Site icon Vistara News

Kasturirangan Report | ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಪ್ರತಿ ಹಳ್ಳಿಯ ಸಮೀಕ್ಷೆ; ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ನವ ದೆಹಲಿ: ಕಸ್ತೂರಿರಂಗನ್ ವರದಿಯಲ್ಲಿರುವ (Kasturirangan Report) ಪ್ರತಿ ಹಳ್ಳಿಗೂ ಭೇಟಿ ನೀಡಿ ಸಮೀಕ್ಷೆ ಮಾಡಿಯೇ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದೆ. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಸ್ಯಾಟಲೈಟ್ ಚಿತ್ರಗಳ ಆಧಾರದಲ್ಲಿ ವರದಿಯನ್ನು ನೀಡಿತ್ತು. ಇದನ್ನು  ಪರಿಸರ ಸಚಿವರ ಗಮನಕ್ಕೆ ತರಲಾಗಿದ್ದು, ಪ್ರತಿ ಗ್ರಾಮಕ್ಕೆ ನೇರವಾಗಿ ಹೋಗಿ ಸರ್ವೆ ಮಾಡಬೇಕು ಎಂದು ನಾವು ಮನವಿ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭೂಪೇಂದ್ರ ಯಾದವ್ ಅವರ ಮುಂದಾಳತ್ವದಲ್ಲಿ ಒಂದು ತೀರ್ಮಾನಕ್ಕೆ ಬಂದಿದ್ದು, ಪರಿಸರ ಸೂಕ್ಷ್ಮ ಪ್ರದೇಶದವನ್ನು ಗುರುತಿಸಲು ಪ್ರತಿ ಹಳ್ಳಿಗೂ ತಜ್ಞರ ಸಮಿತಿ ಕಳುಹಿಸಿ, ಸಮೀಕ್ಷೆ ನಡೆಸಿಯೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.

ಈಗಾಗಲೇ ವರದಿಯ ಪರಿಶೀಲನೆಗಾಗಿ ತಜ್ಞರ ತಂಡ ರಚಿಸಲಾಗಿದ್ದು, ರಾಜ್ಯದ ಎಲ್ಲ ಭಾಗಗಳ ಹಳ್ಳಿಗಳಿಗೂ ಹೋಗಿ ಸಮೀಕ್ಷೆ ನಡೆಸಲಿದೆ. ಅಂತೆಯೇ ಕೇರಳ,ತಮಿಳುನಾಡು ಮಹಾರಾಷ್ಟ್ರ,ಕರ್ನಾಟಕ,ಗೋವಾ ರಾಜ್ಯಗಳ ಹಳ್ಳಿಗಳಿಗೂ ಹೋಗಲಿದೆ. ಒಂದು ವರ್ಷದ ಒಳಗೆ ವರದಿಯನ್ನು ತಯಾರು ಮಾಡಲಿದೆ ಎಂದು ತಿಳಿಸಿದರು.

ಸದ್ಯ ವರದಿ ಜಾರಿಗೆ ತಾತ್ಕಾಲಿತ ತಡೆ ನೀಡಲಾಗಿದೆ ಎಂದಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್‌, ವಸ್ತುಸ್ಥಿತಿ ಅಧ್ಯಯನಕ್ಕೆ ಐಎಫ್‌ಎಸ್‌ ಅಧಿಕಾರಿ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯು ಪಶ್ಚಿಮಘಟ್ಟ ಪ್ರದೇಶದಲ್ಲಿ ವಸ್ತುಸ್ಥಿತಿಯನ್ನು ಅಧ್ಯಯನ ನಡೆಸಿ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ. ಆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಹೀಗಾಗಿ ಮಲೆನಾಡಿಗರ ಆತಂಕ ದೂರವಾಗಿದೆ.

ಇದನ್ನೂ ಓದಿ| ಒಂದು ವರ್ಷ ಕಸ್ತೂರಿ ರಂಗನ್‌ ವರದಿಗೆ ಬ್ರೇಕ್‌: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು

Exit mobile version