Site icon Vistara News

Karnataka Budget 2024: ಇದೊಂದು ಅಭಿವೃದ್ಧಿ ಪರ ಬಜೆಟ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Laxmi Hebbalkar

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಹಾಗೂ ರಚನಾತ್ಮಕ ಬಜೆಟ್ ಮಂಡಿಸಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲಾ ವರ್ಗದವರಿಗೆ ಸಲ್ಲುವ ಬಜೆಟ್ ಇದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ರಾಜ್ಯ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇಲಾಖೆಯ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಮಕ್ಕಳ ಉದ್ದೇಶಿತ ಯೋಜನೆಗಳಿಗೆ ಬಜೆಟ್‌ನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.

ಇದನ್ನೂ ಓದಿ | Karnataka Budget 2024: ಬಜೆಟ್‌ನಲ್ಲೂ ಸಾರಿಗೆಗೆ ‘ಶಕ್ತಿ’ ನೀಡಿದ ಸಿದ್ದರಾಮಯ್ಯ; ಏನೆಲ್ಲ ಸಿಕ್ಕಿದೆ?

ಪ್ರಸಕ್ತ ಸಾಲಿನಲ್ಲಿ ಇಲಾಖೆ ನಿರೀಕ್ಷಿಸಿದಷ್ಟು ಬಜೆಟ್‌ ದಕ್ಕಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿಗೆ ಈ ಸಾಲಿನಲ್ಲಿ 28,608 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮಹಿಳೆಯರಿಗೆ ಈ ಯೋಜನೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ ಫೋನ್‌ಗಳಿಗೆ 90 ಕೋಟಿ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಮೇಲ್ವಿಚಾರಕಿಯರ ಬಹುದಿನಗಳ ಬೇಡಿಕೆಯಾಗಿದ್ದ ಸ್ಮಾರ್ಟ್ ಫೋನ್‌ಗಾಗಿ 90 ಕೋಟಿ ರೂಪಾಯಿ ನೀಡಲಾಗಿದೆ. 90 ಕೋಟಿ ರೂ. ವೆಚ್ಚದಲ್ಲಿ 75,938 ಫೋನ್‌ಗಳನ್ನು ನೀಡಲಾಗುತ್ತಿದ್ದು, ಇದರಿಂದ ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳ್ಳಲಿದೆ. ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುವುದು. ಒಟ್ಟಾರೆ ಇದೊಂದು ಅತ್ಯಂತ ಸಮತೋಲಿತ, ಅಭಿವೃದ್ಧಿ ಪರ ಬಜೆಟ್ ಎಂದು ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ.

ಇದನ್ನೂ ಓದಿ | Karnataka Budget 2024: ಏಳನೇ ವೇತನ ಆಯೋಗ ಶಿಫಾರಸು ಜಾರಿ; ಸರ್ಕಾರಿ ನೌಕರರಿಗೆ ಸಿಎಂ ಸಿಹಿ ಸುದ್ದಿ

ಉಡುಪಿ, ಬೆಳಗಾವಿಗೂ ಹೆಚ್ಚಿನ ಅನುದಾನ

ನನ್ನ ತವರು ಜಿಲ್ಲೆ ಬೆಳಗಾವಿ ಹಾಗೂ ಉಸ್ತುವಾರಿ ಹೊತ್ತಿರುವ ಉಡುಪಿ ಜಿಲ್ಲೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

Exit mobile version