Site icon Vistara News

Karnataka Budget 2024 : ಗ್ಯಾರಂಟಿ ಭಾರದ ನಡುವೆ ಬಜೆಟ್‌; ಹೇಗಿದೆ ರಾಜ್ಯದ ಆರ್ಥಿಕ ಸ್ಥಿತಿಗತಿ?

Karnataka Budget 2024 siddaramaiah DK Shivakumar

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ 2024-25ನೇ ಸಾಲಿನ ರಾಜ್ಯ ಆಯವ್ಯಯ (Karnataka Budget 2024) ಮಂಡನೆ ಮಾಡಲಿದ್ದಾರೆ. ಇದು ಸಿದ್ದರಾಮಯ್ಯ ಅವರು ಹಣಕಾಸು ಮಂತ್ರಿಯಾಗಿ (Finance Minister) ಮಂಡಿಸುತ್ತಿರುವ ದಾಖಲೆಯ 15ನೇ ಬಜೆಟ್‌ ಆಗಿದ್ದು, ಎಲ್ಲರ ಕಣ್ಣು ಅದರ ಮೇಲೆ ನೆಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ (Congress Guarantee) ಯೋಜನೆಗಳಿಂದಾಗಿ ಆರ್ಥಿಕ ಪರಿಸ್ಥಿತಿ (Financial situation) ಸಂಕಷ್ಟದಲ್ಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗಿರುವಾಗ ಸಿದ್ದರಾಮಯ್ಯ ಅವರು ಹೇಗೆ ಬಜೆಟ್‌ ಹೊಂದಾಣಿಕೆ ಮಾಡುತ್ತಾರೆ? ನಿಜಕ್ಕೂ ರಾಜ್ಯಕ್ಕೆ ಆರ್ಥಿಕ ಆಪತ್ತು ಎದುರಾಗಿದೆಯಾ? ಹೇಗಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ? ಈ ಬಗ್ಗೆ ಒಂದು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

2023-24ನೇ ಸಾಲಿನ ಮೊದಲ ಬಜೆಟ್‌ ಮಂಡನೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು. ಅದರ ಗಾತ್ರ 3,09,182 ಕೋಟಿ. ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಪತನಗೊಂಡು ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಜುಲೈ ತಿಂಗಳಲ್ಲಿ ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ ಅವರು ಹೊಸದಾಗಿ ಬಜೆಟ್‌ ಮಂಡನೆ ಮಾಡಿದ್ದರು. ಅವರು ಮಂಡಿಸಿದ ಬಜೆಟ್‌ನ ಗಾತ್ರ 3,27,747 ಕೋಟಿ ರೂ.

Karnataka Budget 2024 : ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಬೇಕಾಗಿದೆ

2023-24ನೇ ಸಾಲಿನಲ್ಲಿ ಮಂಡನೆಯಾದ ಕಾಂಗ್ರೆಸ್‌ ಸರ್ಕಾರದ ಬಜೆಟ್‌ನಲ್ಲಿ ಸುಮಾರು 39 ಸಾವಿರ ಕೋಟಿ ರೂ. ಮೊತ್ತವನ್ನು ಪಂಚ ಗ್ಯಾರಂಟಿಗೆ ಮೀಸಲು ಇಡಲಾಗಿತ್ತು. ಆಗ ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ವಿದ್ಯುತ್‌ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಗಳು ಮಾತ್ರ ಇದ್ದವು. ಯುವನಿಧಿ ಇನ್ನೂ ಆರಂಭವಾಗಿರಲಿಲ್ಲ. ಆಗ 2023ರ ಆಗಸ್ಟ್‌ನಿಂದ 2024ರ ಮಾರ್ಚ್‌ವರೆಗೆ ಎಂಟು ತಿಂಗಳ ಮಟ್ಟಿಗೆ ಮಾತ್ರ ಹಣಕಾಸು ಮೀಸಲು ಇಟ್ಟಿದ್ದರೆ ಸಾಕಿತ್ತು. ಆದರೆ ಹೊಸದಾಗಿ ಮಂಡಿಸಬೇಕಾಗಿರುವ ಬಜೆಟ್‌ನಲ್ಲಿ ಯುವನಿಧಿಯೂ ಸೇರಿದಂತೆ ಎಲ್ಲಾ ಐದು ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಇಡೀ ವರ್ಷಕ್ಕೆ ಹಣಕಾಸು ನಿಗದಿ ಮಾಡಬೇಕಾಗಿದೆ. ಅಂದರೆ ಸುಮಾರು 60 ಸಾವಿರ ಕೋಟಿ ರೂ.ಯನ್ನು ಈ ಕಾರಣಕ್ಕಾಗಿಯೇ ಮೀಸಲು ಇಡಬೇಕಾಗಿದೆ. ಈ ಕಾರಣಕ್ಕಾಗಿ ಬಜೆಟ್‌ ಗಾತ್ರವನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಬೇಕಾಗಿದೆ. ಇನ್ನು ವೇತನ, ಬಡ್ಡಿ, ಪಿಂಚಣಿ, ಸಹಾಯಧನ ಒಳಗೊಂಡ ಬದ್ಧತಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಲಿದೆ.

