ಬೆಂಗಳೂರು: ಕೆಎಎಸ್ ಪೂರ್ವಭಾವಿ ಪರೀಕ್ಷೆ (KAS Prelims Exam) ಮುಂದೂಡುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಅಭ್ಯರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ತರಾತುರಿಯಲ್ಲಿ ಆ.27ಕ್ಕೆ ಪರೀಕ್ಷೆಯನ್ನು ಕೆಪಿಎಸ್‌ಸಿ ನಿಗದಿ ಮಾಡಿದೆ. ಇದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಿದ್ದು, ಪೂರ್ವಭಾವಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದಕ್ಕೆ ಹಾಕಲು ಆಗೋದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಕೆಎಎಸ್ ಪರೀಕ್ಷೆ ಗೊಂದಲದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಪರೀಕ್ಷೆಯಲ್ಲಿ ಗೊಂದಲ ಏನೂ ಇಲ್ಲ. ಎಕ್ಸಾಂ ಮುಂದಕ್ಕೆ ಹಾಕಬೇಕು ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ, ನಾವು ಮುಂದಕ್ಕೆ ಹಾಕಲು ಆಗೋದಿಲ್ಲ. ಒಂದು ಪೇಪರ್ ಮಾತ್ರ ಕೃಷ್ಣ ಜನ್ಮಾಷ್ಠಮಿ ದಿನ ಇದೆ. ಅದನ್ನು ಮುಂದಕ್ಕೆ ಹಾಕುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಭ್ಯರ್ಥಿಗಳ ಬೇಡಿಕೆ ಏನು?
ಮಂಗಳವಾರ ಪರೀಕ್ಷೆ ನಡೆಯುವುದರಿಂದ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜೆ ಸಿಗುವುದಿಲ್ಲ. ಅಲ್ಲದೇ ಅಭ್ಯರ್ಥಿಗಳಿರುವ ಸ್ಥಳದಿಂದ 200, 300 ಕಿ.ಮೀ. ದೂರದ ನಗರಗಳಲ್ಲಿ ಪರೀಕ್ಷಾ ಕೇಂದ್ರ ಹಾಕಿದ್ದಾರೆ. ಇದರಿಂದ ದೂರದ ಊರುಗಳ ಅಭ್ಯರ್ಥಿಗಳು ಒಂದು ದಿನ ಮೊದಲೇ ಪ್ರಯಾಣ ಬೆಳೆಸಬೇಕು. ಇನ್ನು ಮಂಗಳವಾರ ರಜೆ ಇಲ್ಲದ ಕಾರಣ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರೈಟರ್ ಸಿಗುವುದಿಲ್ಲ. ಹೀಗಾಗಿ ರಜೆ ದಿನಗಳನ್ನು ನೋಡಿಕೊಂಡು ಪರೀಕ್ಷೆಗೆ ದಿನಾಂಕ ನಿಗದಿ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸಾರ್ವತ್ರಿಕ ರಜೆ ಘೋಷಣೆ
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಆ.27ರಂದು ಪರೀಕ್ಷೆಗೆ ಅನುವಾಗುವ 214 ಸರ್ಕಾರಿ, 189 ಅನುದಾನಿತ ಮತ್ತು 161 ಶಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ, ಒಟ್ಟಾರೆ 564 ಪರೀಕ್ಷಾ ಉಪ ಕೇಂದ್ರಗಳಿಗೆ, ಅನ್ವಯಿಸಿದಂತೆ ಒಂದು ದಿನದ ವಿಶೇಷ/ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಮುಂದುವರಿದು ಪರೀಕ್ಷಾ ಉಪ ಕೇಂದ್ರಗಳಲ್ಲಿ ಆ.27ರಂದು ಯಾವುದೇ ಶೈಕ್ಷಣಿಕ ಪರೀಕ್ಷೆಗಳು ಹಾಗೂ ಇನ್ನಿತರೆ ಪೂರ್ವನಿರ್ಧರಿತ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ ಸೂಕ್ತ ಕ್ರಮಕೈಗೊಂಡು ಪ್ರಸಕ್ತ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಅಡಚಣೆಯಾಗದಿರುವುದನ್ನು ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು/ಆಡಳಿತ ಮಂಡಳಿಯು ಖಾತರಿ ಪಡಿಸಿಕೊಳ್ಳಬೇಕು. ಇನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರೀಕ್ಷೆಗೆ ಯಾವುದೇ ಅಡಚಣೆ ಉಂಟಾಗದಂತೆ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಲಾಗಿದೆ.
ಇನ್ನು ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ, ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸೇವಾ ನಿರತ ಅಭ್ಯರ್ಥಿಗಳಿಗೆ, ಪರೀಕ್ಷಾ ಪ್ರವೇಶ ಪತ್ರವನ್ನು ರಜಾ ಮಂಜೂರು ಮಾಡುವ ಸಂಬಂಧಿತ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಒದಗಿಸಿ, ಷರತ್ತಿಗೊಳಪಟ್ಟು ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲು ತಿಳಿಸಲಾಗಿದೆ.
Bus Fare Hike: ಶೀಘ್ರದಲ್ಲೇ ಏರಲಿದೆ ಬಸ್ ಟಿಕೆಟ್ ದರ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ!
ಹಾಲ್ ಟಿಕೆಟ್ ಬಿಡುಗಡೆ
ಆ.27 ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಪ್ರವೇಶ ಪತ್ರವನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.