ಬೆಂಗಳೂರು: ಕನ್ನಡ ನಾಮಫಲಕ ಜಾಗೃತಿ ಆಂದೋಲನದ ಭಾಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ (Karave Protest) ನಡೆಸಲಾಯಿತು. ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಅಳವಡಿಕೆಗೆ ಒತ್ತಾಯಿಸಿದ ಕರವೇ ಕಾರ್ಯಕರ್ತರು, ಹಲವೆಡೆ ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದು, ಧ್ವಂಸ ಮಾಡಿ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರ ನೇತೃತ್ವದಲ್ಲಿ ವಿಮಾನ ನಿಲ್ದಾಣ ಬಳಿಯ ಸಾದಹಳ್ಳಿ ಗೇಟ್‌ನಿಂದ ಕಬ್ಬನ್ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಾದಹಳ್ಳಿ ಗೇಟ್ ಬಳಿಯೇ ಟಿ.ಎ. ನಾರಾಯಣ ಗೌಡರು ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಇದರಿಂದ ಕಾರ್ಯಕರ್ತರ ಆಕ್ರೋಶ ಭುಗಿಲೇಳಲು ಕಾರಣವಾಯಿತು. ಇದೇ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು, ಶಾಂತಿಯುತ ಜಾಥಾ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ನಮ್ಮನ್ನು ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Kolar News: ಮುಂದಿನ ಸಭೆವರೆಗೆ ಅರಣ್ಯ ಭೂಮಿ ಒತ್ತುವರಿ ತೆರವು ಬೇಡ: ಸಿಎಂ ಸಿದ್ದರಾಮಯ್ಯ
ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ಹಾಕಲಾಗಿದ್ದ, ಲೈಟಿಂಗ್ ಬೋರ್ಡ್ ಅನ್ನು ಕಾರ್ಯಕರ್ತರು ಧ್ವಂಸಗೊಳಿಸಿ ಅಕ್ರೋಶ ಹೊರಹಾಕಿದರು. ಅದೇ ರೀತಿ ಸಹಕಾರ ನಗರ ಬಳಿಯ ಮಾಲ್ ಆಫ್ ಏಷ್ಯಾ ಬಳಿ ಸಹ ಕರವೇ ಅಸಮಾಧಾನ ಸ್ಫೋಟಗೊಂಡಿತ್ತು. ಒತ್ತಾಯಕ್ಕೆ ಮಣಿದು ಕೊನೆಗೂ ಕನ್ನಡ ನಾಮಫಲಕ ಅಳವಡಿಸಲಾಗಿದ್ದು, ಒಳಗಡೆ ಸಹ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ತದನಂತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಕೆ.ಆರ್ ಪುರಂ, ಯಲಹಂಕ, ಚಿಕ್ಕಜಾಲ, ಹುಣಸಮಾರನಹಳ್ಳಿ, ಬಾಗಲೂರು ಗೇಟ್, ಹೆಬ್ಬಾಳ, ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿ ಪ್ರಮುಖ ರಸ್ತೆಗಳಲ್ಲಿ ಮಳಿಗೆಗಳತ್ತ ಕಲ್ಲು ತೂರಿ, ಇಂಗ್ಲಿಷ್ ನಾಮಫಲಕ, ಲೈಟಿಂಗ್ ಬೋರ್ಡ್‌ಗಳನ್ನು ಕಾರ್ಯಕರ್ತರು ಕಿತ್ತೆಸೆದರು. ಈ ವೇಳೆ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ಹಲವೆಡೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇನ್ನು ನಗರದ ಹಲವೆಡೆ ಕರವೇ ಮೆರವಣಿಗೆಯಿಂದ ಸಂಚಾರ ದಟ್ಟಣೆ ಉಂಟಾಯಿತು.
ಉಗ್ರ ಹೋರಾಟದ ಮೂಲಕ ಪರಭಾಷಿಕ ಉದ್ಯಮಿ ಮತ್ತು ವ್ಯಾಪಾರಸ್ಥರಿಗೆ ಕರವೇ ಬಿಸಿ ಮುಟ್ಟಿಸಿದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಪ್ರತಿಕ್ರಿಯಿಸಿ, ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ | ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಕೊನೇ ದಿನ; ಗಡುವು ಮೀರಿದರೆ ಶಿಸ್ತು ಕ್ರಮ
ಒಟ್ಟಾರೆಯಾಗಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡದೆ ನಿರ್ಲಕ್ಷ್ಯ ತೋರಿದ್ದ ಮಂದಿಗೆ ಕರವೇ ಬಿಸಿ ಮುಟ್ಟಿಸಿದೆ. ಇನ್ನು ಬಿಬಿಎಂಪಿ ಸಹ ತನ್ನ ವ್ಯಾಪ್ತಿಯಲ್ಲಿ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಸಂಬಂಧ ಸಭೆ ನಡೆಸಿದ್ದು, 15 ದಿನದೊಳಗೆ ಸರ್ವೆ ಕಾರ್ಯ ನಡೆಸಿ ನಿರ್ಲಕ್ಷ್ಯ ತೋರಿದವರಿಗೆ ನೋಟಿಸ್ ನೀಡಲು ನಿರ್ಧರಿಸಿದೆ. ಅಲ್ಲದೆ ಫೆಬ್ರವರಿ 28ರೊಳಗಾಗಿ ಬೋರ್ಡ್‌ಗಳನ್ನು ಕನ್ನಡಮಯ ಮಾಡುವುದಾಗಿ ಕರವೇಗೆ ಭರವಸೆ ನೀಡಿದೆ.