2023-24ನೇ ಸಾಲಿನ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಮೊತ್ತ

Karnataka budget 2024

Karnataka Budget 2024 : ಹಾಗಿದ್ದರೆ ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿ ಹೇಗಿದೆ?

ಗುರಿ ತಲುಪದ ರಾಜಸ್ವ ತೆರಿಗೆ ಸಂಗ್ರಹ, ಬಂಡವಾಳ ವೆಚ್ಚ ಕುಸಿತ

ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ರಾಜಸ್ವ ತೆರಿಗೆ ಸಂಗ್ರಹ ಅದರ ಹಿಂದಿನ ವರ್ಷಕ್ಕಿಂತ ಶೇ. 12ರಷ್ಟು ಹೆಚ್ಚಾಗಿದೆ. ಈ ವರ್ಷ ಸುಮಾರು 1.31 ಲಕ್ಷ ಕೋಟಿ ರೂ. ರಾಜಸ್ವ ಸಂಗ್ರಹ ಆಗಿದೆ. ಆದರೆ, ಬಜೆಟ್‌ ಗುರಿ 1.72 ಲಕ್ಷ ಕೋಟಿ ರೂ. ಆಗಿದೆ. ಇದನ್ನು ಸಾಧಿಸುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ವರ್ಷಾಂತ್ಯಕ್ಕೆ ಗುರಿಗಿಂತ ಸುಮಾರು 10000 ಕೋಟಿ ರೂ. ಕಡಿಮೆಯಾಗುವ ಲೆಕ್ಕಾಚಾರವಿದೆ.

2023-24ನೇ ಸಾಲಿನಲ್ಲಿ 54,373 ಕೋಟಿ ರೂ. ಬಂಡವಾಳ ವೆಚ್ಚ ಅಂದಾಜು ಮಾಡಲಾಗಿತ್ತು. ಆದರೆ, ರಾಜಸ್ವ ವೆಚ್ಚದಲ್ಲಿ ಏರಿಕೆಯಾಗಿದ್ದರಿಂದ ಅಭಿವೃದ್ಧಿ ಕೆಲಸಗಳಿಗಾಗಿನ ಬಂಡವಾಳ ವೆಚ್ಚ ಕುಸಿತ ಕಂಡಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಮಾಡಿರುವ ಬಂಡವಾಳ ವೆಚ್ಚ ಕೇವಲ 22,662 ಕೋಟಿ ರೂ. ಕಳೆದ ಬಾರಿ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 27ರಷ್ಟು ಕಡಿಮೆ.

