ಬೆಂಗಳೂರು: ಮತ್ತೆ ರಾಜ್ಯಕ್ಕೆ ಕಸ್ತೂರಿ ರಂಗನ್ ವರದಿಯ (Kasturirangan Report) ಕಿರಿಕಿರಿ ಶುರುವಾಗಿದೆ. ರಾಜ್ಯದ ವಿರೋಧದ ನಡುವೆಯೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮೊತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದ ಪಶ್ಚಿಮಘಟ್ಟದ ತಪ್ಪಲಿನ ಜನತೆ ಮತ್ತೆ ಆತಂಕಕ್ಕೊಳಗಾಗಿದ್ದಾರೆ.
ಎಲ್ಲ ರಾಜ್ಯಗಳಲ್ಲಿಯೂ ಈ ವರದಿಯನ್ನು ಏಕರೂಪದಲ್ಲಿ ಜಾರಿಗೆ ತರುವುದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿರುವುದರ ನಡುವೆಯೇ ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶದ ಒಟ್ಟು ೫೬.೮೨೫ ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು (ಇಎಸ್‌ಎ) ಗುರುತಿಸಿ ಈ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯದ ಪ್ರದೇಶವೇ ಹೆಚ್ಚು
ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಭಾಗವು ಕರ್ನಾಟಕದಲ್ಲಿಯೇ ಹೆಚ್ಚಿದೆ. ೨೦,೬೬೮ ಚದರ ಕಿ.ಮೀ. ಪ್ರದೇಶ ರಾಜ್ಯದಲ್ಲಿದ್ದು, ೧೭,೩೪೦ ಚದರ ಕಿ.ಮೀ.ಪ್ರದೇಶವನ್ನು ಹೊಂದಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ರಾಜ್ಯದ ಒಟ್ಟು ೧,೫೭೨ ಗ್ರಾಮಗಳನ್ನು ಈ ಪರಿಸರ ಸೂಕ್ಷ್ಮ ಪ್ರದೇಶ ಒಳಗೊಂಡಿದ್ದು, ಇಲ್ಲಿ ವಿಧಿಸಲಾಗುವ ನಿರ್ಬಂಧಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿವೆ. ಕಳೆದ ಎಂಟು ವರ್ಷಗಳಿಂದ ಜನರು ಈ ವರದಿಯನ್ನು ವಿರೋಧಿಸಿಕೊಂಡೇ ಬಂದಿದ್ದಾರೆ.
೧೯೮೬ರ ಪರಿಸರ ಸಂರಕ್ಷಣಾ ಕಾಯ್ದೆಯಡಿ ಜುಲೈ ೬ರಂದೇ ಈ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ೬೦ ದಿನ ಕಾಲಾವಕಾಶ ನೀಡಲಾಗಿದೆ. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ನಂತರ ಅಧಿಕೃತ ಅಧಿಸೂಚನೆ ಹೊರಡಿಸಲಾಗುತ್ತದೆ.
ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರುವಂತೆ ಕೇಂದ್ರಕ್ಕೆ ಸೂಚಿಸಲು ಒತ್ತಾಯಿಸಿ ಗೋವಾ ಫೌಂಡೇಷನ್ ರಾಷ್ಟ್ರೀಯ ಹಸಿರು ಪೀಠದ (ಎನ್‌ಜಿಟಿ) ಮೆಟ್ಟಿಲೇರಿತ್ತು. ಕಳೆದ ಜನವರಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ಎನ್‌ಜಿಟಿ ಮುಂದಿನ ಆರು ತಿಂಗಳ ಒಳಗೆ ಅಧಿಸೂಚನೆ ಪ್ರಕಟಿಸುವಂತೆ ಕಟ್ಟು ನಿಟ್ಟಿನ ಆದೇಶ ನೀಡಿತ್ತು. ಈ ಗಡುವು ಜುಲೈ ೩೦ಕ್ಕೆ ಕೊನೆಗೊಳ್ಳಲಿರುವುದರಿಂದ ಈಗ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ರೀತಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸುತ್ತಿರುವುದು ಇದು ಐದನೇ ಬಾರಿ! ೨೦೧೪ರ ಆಗಸ್ಟ್ ೨೭ರಂದೇ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಇದನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ.
ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ರಾಜ್ಯ ಸರ್ಕಾರವು ಈ ವರದಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ. ವಿಧಾನಸಭೆಯಲ್ಲಿಯೇ ಈ ವರದಿಯ ಜಾರಿಯನ್ನು ವಿರೋಧಿಸುವ ನಿರ್ಣಯ ಅಂಗೀಕರಿಸಲಾಗಿದೆ. ಪರಿಸರ ಉಳಿಸೋಣ, ಅದರೆ ಈ ಭಾಗದ ಅಭಿವೃದ್ಧಿಗೆ ಅಡ್ಡಿ ಪಡಿಸುವುದು ಬೇಡ ಎಂಬ ನಿಲುವು ರಾಜ್ಯಸರ್ಕಾರದ್ದಾಗಿದೆ. ಹೀಗಾಗಿ ಏಕರೂಪದ ವರದಿ ಬೇಡ, ಈಗಿರುವ ವರದಿಯು ಜನವಿರೋಧಿಯಾಗಿರುವುದರಿಂದ ಇದೇ ಸ್ವರೂಪದಲ್ಲಿ ಜಾರಿಗೆ ತರಬಾರದು ಎಂದು ರಾಜ್ಯ ಸರ್ಕಾರದ ಒತ್ತಾಯಿಸುತ್ತಲೇ ಬಂದಿದ್ದು, ಈ ಬಗ್ಗೆ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಆದರೆ ಕೇಂದ್ರ ಸರ್ಕಾರ ರಾಜ್ಯದ ಯಾವ ಆಕ್ಷೇಪಣೆಗಳನ್ನೂ ಪರಿಗಣಿಸಿಲ್ಲ. ೨೦೧೩ರಲ್ಲಿ ಸಲ್ಲಿಕೆಯಾದ ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಿದ ಜಾಗವನ್ನೇ, ಒಂದಿಂಚೂ ಕಡಿಮೆ ಮಾಡದೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಈಗ ಕರಡು ಅಧಿಸೂಚನೆ ಹೊರಡಿಸಿದೆ.
ರಾಜ್ಯ ಸರ್ಕಾರ ಈಗೇನು ಮಾಡುತ್ತೆ?
ಈಗಲೂ ರಾಜ್ಯ ಸರ್ಕಾರ ಈ ವರದಿಯನ್ನು ವಿರೋಧಿಸುವ ನಿಲುವಿಗೆ ಬದ್ಧವಾಗಿದೆ. ವರದಿ ಜಾರಿ ಕುರಿತಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ಕರೆದಿದ್ದ ಸಭೆಯಲ್ಲಿಯೂ ರಾಜ್ಯ ತನ್ನ ಈ ಹಿಂದಿನ ನಿಲುವನ್ನೇ ಪುನುರುಚ್ಛರಿಸಿ ಬಂದಿತ್ತು. ಈಗ ಕರಡು ಅಧಿಸೂಚನೆ ಹೊರಡಿಸಿರುವುದರಿಂದ ಕಾನೂನು ಇಲಾಖೆಯ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಅರಣ್ಯ ಸಚಿವರು ನಿರ್ಧರಿಸಿದ್ದಾರೆ. ಈ ಕುರಿತು ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುವ ಕುರಿತೂ ತೀರ್ಮಾನಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಗ್ರಾಮ?
ರಾಜ್ಯದ ಒಟ್ಟು ೧,೫೭೨ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿತ್ತು. ಅದರಲ್ಲಿ ಉತ್ತರ ಕನ್ನಡದ ೬೪೦, ಶಿವಮೊಗ್ಗದ ೪೭೫, ಚಿಕ್ಕಮಗಳೂರಿನ ೧೪೨ ಗ್ರಾಮಗಳಿವೆ. ಇವಲ್ಲದೆ, ಬೆಳಗಾವಿಯ ೬೩, ಕೊಡಗಿನ ೫೫, ಮೈಸೂರಿನ ೫೬, ಚಾಮರಾಜನಗರದ ೨೧, ದಕ್ಷಿಣ ಕನ್ನಡದ ೪೮, ಹಾಸನದ ೩೫ ಮತ್ತು ಉಡುಪಿಯ ೩೭ ಗ್ರಾಮಗಳು ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ.
ಯಾವೆಲ್ಲಾ ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿವೆ; ಪಟ್ಟಿ ಇಲ್ಲಿದೆ ನೋಡಿ;
ಇದನ್ನೂ ಓದಿ| ಅರಣ್ಯ ಒತ್ತುವರಿ ಕುರಿತ 42,422 ಅರ್ಜಿಗಳ ವಿಲೇ ಬಾಕಿ: ಪಶ್ಚಿಮಘಟ್ಟ ಕಾರ್ಯಪಡೆ ಸಭೆಯಲ್ಲಿ ಮಾಹಿತಿ