ರಾಮಸ್ವಾಮಿ ಹುಲಕೋಡು
ಮುಂಬಯಿಯಲ್ಲಿ ಖಗೋಳ ವಿಜ್ಞಾನ ಓದಿ, ಅಹ್ಮದಾಬಾದ್‌ನಲ್ಲಿ ತಾರಾಲೋಕದ ತಜ್ಞರೆನಿಸಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ನೇತೃತ್ವ ವಹಿಸಿ, ದೇಶದ ಬಾಹ್ಯಾಕಾಶ ಯೋಜನೆಗಳಿಗೆ ರೆಕ್ಕೆಪುಕ್ಕ ಕಟ್ಟಿ, ‘ಚಂದ್ರಯಾನ’ದ ಮೂಲಕ ಚಂದ್ರನಲ್ಲಿಯೂ ನೀರ ಪಸೆ ಇದೆ ಎಂದು ಪತ್ತೆ ಹಚ್ಚಿ, ದೇಶದ ನೂತನ ಶಿಕ್ಷಣ ವ್ಯವಸ್ಥೆಯ ರೂವಾರಿಗಳಲ್ಲಿ ಒಬ್ಬರೆನಿಸಿದ, ಶ್ರೀಯುತ ಕಸ್ತೂರಿ ರಂಗನ್, ಪಶ್ಚಿಮ ಘಟ್ಟದಲ್ಲಿನ ಪರಿಸರ ಸಂರಕ್ಷಿಸುವ ಕುರಿತು ಈ ವರದಿ (Kasturirangan Report) ನೀಡಿದ್ದಾದರೂ ಏಕೆ?
ನೀವು ಈ ಪ್ರಶ್ನೆಯನ್ನು ಯಾರಿಗೆ ಬೇಕಾದರೂ ಕೇಳಿ, ಉತ್ತರ ಥಟ್ಟನೆ ಸಿಗುತ್ತದೆ; ‘ಹೆಸರಾಂತ ಪರಿಸರ ವಿಜ್ಞಾನಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಮಾಜಿ ಅಧ್ಯಕ್ಷ ಡಾ.ಮಾಧವ ಗಾಡ್ಗೀಳ್‌ರ ನೇತೃತ್ವದ ಸಮಿತಿ ಈ ಹಿಂದೆ ವರದಿ ನೀಡಿತ್ತು. ಈ ವರದಿ ಸಂಪೂರ್ಣವಾಗಿ ಜನ ವಿರೋಧಿಯಾಗಿದ್ದರಿಂದ ಎಲ್ಲ ರಾಜ್ಯ ಸರ್ಕಾರಗಳು, ಅದರಲ್ಲೂ ಮುಖ್ಯವಾಗಿ ಕೇರಳ ವಿರೋಧಿಸಿದ್ದರಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ ವರದಿ ನೀಡುವಂತೆ ಕೋರಿಕೊಂಡಿತ್ತು. ಹೀಗಾಗಿ ಅವರು ವರದಿ ಸಲ್ಲಿಸಿದ್ದರು, ಈ ವರದಿಯ ಜಾರಿಯ ವಿಷಯ ಪದೇ ಪದೇ ಮುನ್ನೆಲೆಗೆ ಬಂದು ಮಲೆನಾಡಿಗರ ನಿದ್ರೆಗೆಡಿಸುತ್ತಿದೆ’ ಎಂದು ವಿವರಿಸುತ್ತಾರೆ. ಇದು ಸತ್ಯ ಕೂಡ.
ಇದೇ ಪ್ರಶ್ನಾ ಸರಣಿಯನ್ನು ಮುಂದುವರಿಸಿ, ಡಾ. ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯನ್ನು ಏಕೆ ರಚಿಸಲಾಗಿತ್ತು ಎಂಬ ಮತ್ತೊಂದು ಪ್ರಶ್ನೆಯನ್ನು ಕೇಳಿ ನೋಡಿ, ಉತ್ತರ ಮಾತ್ರ ಭಿನ್ನವಾಗಿರುತ್ತವೆ.
ಕೆಲವರು, ಆಗಿನ ಪರಿಸರ ಖಾತೆ ಸಚಿವ ಜಯರಾಮ್ ರಮೇಶ್ (ಇವರು ಮೂಲತಃ ನಮ್ಮ ರಾಜ್ಯದವರು, ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ) ಪಶ್ಚಿಮಘಟ್ಟದ ಪರಿಸರವನ್ನು ಉಳಿಸುವ ಉದ್ದೇಶದಿಂದ ಈ ಸಮಿತಿ ರಚಿಸಿದ್ದರು ಎಂದರೆ, ಇನ್ನು ಕೆಲವರು ಸುಪ್ರೀಂ ಕೋರ್ಟ್ ಸೂಚಿಸಿತ್ತು, ರಾಷ್ಟ್ರೀಯ ಹಸಿರು ಪೀಠ (ಗ್ರೀನ್ ಟ್ರಿಬುನಲ್ ಆದೇಶ ನೀಡಿತ್ತು, ‘ನಿಸರ್ಗ ಸಂರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಘಟನೆ (ಐಯುಸಿಎನ್’ ಸೂಚನೆ ನೀಡಿತ್ತು… ಹೀಗೆ ಬೇರೆ ಬೇರೆ ಉತ್ತರ ನೀಡುತ್ತಾರೆ.
ಇನ್ನು ಕೆಲವರಂತೂ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ವಿದೇಶದಿಂದ ಹಣ ಪಡೆದು, ನೆಪ ಮಾತ್ರಕ್ಕೆ ಖರ್ಚು ಮಾಡಿ, ದುಡ್ಡು ಮಾಡಿಕೊಳ್ಳುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ(ಎನ್‌ಜಿಒಗಳತ್ತ ಬೊಟ್ಟು ಮಾಡುತ್ತಾರೆ. ಇದರಲ್ಲಿ ಯಾವುದು ಸತ್ಯ ಎಂದು ಹುಡುಕುತ್ತಾ ಹೊರಟಾಗ ಕುತೂಹಲಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ.
ಹೀಗೊಂದು ಹಿನ್ನೆಲೆ…
ಮಾಧವ್ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (Western Ghats Ecology Expert Panel(WGEEP)) ನೇಮಿಸಲು ಕಾರಣವಾಗಿದ್ದು ಪಶ್ಚಿಮ ಘಟ್ಟದ ಉಳಿವಿಗಾಗಿ ಸುಮಾರು ೩೫ ವರ್ಷಗಳ ಹಿಂದೆ ನಡೆದ ಹೋರಾಟವೇ? ಹೌದು, ಎನ್ನುತ್ತಾರೆ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ್. 1987ರಲ್ಲಿ ಆರಂಭವಾದ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ’ 2009ರಲ್ಲಿ ಮರು ಜನ್ಮ ಪಡೆದಿದ್ದು, ಇದರ ಒತ್ತಡಕ್ಕೆ ಮಣಿದ ಆಗಿನ ಕೇಂದ್ರ ಸಚಿವ ಜಯರಾಮ್ ರಮೇಶ್ ಈ ತಜ್ಞರ ಸಮಿತಿಯನ್ನು ರಚಿಸಿದ್ದರು. ಇದು ನಿಜವಾದ ಸಂಗತಿ. ಇದರಲ್ಲಿ ಗೊಂದಲವೇನಿಲ್ಲ. ಆದರೆ ಈ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಇನ್ನೊಂದಿಷ್ಟು ಆಳಕ್ಕಿಳಿಯಬೇಕಾಗುತ್ತದೆ.
ಮೊದಲಿಗೆ ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ’ದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೊಣ. 1986ರಲ್ಲಿ ದಕ್ಷಿಣ ಭಾರತದಲ್ಲಿ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ಸ್ವಯಂ ಸೇವಾ ಸಂಸ್ಥೆಗಳ ಕೆಲವು ಕಾರ್ಯಕರ್ತರು ಗೋವಾದಲ್ಲಿ ಸಭೆ ಸೇರಿದ್ದರು. ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಸಂಘಟನೆಗಳ ಪ್ರತಿನಿಗಳು ಇದರಲ್ಲಿದ್ದರು. ಪಶ್ಚಿಮಘಟ್ಟದ ಪರಿಸರ ಸ್ಥಿತಿ-ಗತಿಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಿತು. ಎಲ್ಲ ರಾಜ್ಯದ ಪರಿಸರ ಕಾರ್ಯಕರ್ತರು ತಮ್ಮ ಭಾಗದಲ್ಲಿ ಪಶ್ಚಿಮ ಘಟ್ಟದ ಮೇಲೆ ‘ಅಭಿವೃದ್ಧಿ’ಯ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ, ಆಡಳಿತದ ಗಮನ ಸೆಳೆಯಲು ‘ಪಶ್ಚಿಮಘಟ್ಟ ಉಳಿಸಿ ಅಭಿಯಾನ’ ನಡೆಸಲು ಅಂದು ತೀರ್ಮಾನಿಸಲಾಗಿತ್ತು.
