮತ್ತು ಕುಟುಂಬದ ಸದಸ್ಯರಿಗೆ ಅವಕಾಶ ನೀಡಲಾಗಿತ್ತು. ತಮ್ಮ ಮಕ್ಕಳು ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಾಗಿಟ್ಟ ಆ ಕ್ಷಣ ಎಲ್ಲ ಹೆತ್ತವರಿಗೂ ಹೃದಯಸ್ಪರ್ಶಿಯಾಗಿತ್ತು.
ವಿದೇಶದಲ್ಲಿ ಓದು, ಸ್ವದೇಶದಲ್ಲಿ ಸೇವೆ
ಸಾತ್ವಿಕ ಕುಳಮರ್ವ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ. ವಸಂತಿ ದಂಪತಿಯ ಪುತ್ರ. ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರಾಗಿರುವ ಸಾತ್ವಿಕ ಕುಳಮರ್ವ ಭಾರತೀಯ ಸೇನಾಪಡೆಯ ಟೆಲಿ ಕಮ್ಯುನಿಕೇಶನ್ ವಿಭಾಗದಲ್ಲಿ ಲೆಪ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ 24-ಎಸ್‌ಎಸ್‌ಬಿ (ಸರ್ವಿಸ್ ಸೆಲೆಕ್ಷನ್ ಬೋರ್ಡ್)ನ ಟಿಜಿಸಿ-133 (ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್) ಮೂಲಕ ಭಾರತೀಯ ಸೇನೆಯ ಕಾಯಂ ಹುದ್ದೆಗೆ ಆಯ್ಕೆಯಾಗಿದ್ದಾರೆ. ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿದ್ದು, ಎಂಎಸ್ ಪದವಿಯನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಡೆದಿದ್ದಾರೆ. ಅಮೆರಿಕದ ಅರಿಝೋನಾ ಸ್ಟೇಟ್ ಯುನಿವರ್ಸಿಟಿ(ಎಎಸ್‌ಯು)ಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ ಅಲ್ಲೇ ಉತ್ತಮ ಉದ್ಯೋಗಕ್ಕೆ ಸೇರಿದ್ದರು. ಅದನ್ನು ತೊರೆದು ಸ್ವದೇಶಕ್ಕೆ ಆಗಮಿಸಿದ್ದ ಸಾತ್ವಿಕ್‌ಗೆ ಇದೀಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ.
ಇದನ್ನೂ ಓದಿ | ಹಿಜಾಬ್‌ಗೆ ಅವಕಾಶವಿಲ್ಲದಿದ್ದರೆ ಕಾಲೇಜೇ ಬೇಡವೆಂದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿನಿಯರು