ಧಾರವಾಡ: ದೇಶ ಸ್ವಾತಂತ್ರ್ಯ ಪಡೆದ ಮೇಲೆ ಹೊಸ ಸಂಸತ್ ಭವನ (New Parliament Building) ಉದ್ಘಾಟನೆಯಾಗಿದ್ದು, ಇದು ಭಾರತವೇ ಹೆಮ್ಮೆ ಪಡುವಂತಹ ವಿಷಯ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನೂತನ ಸಂಸತ್ ಭವನ ಉದ್ಘಾಟನೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಹೋದರು. ಆಗ ಅಧಿಕಾರ ಹಸ್ತಾಂತರ ಮಾಡುವಾಗ ನಂದಿ ಲಾಂಛನವುಳ್ಳ ಸುವರ್ಣ ದಂಡವನ್ನು ಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಅದು ಈಗ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಅದು ಯಾರಿಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿರಬೇಕು. ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ “ಅಹಂ ಅದಂಡಹ್ಯ” ಎನ್ನುತ್ತಿದ್ದನು. ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎಂಬುವುದು ಈ ಪದದ ಅರ್ಥ. ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು. ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು. ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು. ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು. ಅಂತಹ ಒಂದು ಧರ್ಮ ದಂಡ ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ, ಇದು ಶುಭ ಸಂಕೇತ ಎಂದು ಹೇಳಿದರು.
ಇದನ್ನೂ ಓದಿ | New Parliament Building: ಪಂಚಾಯ್ತಿಯಿಂದ ಸಂಸತ್ತಿನ ತನಕ ಒಂದೇ ನಿಷ್ಠೆ; 9 ವರ್ಷದ ಸಾಧನೆಗಳಿಂದಲೇ ಹೆಚ್ಚು ಖುಷಿ ಎಂದ ಮೋದಿ
ಕಾಶಿ ಪೀಠ ಮಾತ್ರವಲ್ಲ, ಇಡೀ ವಿಶ್ವವೇ ಹೆಮ್ಮೆ ಪಡುವ ನಾಯಕ ಪ್ರಧಾನಿ ನರೇಂದ್ರ ಮೋದಿ. ಈಗಾಗಲೇ ಅವರು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಆಗಿದೆ. ಮಹಾಕಾಳೇಶ್ವರ ಮಂದಿರ ಜೀರ್ಣೋದ್ಧಾರ ಆಗಿದೆ. ಅಯೋಧ್ಯೆ ರಾಮಮಂದಿರ ಜೀರ್ಣೋದ್ಧಾರ ಆಗುತ್ತಿದೆ. ಇದೆಲ್ಲವೂ ದೇಶದ ಹಿತದೃಷ್ಟಿಯಿಂದ ಆಗುತ್ತಿವೆ ಎಂದು ತಿಳಿಸಿದರು.
ನಮ್ಮ ಲೋಕಾಸಭಾ ಕ್ಷೇತ್ರದಿಂದ (ವಾರಾಣಸಿ) ಪ್ರಧಾನಿ ನರೇಂದ್ರ ಮೋದಿಯವರು ಚುನಾಯಿತರಾಗಿದ್ದರು. ಅವರು ನಮ್ಮ ಗುರುಕುಲದ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಸಿದ್ಧಾಂತ ಶಿಖಾಮಣಿ ಬಿಡುಗಡೆ ಮಾಡಿ, ಸನಾತನ ವೀರಶೈವ ಧರ್ಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಶ್ರೀಗಳು ತಿಳಿಸಿದರು.
ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆಯಬೇಕಿತ್ತು: ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಬೆಳಗಾವಿಯಲ್ಲಿ ಸುವರ್ಣ ಸೌಧ ಉದ್ಘಾಟನೆ ಮಾಡುವ ಅವಕಾಶ ನನಗೆ ಬಂದಿತ್ತು. ಆದರೆ, ನಾನು ರಾಷ್ಟಪತಿ ಪ್ರಣಬ್ ಮುಖರ್ಜಿ ಅವರನ್ನು ಕರೆದಿದ್ದೆ. ರಾಷ್ಟಪತಿಗಳನ್ನು ಕರೆಯಬೇಕು ಎಂಬುದು ಸರಿಯಾಗಿದೆ. ಹೀಗಾಗಿ ನೂತನ ಸಂಸತ್ ಭವನ ಉದ್ಘಾಟನೆಗೆ ಕೇಂದ್ರ ಸರ್ಕಾರ ರಾಷ್ಟಪತಿಗಳನ್ನು ಕರೆಯಬೇಕಿತ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನನ್ನ ಸೋಲಿಗೆ ಕಾರಣವಾದ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಯಾವುದೇ ಚರ್ಚೆ ಆಗಿಲ್ಲ. ಸವದಿ ಹಾಗೂ ನನಗೂ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಆಗಿಲ್ಲ. ಬಿಜೆಪಿಯಲ್ಲಿ ಈಗ ಪಕ್ಷ ಕಟ್ಟುವಂತಹವರು ಯಾರಿದ್ದಾರೆ? ಬಿಜೆಪಿಯನ್ನು ಈ ಪರಿಸ್ಥಿತಿಗೆ ತರಲು ಕಾರಣರಾದವರು ಈಗ ಎಲ್ಲಿದ್ದಾರೆ? ಇನ್ನೂ ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ್‌ಗೆ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ | Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್
ಯಾರು ಬಂದಿದ್ದಾರೆ, ಯಾರು ಬಂದಿಲ್ಲ ಎಂಬುವುದು ನಮಗೆ ಸಂಬಂಧ ಇಲ್ಲ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ 25ಕ್ಕೂ ಹೆಚ್ಚು ಪಕ್ಷಗಳು ಬಂದಿವೆ. ಯಾರು ಬಂದಿದ್ದಾರೆ ಯಾರು ಬಂದಿಲ್ಲ, ನಮಗೆ ಸಂಬಂಧ ಇಲ್ಲ. ನಮ್ಮ ಗುರಿಯನ್ನು ಹಿಡಿದುಕೊಂಡು ಹೊರಟಿದ್ದೇವೆ. ವಿಶ್ವದ ಜನ ನರೇಂದ್ರ ಮೋದಿ ಅವರ ಗುರಿಗಳ ತಾತ್ಸಾರ ಮಾಡುತ್ತಿದ್ದರು. ಇಂದು ಅವರ ಕಾಲಿಗೆ ವಿಶ್ವದ ಪ್ರಮುಖ ನಾಯಕರು ಬೀಳುತ್ತಿದ್ದಾರೆ. ಇದು ನಮಗೆ ಹೆಮ್ಮೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.