ಆಗ ಸುಮಾರು 145ಕ್ಕಿಂತಲೂ ಹೆಚ್ಚು ನಾಗರಿಕ ಸಂಘಟನೆಗಳು (ಈಗಿನಂತೆ ಆಗ ಹೆಚ್ಚು ಎನ್‌ಜಿಒಗಳಿರಲಿಲ್ಲ) ಈ ಅಭಿಯಾನದಲ್ಲಿ ಭಾಗವಹಿಸುವ ತೀರ್ಮಾನ ಪ್ರಕಟಿಸಿದ್ದವು. ಅಭಿಯಾನದ ಭಾಗವಾಗಿ ಪಾದಯಾತ್ರೆ ಕೈಗೊಳ್ಳುವ ತೀರ್ಮಾನ ಮಾಡಲಾಗಿತ್ತು. ಈ ಆಂದೋಲನ ಯಶಸ್ವಿಗೊಳಿಸಲು ಕೇಂದ್ರ ಸಂಚಾಲನ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಡಾ. ಕೈಲಾಸ್ ಮಲ್ಹೋತ್ರಾ, ಶಿರಸಿಯ ಪಾಂಡುರಂಗ ಹೆಗಡೆ, ಪ್ರೊ. ಎಲ್.ಟಿ.ಶರ್ಮಾ, ಎಸ್.ಆರ್. ಹಿರೇಮಠ್ ಸೇರಿದಂತೆ ಒಟ್ಟು 22 ಮಂದಿ ಇದ್ದರು. ಇದೇ ರೀತಿಯಾಗಿ ರಾಜ್ಯ ಮಟ್ಟದಲ್ಲಿಯೂ ಸಂಚಾಲನ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಡಾ. ಕೆ. ಶಿವರಾಮ ಕಾರಂತ, ಮಾಧವ ಗಾಡ್ಗೀಳ್, ಪತ್ರಕರ್ತರಾದ ನಾಗೇಶ್ ಹೆಗಡೆ, ಖಾದ್ರಿ ಶಾಮಣ್ಣ, ಸಂತೋಷ್ ಕುಮಾರ್ ಗುಲ್ವಾಡಿ, ನಟ ಸುರೇಶ್ ಹಬ್ಳೀಕರ್, ರಂಗಕರ್ಮಿ ಕೆ.ವಿ. ಸುಬ್ಬಣ್ಣ ಮತ್ತಿತರ 40 ಮಂದಿ ಇದ್ದರು.
ಈ ಪಾದಯಾತ್ರೆಯನ್ನು ಪಶ್ಚಿಮ ಘಟ್ಟಗಳ ಉತ್ತರ ಮತ್ತು ದಕ್ಷಿಣ ಎರಡೂ ತುದಿಗಳಿಂದ ಪ್ರಾರಂಭಿಸಲಾಗಿತ್ತು. ರಾಜ್ಯದಲ್ಲಿ ಡಿಸೆಂಬರ್ 16, 1987ರಲ್ಲಿ ತಲಕಾವೇರಿಯಿಂದ ಈ ಪಾದಯಾತ್ರೆ ಆರಂಭಗೊಂಡಿತ್ತು. ಕೊಡಗು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಳ್ಳಿಗಳಲ್ಲಿ ಸಂಚರಿಸಿ ಜನವರಿ 28, 1988ರಂದು ಮೊಹಲ್ಲಾ ಎಂಬಲ್ಲಿ ಗೋವಾ ರಾಜ್ಯವನ್ನು ಈ ಪಾದಯಾತ್ರೆ ಪ್ರವೇಶಿಸಿತ್ತು. ಈ ಪಾದಯತ್ರೆಯ ಸಂದರ್ಭದಲ್ಲಿ ಪಶ್ಚಿಮಘಟ್ಟಗಳ ಮಹತ್ವ ಮತ್ತು ಅಲ್ಲಿ ನಡೆದಿರುವ ವಿನಾಶಾತ್ಮಕ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು.
ಇದಕ್ಕಾಗಿ ‘ಪಶ್ಚಿಮ ಘಟ್ಟಗಳ ಅಳಿವು, ಉಳಿವು’ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸಿ ಹಂಚಲಾಗಿತ್ತು. ಶಿವರಾಮ ಕಾರಂತ್, ನಾಗೇಶ್ ಹೆಗಡೆ ಮಾಧವ ಗಾಡ್ಗೀಳ್ ಮತ್ತಿತರರ ಲೇಖನಗಳನ್ನು ಈ ಕಿರುಹೊತ್ತಿಗೆ ಒಳಗೊಂಡಿತ್ತು. ಈ ಪಾದಯಾತ್ರೆ ರಾಜ್ಯದಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಮುಂದೆ ಹರಿಹರ ಪಾಲಿಫೈಬರ್ಸ್ ವಿರುದ್ಧದ ಹೋರಾಟ, ಕೈಗಾ ಅಣುಸ್ಥಾವರದ ವಿರುದ್ಧ ಹೋರಾಟ ಸೇರಿದಂತೆ ಹಲವಾರು ಪರಿಸರ ಹೋರಾಟಕ್ಕೆ ಇದು ನಾಂದಿ ಹಾಡಿತ್ತು.
ಅಭಿಯಾನದ ಹೈಜಾಕ್!
ಈ ಹಿಂದೆ ಹೇಳಿದಂತೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತ್, ಹೆಸರಾಂತ ಪತ್ರಕರ್ತ ಖಾದ್ರಿ ಶಾಮಣ್ಣ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಮತ್ತಿತರ ಪಾಲ್ಗೊಳ್ಳುವಿಕೆಯಿಂದ ಬಹಳ ಮಹತ್ವದ ಪರಿಸರ ಚಳವಳಿಯಾಗಿ ರೂಪಗೊಂಡಿದ್ದ ‘ಪಶ್ಚಿಮ ಘಟ್ಟ ಉಳಿಸಿ ಅಭಿಯಾನ’ವನ್ನು ಸದ್ದಿಲ್ಲದೆ 2009ರಲ್ಲಿ ಕೆಲ ಸರ್ಕಾರೇತರ ಸ್ವಯಂ ಸೇವಾ ಸಂಘಟನೆ (ಎನ್‌ಜಿಒ)ಗಳು ಸದ್ದಿಲ್ಲದೆ ಹೈಜಾಕ್ ಮಾಡಿಬಿಟ್ಟಿವೆ. ಈಗಲೂ ಈ ಅಭಿಯಾನ ಜೀವಂತವಾಗಿವೆ. ಆದರೆ ಇದರ ನೇತೃತ್ವವಹಿಸಿರುವುದು ಎನ್‌ಜಿಒಗಳ ಪ್ರತಿನಿಗಳೇ ಹೊರತು ಸಾಮಾಜದಲ್ಲಿನ ಗಣ್ಯರಲ್ಲ, ನಿಜವಾದ ಪರಿಸರ ಪ್ರೇಮಿಗಳಲ್ಲ. (ಅನೇಕ ಎನ್‌ಜಿಒಗಳು ಹಿಂದೆ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದನ್ನೇ ಮುಂದಿಟ್ಟುಕೊಂಡು, ಈಗ ಇದರ ಕ್ರೆಡಿಟ್ ಪಡೆದುಕೊಳ್ಳಲು ತಮ್ಮಿಂದಾಗಿಯೇ ಈ ಅಭಿಯಾನ ಯಶಸ್ವಿಯಾಯಿತು ಎಂದು ಪ್ರಚಾರ ನಡೆಸಲಾರಂಭಿಸಿವೆ. ಈ ಬಗ್ಗೆ ತಮ್ಮ ವೆಬ್‌ನಲ್ಲಿ ಪುಟಗಟ್ಟಲೆ ಬರೆದುಕೊಂಡಿವೆ.)
ಅದಿರಲಿ, ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನ ಮರುಹುಟ್ಟು ಪಡೆದಿದ್ದು ಹೇಗೆ ಎಂಬುದನ್ನು ನೋಡೋಣ. ಅಭಿಯಾನದ ಕೇಂದ್ರ ಸಂಚಾಲನ ಸಮಿತಿಯ ಸದಸ್ಯರಾಗಿದ್ದ ಗೋವಾದ ‘ಪೀಸ್‌ಫುಲ್ ಸೊಸೈಟಿ’ಯ ಕುಮಾರ್ ಕಲಾನಂದ ಮಣಿ ಎಂಬುವರು 2009ರಲ್ಲಿ ಈ ಅಭಿಯಾನದಲ್ಲಿ ಭಾಗಿಯಾದವರೆಲ್ಲರ ಸಭೆಯೊಂದನ್ನು ಗೋವಾದಲ್ಲಿ ಕರೆದಿದ್ದರು. ಈ ಸಭೆಯಲ್ಲಿ ಪಶ್ಚಿಮಘಟ್ಟದ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಯಿತು. ಬಹಳ ಮುಖ್ಯವಾದ ವಿಷಯವೆಂದರೆ ಈ ಬಾರಿ ನಾಗರಿಕ ಸಂಘಟನೆಗಳಿಗಿಂತ ಹೆಚ್ಚಾಗಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ವಿದೇಶಿ ಹಣದಿಂದ ‘ಪರಿಸರ ಉಳಿಸುವ’ ಚಟುವಟಿಕೆ ನಡೆಸುತ್ತಿರುವ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳೇ ಇದರಲ್ಲಿ ಭಾಗವಹಿಸಿದ್ದರು.
‘ಪಶ್ಚಿಮ ಘಟ್ಟ ಉಳಿಸಿ ಅಭಿಯಾನ’ದಲ್ಲಿ ಭಾಗವಹಿಸಿದ್ದ ರಾಜ್ಯದ ಪ್ರಮುಖರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಈ ಸಭೆಯಲ್ಲಿ ಅಭಿಯಾನವನ್ನು ಮುಂದುವರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತಲ್ಲದೆ, ಇದಕ್ಕಾಗಿ ಕೇಂದ್ರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು 2010ರಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೊಟಗಿರಿಯಲ್ಲಿ ಮಹತ್ವದ ಸಮಾವೇಶ ನಡೆಸುವ ತೀರ್ಮಾನ ತೆಗೆದುಕೊಂಡಿತ್ತು. ಈ ಅಭಿಯಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಹೇಳಲು ಕಾರಣವೆಂದರೆ, ಈ ಅಭಿಯಾನಕ್ಕೆ ಸಂಬಂಧಿಸಿದಂತೆ ವೆಬ್ ಸೈಟ್ (www.savethewesternghats.org) ಆರಂಭಿಸಲಾಗಿದೆ. ಇದರಲ್ಲಿ ಅಭಿಯಾನದ ಪಾಲುದಾರರು (ಪಾಟ್ನರ್ಸ್) ಯಾರೆಂದು ಪ್ರಕಟಿಸಲಾಗಿದೆ.
ಪಾಲುದಾರರು ಯಾರೆಂದರೆ?
ಕ್ರಿಟಿಕಲ್ ಎಕೋ ಸಿಸ್ಟಮ್ ಪಾಟ್ನರ್‌ಶಿಪ್ ಫಂಡ್: ಇದು ಶ್ರೀಮಂತ ಜೀವವೈವಿಧ್ಯತೆಯ ಪ್ರದೇಶಗಳನ್ನು, ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳನ್ನು ಸಂರಕ್ಷಿಸಲು ಹಣಕಾಸು ನೆರವು ನೀಡುವ ಉದ್ದೇಶದಿಂದಲೇ 2000ರಲ್ಲಿ ಹುಟ್ಟಿಕೊಂಡ ಒಂದು ಅಂತಾರಾಷ್ಟ್ರೀಯ ಸಂಘಟನೆ. ಫ್ರೆಂಚ್ ಡೆವಲಪ್‌ಮೆಂಟ್ ಏಜೆನ್ಸಿ, ಐರೋಪ್ಯ ರಾಷ್ಟ್ರಗಳ ಒಕ್ಕೂಟ, ವರ್ಲ್ಡ್ ಬ್ಯಾಂಕ್, ಜಪಾನ್ ಸರ್ಕಾರ, ಕನ್ಸರ್ವೆಷನ್ ಇಂಟರ್‌ನ್ಯಾಷನಲ್ ಸೇರಿದಂತೆ ಒಟ್ಟು ಏಳು ಸಂಸ್ಥೆಗಳು ಇದಕ್ಕೆ ಹಣಕಾಸು ನೀಡುತ್ತವೆ. ಇದನ್ನು ಹಂಚುವ ಕೆಲಸವನ್ನು ಈ ಸಂಘಟನೆ ಮಾಡುತ್ತದೆ. (ಪಶ್ಚಿಮ ಘಟ್ಟ ಉಳಿಸಿ ಅಭಿಯಾನಕ್ಕೆ 25 ವರ್ಷಗಳಾದ ಹಿನ್ನೆಲೆಯಲ್ಲಿ, 2012ರಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಇದರ ಸಂಪೂರ್ಣ ಪ್ರಾಯೋಜಕತ್ವವನ್ನು ಈ ಸಂಸ್ಥೆ ವಹಿಸಿಕೊಂಡಿತ್ತು!)
ಈ ಸಂಸ್ಥೆ ಕುರಿತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ; https://www.cepf.net/
ಇಂಡೀಜಿನಿಯಸ್ ಪಾಟ್ನರ್‌ಶಿಪ್ ಫಾರ್ ಅಗ್ರೋ- ಬಯೋಡೈರ್ವಸಿಟಿ ಆ್ಯಂಡ್ ಫುಡ್ ಸಾವ್ರಿನಿಟಿ (The Indigenous Partnership for Agro-Biodiversity and Food Sovereignty (Indigenous Partnership) : ಇದೊಂದು ಕೃಷಿಯಲ್ಲಿನ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಕೆಲಸ ಮಾಡುತ್ತಿರುವ, ಮಾಡುವವರಿಗೆ ಹಣಕಾಸು ಒದಗಿಸುವ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಈ ಸಂಸ್ಥೆ ಕುರಿತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ; https://www.agrobiodiversitypar.org
ಲ್ಯಾಬ್ ಇಂಡಿಯಾ ಇನ್‌ಸ್ಟ್ರುಮೆಂಟ್ ಪ್ರವೇಟ್ ಲಿಮಿಟೆಡ್: ಕಳೆದ ೪೦ ವರ್ಷಗಳಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ದೇಶದ ಕಂಪನಿ. (ಗಮನಿಸಿ: ಜೈವಿಕ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳಿಗೆ ಜೀವ ವೈವಿಧ್ಯತೆಯ ಸಂರಕ್ಷಣೆ ಬಹಳ ಮುಖ್ಯ) ಈ ಸಂಸ್ಥೆ ಕುರಿತ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ; http://www.labindia.com/
ಇದರ ಜತೆಗೆ ಬ್ಯಾಂಕ್ ಆಫ್ ಬರೋಡ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಈ ಆಂದೋಲನದ ಪಾಲುದಾರರಾಗಿದ್ದಾರೆ. ನಮ್ಮ ಆಂದೋಲನದಲ್ಲಿ 200ಕ್ಕೂ ಹೆಚ್ಚು ಸಂಘಟನೆಗಳು, ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ ಎಂದು ವೆಬ್‌ನಲ್ಲಿ ಪಶ್ಚಿಮ ಘಟ್ಟ ಉಳಿಸಿ ಅಭಿಯಾನವನ್ನು ಈಗ ಮುನ್ನೆಡೆಸುತ್ತಿರುವವರು ಹೇಳಿಕೊಂಡಿದ್ದಾರೆ.
ಆಂದೋಲನ ನಡೆಸಲು ಇವರೆಲ್ಲರ ‘ಸಹಕಾರ’ ಅಗತ್ಯ ಎಂದು ಈಗ ಯಾರಿಗಾದರೂ ಅನ್ನಿಸಬಹುದು! ಹೌದು, ಪ್ರತಿ ಹೋರಾಟಕ್ಕೂ ಖರ್ಚು-ವೆಚ್ಚ ಇದ್ದೇ ಇರುತ್ತದೆ. 1987-88ರಲ್ಲಿ ನಡೆದ ಪಾದಯಾತ್ರೆ ಸಂದರ್ಭದಲ್ಲಿಯೂ ದುಡ್ಡು ಖರ್ಚಾಗಿತ್ತು. ಅಂದಾಜಿನ ಪ್ರಕಾರ ಒಟ್ಟು ಸುಮಾರು 3 ಕೋಟಿ ರೂಪಾಯಿ ದುಡ್ಡಿನ ವ್ಯವಹಾರ ನಡೆದಿತ್ತು. ಇದನ್ನು ಆಗಿನ ಆಂದೋಲನದಲ್ಲಿ ಭಾಗಿಯಾಗಿದ್ದ ‘ಪೀಸ್‌ಫುಲ್ ಸೊಸೈಟಿ’ಯೇ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಈ ಹಣವನ್ನು ಬಹುತೇಕವಾಗಿ ಜನರಿಂದಲೇ ಸಂಗ್ರಹಿಸಿ, ಖರ್ಚು ಮಾಡಲಾಗಿತ್ತು. ಅಭಿಯಾನದ ಕೇಂದ್ರ ಸಂಚಾಲನ ಸಮಿತಿಯ ಒಟ್ಟಾರೆ ಬಜೆಟ್ 4.8 ಲಕ್ಷ ರೂ.ಗಳಾಗಿತ್ತಂತೆ. ಇದಕ್ಕೆ ಆಗಿನ ಕೇಂದ್ರ ಸರಕಾರದ ಪರಿಸರ ಸಚಿವಾಲಯವೇ ವಿಶೇಷವಾಗಿ ಅನುದಾನ ನೀಡಿತ್ತು. ಎಷ್ಟು ಗೊತ್ತೇ, 3.8 ಲಕ್ಷ ರೂ. ! ಹೀಗಾಗಿ ಪಾದಯಾತ್ರೆ ಕೊನೆಗೊಂಡಾಗ ಕೇಂದ್ರ ಸಂಚಾಲನ ಸಮಿತಿಯ ಬಳಿ 28 ಸಾವಿರ ರೂಪಾಯಿ ಖರ್ಚಾಗದೇ ಉಳಿದಿತ್ತಂತೆ!
ಪರಿಸರ ಉಳಿಸುವ ಚಳವಳಿ ಇರಲೀ, ಇನ್ಯಾವುದೇ ಚಳವಳಿ ಇರಲಿ ಅದು ಜನರ ನಡುವಿನಿಂದಲೇ ಹುಟ್ಟಬೇಕು ಮತ್ತು ಅದು ಜನರ ದುಡ್ಡಿನಿಂದಲೇ ನಡೆಯಬೇಕು ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ಈಗಿನ ಪಶ್ಚಿಮಘಟ್ಟ ಉಳಿಸಿ ಅಭಿಯಾನ ಹೊರಟಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.
ಕೊಟಗಿರಿಯಲ್ಲಿ ನಡೆದಿದ್ದೇನು?
ಗೋವಾದಲ್ಲಿ ನಡೆದ ಸಭೆಯ ತೀರ್ಮಾನದಂತೆ 2010ರ ಫೆಬ್ರವರಿ 18 ರಿಂದ 20ರ ವರೆಗೆ ಕೊಟಗಿರಿಯ ‘ಕೀಸ್ಟೋನ್ ಫೌಂಡೇಷನ್’ ಎಂಬ ಎನ್‌ಜಿಒ ಒಂದರ ಕ್ಯಾಂಪಸ್‌ನಲ್ಲಿ, ‘ಪಶ್ಚಿಮ ಘಟ್ಟ ಉಳಿಸಿ ಅಭಿಯಾನ’ದ ಮಹತ್ವದ ಸಮಾವೇಶ ನಡೆಯಿತು. ಇದರಲ್ಲಿ ಭಾಗವಹಿಸಿದ್ದು ಕೂಡ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಗಿಂತ ಹೆಚ್ಚಾಗಿ ಎನ್‌ಜಿಒ ಪ್ರತಿನಿಧಿಗಳೇ. ಏಟ್ರೀ, ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ, ಅವೇರ್ ಟ್ರಸ್ಟ್, ಎಕೋಫೋರಂ, ದಿ ನೇಚರ್ ಟ್ರಸ್ಟ್, ಎಕೋನೆಟ್, ವೈಲ್ಡ್‌ಲೈಫ್ ಟ್ರಸ್ಟ್… ಈ ರೀತಿಯ ಸಂಘಟನೆಗಳೇ ಪ್ರಮುಖ ಪಾತ್ರ ವಹಿಸಿದ್ದವು. ನಮ್ಮ ರಾಜ್ಯದ ಪರಿಸರವಾದಿಗಳಾದ ಪಾಂಡುರಂಗ ಹೆಗಡೆ, ಎಸ್.ಆರ್. ಹಿರೇಮಠ್, ಆಗುಂಬೆ ರೈನ್‌ಫಾರೆಸ್ಟ್ ರೀಸರ್ಚ್ ಸ್ಟೇಷನ್‌ನ ಗೌರಿ ಶಂಕರ್ ಮತ್ತಿತರರು ಕೂಡ ಭಾಗವಹಿಸಿ, ತಮ್ಮ ಅಭಿಪ್ರಾಯ ಮಂಡಿಸಿದ್ದರು.
ಪ್ರಧಾನಿ ನೇತೃತ್ವದ ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ ಪಶ್ಚಿಮಘಟ್ಟವನ್ನು ಸೇರ್ಪಡೆಗೊಳಿಸುವುದು, ಗಣಿಗಾರಿಕೆಯನ್ನು ಸಂಪೂರ್ಣ ತಡೆಗಟ್ಟುವುದು, ಸಾವಯವ ಕೃಷಿ ಪದ್ಧತಿಯನ್ನು ಪ್ರೊತ್ಸಾಹಿಸುವುದು, ಹಸಿರು ನ್ಯಾಯಾಲಯದ ಸ್ಥಾಪನೆ, ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿಯೋಜನೆಗಳ ಮೇಲೆ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ಈ ಸಮಾವೇಶದಲ್ಲಿ ಚರ್ಚೆ ನಡೆಯಿತು.
ಬಹಳ ಮುಖ್ಯವಾಗಿ ಆಗಿನ ಪರಿಸರಖಾತೆ ಸಚಿವ ಜಯರಾಮ್ ರಮೇಶ್ ಈ ಸಮಾವೇಶವನ್ನು ಉದ್ಘಾಟಿಸಿ, ಕಲಾಪಗಳಲ್ಲಿ ಭಾಗವಹಿಸಿದ್ದರು. ಪಶ್ಚಿಮಘಟ್ಟದ ಸಂರಕ್ಷಣೆ ಕುರಿತು ಸಂವಾದದಲ್ಲಿ ಕೂಡ ಭಾಗವಹಿಸಿದ್ದರು. (ಈ ಸಮಾವೇಶದಲ್ಲಿ ಒಟ್ಟು ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಈ ನಿರ್ಣಯಗಳನ್ನು ನೀಲಗಿರಿ ಡಿಕ್ಲರೇಷನ್ ಎಂದು ಕರೆಯಲಾಗಿದೆ) ಈ ಸಂದರ್ಭದಲ್ಲಿ, ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಂಬಂಧಿಸಿದಂತೆ ತಜ್ಞರಾದ ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿಯೇ ಪರಿಸರ ತಜ್ಞರ ಸಮಿತಿಯೊಂದನ್ನು ರಚಿಸಿ, ವರದಿ ತರಿಸಿಕೊಳ್ಳಬೇಕೆಂದು ಒತ್ತಾಯಿಸಲಾಗಿತ್ತು.
