ಕಾರವಾರ: ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನು ಜ. 21 ರಿಂದ 29 ರವರೆಗೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಸಿಂಧಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದರು.
ಈಗಾಗಲೇ ಮೊದಲ ಹಂತದಲ್ಲಿ ಜ. 2ರಿಂದ 12 ರವರೆಗೆ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಅದರ ಮುಂದುವರಿದ ಭಾಗವಾಗಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತು ಕರಪತ್ರಗಳನ್ನು ಮನೆ ಮನೆಗೆ ಹಂಚುವ ಕಾರ್ಯವನ್ನು ಮಾಡಲಾಗುವುದು. ಈ ಮೂಲಕ ಸರ್ಕಾರದ ಸಾಧನೆಗಳು, ಯೋಜನೆಗಳು, ಕೈಗೊಂಡಿರುವ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ. ಜನಸಾಮಾನ್ಯರಿಗೆ ತಲುಪಬೇಕಾದಂತಹ ಯೋಜನೆಗಳ ಕುರಿತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ತಳಮಟ್ಟದಿಂದ ಜನರಿಗೆ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವಂತಹ ಪೇಂಟಿಂಗ್, ಪಕ್ಷದ ಸ್ಟಿಕ್ಕರ್‌ಗಳನ್ನು ಮನೆಗಳಿಗೆ, ವಾಹನ ಚಾಲಕರಿಗೆ ತಲುಪಿಸುವುದರೊಂದಿಗೆ ಸದಸ್ಯತ್ವ ಅಭಿಯಾನವನ್ನು ನಡೆಸುವುದು ಇದರ ಭಾಗವಾಗಿದೆ ಎಂದರು.
ಈ ಬಾರಿ ಜ. 29ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಬೂತ್ ಮಟ್ಟದಿಂದ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಒಟ್ಟಿಗೆ ಕುಳಿತು ಆಲಿಸಲಿದ್ದು ಶೇ. 90ರಷ್ಟು ಬೂತ್‌ಗಳು ಒಟ್ಟಿಗೆ ಆಲಿಸುವುದರೊಂದಿಗೆ ದಾಖಲೆ ಮಾಡಲಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | Honda Amaze | ಇನ್ನು ಮುಂದೆ ಹೋಂಡಾ ಅಮೇಜ್ನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರುವುದಿಲ್ಲ; ಕಾರಣವೇನು?