ಕಾರವಾರ: ದಾಖಲೆ ಇಲ್ಲದೇ ಹಣ (Unaccounted Money) ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ವಿಕಾಸ್ ಧೋಕಲೆ ಹಣ ಸಾಗಾಟ ಮಾಡುತ್ತಿದ್ದ ಆರೋಪಿ. ಆರೋಪಿ ವಿಕಾಸ್ ಫೆ. 5ರ ರಾತ್ರಿ ಸುಮಾರು 8.40ರ ವೇಳೆಗೆ ಮಡಗಾಂವ್‌ನಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ತಪಾಸಣೆಗಾಗಿ ಬಂದ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ವಿಕಾಸನ ಬಳಿ ದೊಡ್ಡದಾದ ಬ್ಯಾಗೊಂದನ್ನು ಕಂಡಿದ್ದಾರೆ. ಬ್ಯಾಗಿನಲ್ಲಿ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದ ವೇಳೆ ಅವರಿಗೆ ಸರಿಯಾಗಿ ಉತ್ತರ ನೀಡದೆ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾನೆ.
ಇದನ್ನೂ ಓದಿ: Sidharth Kiara Wedding: ಶುರುವಾಯ್ತು ಕಿಯಾರಾ-ಸಿದ್ಧಾರ್ಥ್ ಮಧುವೆಯ ಸಂಭ್ರಮ: ಫೋಟೊಗಳು ಇಲ್ಲಿವೆ!
ಈ ಹಿನ್ನೆಲೆಯಲ್ಲಿ ಸಂಶಯಗೊಂಡ ರೈಲ್ವೆ ಪೊಲೀಸರು ಬ್ಯಾಗನ್ನು ಪರಿಶೀಲನೆಗಾಗಿ ತೆರೆದಾಗ ಬರೋಬ್ಬರಿ 20,09,720 ಲಕ್ಷ ರೂ. ಪತ್ತೆಯಾಗಿದೆ. ಹಣದ ಕುರಿತು ವಿಚಾರಿಸಿದ ವೇಳೆ ದಾಖಲೆ ನೀಡುವಲ್ಲಿ ವಿಕಾಸ್ ವಿಫಲನಾಗಿದ್ದು ಹಣವನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಹೀಗಾಗಿ ರೈಲ್ವೆ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಉಡುಪಿಯಲ್ಲಿ ರೈಲಿನಿಂದ ಕೆಳಗಿಳಿಸಿ ಬಳಿಕ ಇನ್ನೊಂದು ರೈಲಿನ ಮೂಲಕ ವಾಪಸ್ ಕಾರವಾರಕ್ಕೆ ಕರೆತಂದಿದ್ದಾರೆ.
ಬಳಿಕ ಆರೋಪಿ ಸಹಿತ ಪ್ರಕರಣವನ್ನು ಗ್ರಾಮೀಣ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಹಣದ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Viral Video : ಯುವಕರೂ ನಾಚುವಂತೆ ನೀರಿಗೆ ಡೈವ್ ಹೊಡೆದ ಅಜ್ಜಿ; ವೈರಲ್ ಆಯ್ತು ವಿಡಿಯೊ