ಇದನ್ನೂ ಓದಿ: Karnataka Budget Session 2024: ರೈತರ ಆತ್ಮಹತ್ಯೆ ಕಡಿಮೆ ಎಂದು ಸುಳ್ಳು ಹೇಳಿದ ಸರ್ಕಾರ: ಬಿ.ವೈ. ವಿಜಯೇಂದ್ರ ಕಿಡಿ

ವೆಚ್ಚ ಹೆಚ್ಚು, ಜಮೆ ಕಡಿಮೆ

2023-24 ವರ್ಷದ ಮೂರು ತ್ರೈಮಾಸಿಕಗಳಲ್ಲಿ ಅಂದರೆ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ವೆಚ್ಚವಾಗಿರುವ ಒಟ್ಟು ಮೊತ್ತ 1,82,380 ಕೋಟಿ ರೂ.. ಅದೇ ಜಮೆಯಾಗಿರುವ ಮೊತ್ತ ಕೇವಲ 1,61,540 ಕೋಟಿ ರೂ. ಅಂದರೆ ಸುಮಾರು 20,840 ಕೋಟಿ ರೂ. ಕೊರತೆ ಉಂಟಾಗಿದೆ.

ಬರ ಪರಿಸ್ಥಿತಿ ನಿರ್ವಹಣೆಗೆ ಅನುದಾನ ಬೇಡಿಕೆ

ಇದೆಲ್ಲದಕ್ಕಿಂತ ಈ ಬಾರಿಯ ಬಜೆಟ್‌ನಲ್ಲಿ ಬರ ನಿರ್ವಹಣೆಗಾಗಿ ಹೆಚ್ಚಿನ ಅನುದಾನ ಮೀಸಲು ಇಡಬೇಕಾದ ದೊಡ್ಡ ಅನಿವಾರ್ಯತೆ ಎದುರಾಗಿದೆ. ಮುಂದಿನ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಇದಕ್ಕೆ ದೊಡ್ಡ ಮೊತ್ತದ ಅನಿವಾರ್ಯತೆ ಇದೆ. ರಾಜ್ಯದ 223 ತಾಲೂಕುಗಳಲ್ಲಿ ಬರಕ್ಕೆ ತುತ್ತಾಗಿದೆ. ಬರದಿಂದ ಅಂದಾಜು ಸುಮಾರು 35,162 ಕೋಟಿ ರೂ. ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಎನ್​ಡಿಆರ್​ಎಫ್ ನಡಿ 18,171.44 ಕೋಟಿ ರೂ. ಬರ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. ಆದರೆ, ಇನ್ನೂ ಕೇಂದ್ರದ ಹಣ ಬಂದಿಲ್ಲ.

ಬಡ್ಡಿ, ನೌಕರರ ವೇತನ, ಸಹಾಯಧನಕ್ಕೆ ಭಾರಿ ಮೊತ್ತ ಬೇಕು

2024-25ರ ಬಜೆಟ್‌ನಲ್ಲಿ ಬಡ್ಡಿ ಪಾವತಿಗಾಗಿ ಸುಮಾರು 37,400 ಕೋಟಿ ರೂ.‌ ಬೇಕಾಗಲಿದೆ.
ಸರ್ಕಾರಿ ನೌಕರರ ವೇತನಕ್ಕಾಗಿ ಸುಮಾರು 80,000 ಕೋಟಿ ರೂ.ಗೂ ಅಧಿಕ ಹಣ ಬೇಕು.
ಪಿಂಚಣಿ ವೆಚ್ಚ ಸುಮಾರು 30,000 ಕೋಟಿ ರೂ. ದಾಟಲಿದೆ.
ಸಹಾಯಧನಕ್ಕಾಗಿ ಸುಮಾರು 32,406 ಕೋಟಿ ರೂ. ವೆಚ್ಚವಾಗಲಿದೆ.

ಇದೆಲ್ಲವನ್ನೂ ಸಮದೂಗಿಸಿಕೊಂಡು ಮುಂದುವರಿದರೂ ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಒಂದಿಷ್ಟು ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ಅನಿವಾರ್ಯತೆಯೂ ಸಿದ್ದರಾಮಯ್ಯ ಅವರಿಗಿದೆ.

Exit mobile version