Site icon Vistara News

Kasturirangan Report : ಕಸ್ತೂರಿ ರಂಗನ್‌ ವರದಿ ಜಾರಿಗೆ ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಅಧಿಸೂಚನೆ; ಕೇಂದ್ರದ ನಿರ್ಧಾರ

central govt considers separate final notifications for states

kasturi rangan

ಬೆಂಗಳೂರು: ಕಸ್ತೂರಿ ರಂಗನ್‌ ವರದಿ (Kasturirangan Report) ಜಾರಿಗೆ ಸಂಬಂಧಿಸಿದಂತೆ ಇದುವರೆಗೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿ, ಅಂತಿಮ ಅಧಿಸೂಚನೆ ಪ್ರಕಟಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಈಗ ಪ್ರತಿ ರಾಜ್ಯಕ್ಕೂ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲು ನಿರ್ಧರಿಸಿದೆ.

ಇತ್ತೀಚೆಗೆ ನಡೆದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಅಲ್ಲದೆ, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಕೇರಳಕ್ಕೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಇಡುಕ್ಕಿ ಸಂಸದ ಡೀನ್ ಕುರಿಯಕ್ಕೋಸ್ ತಿಳಿಸಿದ್ದಾರೆ.

ಪರಿಸರದ ಅತ್ಯಂತ ಸೂಕ್ಷ್ಮ ಪ್ರದೇಶವನ್ನು ಗುರುತಿಸುವಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಿ, ಒಮ್ಮತದ ತೀರ್ಮಾನಕ್ಕೆ ಬಂದು, ಅಂತಿಮ ಅಧಿಸೂಚನೆ ಪ್ರಕಟಿಸುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಜ್ಯಗಳು ವಿರೋಧಿಸುತ್ತಿದ್ದರೂ 2014 ರಿಂದ ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ʼಸರ್ಕಸ್‌ʼ ಮಾಡುತ್ತಲೇ ಬಂದಿದೆ. ಈ ವರದಿಯನ್ನು ಜಾರಿಗೆ ತರಲೇಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತಲೇ ಬಂದಿದ್ದು, ಹಲವು ಬಾರಿ ಚೀಮಾರಿ ಹಾಕಿದೆ. ಅಲ್ಲದೆ ಸಂಸದೀಯ ಸಮಿತಿ ಕೂಡ ಕೂಡಲೇ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದೆ. ಹೀಗಾಗಿ ಆದಷ್ಟು ಬೇಗ ಅಂತಿಮ ಅಧಿಸೂಚನೆ ಹೊರಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೇಗಾದರೂ ಮಾಡಿ, ಕಸ್ತೂರಿ ರಂಗನ್‌ ವರದಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದುಕೊಂಡು ಇದಕ್ಕೆ ಇರುವ ಆಕ್ಷೇಪಣೆಗಳ ಬಗ್ಗೆ ಪುನರ್‌ ಪರಿಶೀಲಿಸಲು ಕಳೆದ ಏಪ್ರಿಲ್‌ನಲ್ಲಿಯೇ ಕೇಂದ್ರ ಸರ್ಕಾರ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ಕಾಲಾವಧಿಯು ಮುಂದಿನ ತಿಂಗಳ ಅಂದರೆ ಮೇ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಆದರೆ ಒಮ್ಮತದ ಪರಿಹಾರವೊಂದನ್ನು ಕಂಡುಕೊಳ್ಳಲು ಈ ಸಮಿತಿಗೆ ಇನ್ನೂ ಸಾಧ್ಯವಾಗಿಲ್ಲ.

ಹೊಸ ಸರ್ಕಾರಕ್ಕೆ ಸವಾಲಾಗಲಿದೆ!
ಕಸ್ತೂರಿ ರಂಗನ್‌ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿರುವ ಪಶ್ಚಿಮಘಟ್ಟದ ಅತಿ ಹೆಚ್ಚು ಭಾಗ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದ 56,825 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಈಗ ವಿಧಾಸಭಾ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲು ಕೇಂದ್ರದಿಂದ ಸಾಧ್ಯವಾಗದು. ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲು ಕೇಂದ್ರ ಅರಣ್ಯ ಇಲಾಖೆ ಮುಂದಾಗಲಿದ್ದು, ಆಗ ರಾಜ್ಯ ಸರ್ಕಾರವು ಪರಿಸರ ಸೂಕ್ಷ್ಮ ಪ್ರದೇಶವನ್ನು ನಿಖರವಾಗಿ ಗುರುತಿಸುವ ಮತ್ತು ಜನವಸತಿ ಪ್ರದೇಶಕ್ಕೆ ತೊಂದರೆ ಯಾಗದಂತೆ ಈ ಅಧಿಸೂಚನೆ ಹೊರಡುವಂತೆ ನೋಡಿಕೊಳ್ಳುವ ಸವಾಲನ್ನು ಎದುರಿಸಬೇಕಾಗುತ್ತದೆ.

ಕಸ್ತೂರಿ ರಂಗನ್‌ ವರದಿಯನ್ನು ಕರ್ನಾಟಕ ಸಂಪೂರ್ಣವಾಗಿ ತಿರಸ್ಕರಿಸುವ ತೀರ್ಮಾನ ತೆಗೆದುಕೊಂಡಿದೆ. ಹೀಗಾಗಿ ಸಂಜಯ್‌ ಕುಮಾರ್‌ ನೇತೃತ್ವದ ಸಮಿತಿಗೆ ಯಾವುದೇ ಮಾಹಿತಿಯನ್ನು, ವರದಿಯನ್ನು ರಾಜ್ಯ ಸರ್ಕಾರ ನೀಡಿಲ್ಲ. ಕೇರಳ ಹೊರತು ಪಡಿಸಿ ಬೇರೆ ರಾಜ್ಯಗಳೂ ಇದೇ ರೀತಿಯಾಗಿ ನಡೆದುಕೊಂಡಿವೆ ಎಂದು ಹೇಳಲಾಗಿದ್ದು, ಹೀಗಾಗಿಯೇ ಈ ಸಮಿತಿಗೆ ಅಂತಿಮ ವರದಿ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಪ್ರತಿ ರಾಜ್ಯಕ್ಕೊಂದು ಅಧಿಸೂಚನೆ ಹೊರಡಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Kasturirangan Report: ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ಮಾರಕ; ಜಾರಿಯಾದರೆ ರಕ್ತಪಾತ: ಆರಗ ಜ್ಞಾನೇಂದ್ರ

Exit mobile version