ಕಾರವಾರ: ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಬೈಕ್ ಸವಾರನೊಬ್ಬ ಕೆಎಸ್ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮನಬಂದಂತೆ ಥಳಿಸಿ, ಹಲ್ಲೆ ನಡೆಸಿದ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕಾಸರಕೋಡು ಟೊಂಕಾ ಬಳಿ ನಡೆದಿದೆ. ಬಸ್ ಚಾಲಕ ಕೃಷ್ಣ ನಾಯ್ಕ, ನಿರ್ವಾಹಕ ಮರಿಯಪ್ಪ ಹಲ್ಲೆಗೆ ಒಳಗಾದವರು ಎನ್ನಲಾಗಿದ್ದು, ಹಲ್ಲೆ ನಡೆಸಿದವನ ಕುರಿತು ಮಾಹಿತಿ ತಿಳಿದುಬಂದಿಲ್ಲ.
ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಕೆಎಸ್ಆರ್‌ಟಿಸಿ ಬಸ್ ಭಟ್ಕಳಕ್ಕೆ ಹೊರಟಿತ್ತು. ಈ ವೇಳೆ ಕಾಸರಕೋಡು ಬಳಿ ಪ್ರಯಾಣಿಕರು ಇಳಿಯಬೇಕಾಗಿದ್ದರಿಂದ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಓವರ್ ಟೇಕ್ ಮಾಡಲು ಮುಂದಾಗಿದ್ದ. ಬಸ್ ಏಕಾಏಕಿ ನಿಲ್ಲಿಸಿದ್ದರಿಂದ ಕೋಪಗೊಂಡ ಬೈಕ್ ಸವಾರ ಬಸ್ ಅನ್ನು ಅಡ್ಡಗಟ್ಟಿದ್ದಾನೆ. ಕೊನೆ ಬಸ್ ಹತ್ತಿ ಚಾಲಕ ಹಾಗೂ ನಿರ್ವಾಹಕನ ಮೇಲೆರಗಿದ್ದಾನೆ. ಇಬ್ಬರನ್ನೂ ಬಸ್‌ನಿಂದ ಹೊರಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪ್ರಯಾಣಿಕರೊಬ್ಬರು ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಚಾಲಕ ಕೃಷ್ಣ ನಾಯ್ಕ ಮೇಲೆ ಹಲ್ಲೆ ನಡೆಸುತ್ತಿರುವಾಗ ನಿರ್ವಾಹಕ ಮರಿಯಪ್ಪ ಆತನನ್ನು ತಡೆಯಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ ಆತ ಸುಮ್ಮನಾಗದೇ ಹಲ್ಲೆ ನಡೆಸಿದ್ದಾನೆ. ಕರ್ತವ್ಯದಲ್ಲಿದ್ದ ಚಾಲಕ ಮತ್ತು ನಿರ್ವಾಹಕನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಹಲ್ಲೆ ಮಾಡಿದಾತನ ವಿರುದ್ಧ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಇದುವರೆಗೂ ಪೊಲೀಸರಿಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ.
ಇದನ್ನೂ ಓದಿ | Rishabh pant | ಉರಿಯುವ ಕಾರಿನ ಪಕ್ಕದಲ್ಲೇ ಮಲಗಿದ್ದರು ರಿಷಭ್ ಪಂತ್; ವಿಡಿಯೊ ವೈರಲ್