ಈ ಸಮಿತಿಯಲ್ಲಿ ಯಾರ್ಯಾರು ಇರಬೇಕು, ವರದಿ ಹೇಗಿರಬೇಕು ಎಂಬುದನ್ನು ಕೂಡ ಎನ್‌ಜಿಒಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯೇ ತೀರ್ಮಾನಿಸಿ, ಸಚಿವರಿಗೆ ಸೂಚನೆ ನೀಡಿತ್ತು! ಅಲ್ಲದೆ, ‘ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ’ ರಚಿಸಿ, ಪಶ್ಚಿಮ ಘಟ್ಟದ ಆಡಳಿತಕ್ಕೇ ಬೇರೆ ವ್ಯವಸ್ಥೆ ಮಾಡಬೇಕೆಂದು ಅಲ್ಲಿದ್ದ ಪರಿಸರವಾದಿಗಳು ಒತ್ತಾಯಿಸಿದ್ದರು!. ಸಚಿವರಾದ ಜಯರಾಮ್ ರಮೇಶ್ ಈ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಮಾವೇಶದಲ್ಲಿ ಮಾತು ಕೊಟ್ಟಿದ್ದರು.
ಆ ಮಾತಿನಂತೆಯೇ ಕೇವಲ ಹದಿನೈದು ದಿನಗಳ ಒಳಗೆ ಅಂದರೆ ಮಾರ್ಚ್ 4, 2010ರಂದೇ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ (Western Ghats Ecology Expert Panel), ಆದೇಶ ಹೊರಡಿಸಿದರು. ಕೊನೆಗೆ ವರದಿಯು ನಿರೀಕ್ಷೆಯಂತೆ, ನಿಗದಿತ ಸಮಯದಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗುವಂತೆಯೂ ನೋಡಿಕೊಂಡಿದ್ದರು.
ಈ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ್ದ ‘ಕೀಸ್ಟೋನ್ ಫೌಂಡೇಷನ್’ ಕೂಡ ನಿಲಿಗಿರಿ ಜೈವಿಕ ತಾಣವನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆ! ಈ ಕೆಲಸಕ್ಕೆ ಇದು 13 ಸಂಸ್ಥೆಗಳಿಂದ ಹಣಕಾಸಿನ ನೆರವು ಪಡೆಯುತ್ತಿದೆ. ಇದಕ್ಕೆ ನೆರವು ನೀಡುತ್ತಿರುವ ಸಂಸ್ಥೆಗಳಲ್ಲಿ ಮುಖ್ಯವಾದ ಏಜೆನ್ಸಿಗಳೆಂದರೆ, ನೆದರ್ ಲ್ಯಾಂಡ್‌ನ ಬೋತ್‌ಎಂಡ್ಸ್ (https://www.bothends.org/en/), ಬ್ರಿಟನ್‌ನಲ್ಲಿನ ಬೀಸ್ ಫಾರ್ ಡೆವಲಪ್‌ಮೆಂಟ್, ದೆಹಲಿಯ ಫೋರ್ಡ್ ಫೌಂಡೇಷನ್, ಸ್ವೀಡನ್ ದೇಶದ ಸ್ವಾಲ್ವೋಸ್ ಮತ್ತು ಫ್ಯೂಚರ್ ಅರ್ಥ್ ಮುಂತಾದವು.
ಅಂದ ಹಾಗೆ ಪಶ್ಚಿಮ ಘಟ್ಟ ಉಳಿಸಿ ಅಭಿಯಾನದ ಸಮಾವೇಶವನ್ನೂ ಕೀಸ್ಟೋನ್ ಫೌಂಡೇಷನ್ ವಿದೇಶಿ ಸಂಸ್ಥೆಗಳ ನೆರವು ಪಡೆದೇ ನಡೆಸಿದೆ. ಇದನ್ನು ಅದು ತನ್ನ ವರದಿಯಲ್ಲಿ ಬಹಿರಂಗ ಪಡಿಸಿದೆ ಕೂಡ. ಸಮಾವೇಶದ ಕುರಿತು ಆಕರ್ಷಕವಾಗಿ ಸಿದ್ಧಪಡಿಸಲಾದ ಈ ವರದಿಯ ಕೊನೆಯಲ್ಲಿ ಏನೆಂದು ಬರೆಯಲಾಗಿದೆ ಗೊತ್ತೇ, THE MEET WAS PARTLY SUPPORTED BY BOTH ENDS, NETHERLANDS & SWALLOWS, SWEDEN ಹೀಗೆ ವಿದೇಶಿ ಹಣದಲ್ಲಿ ನಡೆಯುವ ಸಂಘಟನೆಗಳ ಪ್ರತಿನಿಧಿಗಳು, ವಿದೇಶಿ ನೆರವಿನಲ್ಲಿಯೇ ಚಿಂತನೆ ನಡೆಸಿ, ಪಶ್ಚಿಮಘಟ್ಟದ ಉಳಿವಿಗಾಗಿ ತೆಗೆದುಕೊಂಡ ಕ್ರಮ ಈಗ ಪಶ್ಚಿಮಘಟ್ಟದ ತಪ್ಪಲಿನ ಜನರ ಭೀತಿಗೆ ಕಾರಣವಾಗಿದೆ.
ಇದನ್ನೂ ಓದಿ | Kasturirangan Report | ಪರಿಸರ ಸೂಕ್ಷ್ಮ ಪ್ರದೇಶ; ