ಕಾರವಾರ: ಒಂದೆರಡು ಸದಸ್ಯರಿರುವ ಮನೆಯಲ್ಲಿ ಗೊಂದಲಗಳು ಇರುವುದಿಲ್ಲ. ಆದರೆ, ದೊಡ್ಡ ಕುಟುಂಬದಲ್ಲಿ ಸಣ್ಣ, ಸಣ್ಣ ಚರ್ಚೆಗಳು ಇರುವುದು ಸಹಜ. ಈ ನಿಟ್ಟಿನಲ್ಲಿ ಯಾರಿಗೆ, ಎಲ್ಲಿ, ಏನು ಹೇಳಬೇಕೋ ಅದನ್ನು ನಮ್ಮ ಹಿರಿಯರು ಹೇಳಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬಿಜೆಪಿ ಮುಖಂಡರು, ಶಾಸಕರೇ ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿರುವ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಗುಡುಗು, ಸಿಡಿಲು ಇರುತ್ತದೆ. ಕೊನೆಗೆ ತೊಪ್ಪನೆ ಮಳೆಯೂ ಬರುತ್ತದೆ. ಇದೆಲ್ಲ ರೂಢಿ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಯಾರಿಗೆ, ಎಲ್ಲಿ, ಏನು ಹೇಳಬೇಕೋ ಅದನ್ನು ನಮ್ಮ ಹಿರಿಯರು ಹೇಳಿದ್ದಾರೆ. ಪಕ್ಷದಲ್ಲಿ ಎಲ್ಲರೂ ಇಡೀ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಗೆಲುವಿನ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಗೆದ್ದೇ ಗೆಲ್ಲುತ್ತೇವೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಸರಿಯಾಗತ್ತದೆ, ಸರಿ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು 2ಡಿ ಮೀಸಲಾತಿ ಸೇರ್ಪಡೆ ವಿಚಾರವಾಗಿ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಸಮುದಾಯಗಳು ತಮಗೆ ಮೀಸಲಾತಿ ನೀಡುವಂತೆ ಕೇಳುವುದು ಅವರ ಹಕ್ಕು, ಅದನ್ನು ಯಾರೂ ಪ್ರಶ್ನಿಸಿಲ್ಲ. ಆದರೆ, ಅವರ ಬೇಡಿಕೆ, ಭಾವನೆಗಳನ್ನು ಅರ್ಥ ಮಾಡಿಕೊಂಡು ಹಿಂದುಳಿದ ವರ್ಗಗಳ ಆಯೋಗ 2ಡಿ ಎನ್ನುವ ಹೊಸ ಕಲ್ಪನೆಯನ್ನು ನೀಡಿದೆ. ಒಕ್ಕಲಿಗರು, ವೀರಶೈವ ಲಿಂಗಾಯತರನ್ನು 2ಡಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಗಳು ಕೇಳಿಬಂದಿವೆ. ಹೀಗಾಗಿ 2ಡಿಯೊಂದಿಗೆ ಮತ್ತೊಂದು ಯೋಜನೆಯನ್ನು ಮಾಡಿ, ಆ ನಿಯಮಗಳಡಿ ಸೇರ್ಪಡೆಗೆ ಸಾಧ್ಯತೆಗಳ ಕುರಿತು ಪರಿಶೀಲನೆಗೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದೆ. ಇದರ ಅನ್ವಯ ಪರಿಶೀಲಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಸ್ವಾಮೀಜಿಗಳು, ರಾಜಕಾರಣಿಗಳು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಅಂತಿಮವಾಗಿ ಸರ್ಕಾರ ಸರಿಯಾದ ಸಮಯಕ್ಕೆ ಎಲ್ಲರೂ ಒಪ್ಪುವಂತಹ ನಿರ್ಧಾರವನ್ನು ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ | BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಸಾಕ್ಷ್ಯಚಿತ್ರ, ಕೇಂದ್ರ ಆಕ್ರೋಶ, ಯುಟ್ಯೂಬ್‌ನಿಂದ ಡಿಲೀಟ್
ರಾಜ್ಯದ ಜನರು ಸಂಕಷ್ಟದಲ್ಲಿದ್ದಾಗ ಆಗಮಿಸದ ಪ್ರಧಾನಿ ಮೋದಿ, ಚುನಾವಣೆ ಹಿನ್ನೆಲೆಯಲ್ಲಿ ಆಗಮಿಸಿದ್ದಾರೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ್, ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ಯವರು ಚುನಾವಣೆ ಸಮಯದಲ್ಲಿ ಬಿಜೆಪಿಯನ್ನು ಹೊಗಳುವುದು ಸಾಧ್ಯವಿದೆಯೇ? ಅದನ್ನು ನಾವು ನಿರೀಕ್ಷೆ ಮಾಡುವುದೂ ಸಾಧ್ಯವಿಲ್ಲ. ಹಾಗಾಗಿ ಸಣ್ಣ ಪುಟ್ಟ ಟೀಕೆಗಳನ್ನು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯ ಎಂದರು.
ವಿರೋಧ ಪಕ್ಷದಲ್ಲಿರುವಾಗ ಟೀಕೆ ಮಾಡುವುದು, ಸರ್ಕಾರದ ಕಿವಿ ಹಿಂಡುವ, ಸರ್ಕಾರದ ಮೇಲೆ ಆರೋಪ ಮಾಡುವ ಸಂಪ್ರದಾಯಗಳಿವೆ. ಅದನ್ನಷ್ಟೇ ಅವರು ಮಾಡುತ್ತಿದ್ದಾರೆ. ಹಾಗಾಗಿ ಇದಕ್ಕೆ ಗಂಭೀರವಾದ ಅರ್ಥ ಕಲ್ಪಿಸಬೇಕಾಗಿಲ್ಲ. ನಗುಮೊಗದಿಂದ ಅವರ ಟೀಕೆಗಳನ್ನು ಸ್ವಾಗತ ಮಾಡುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Lakhimpur Kheri violence | ಅಪರಾಧ ಸಾಬೀತಾಗದೇ ಆರೋಪಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿಡುವಂತಿಲ್ಲ: ಸುಪ್ರೀಂ ಕೋರ್ಟ್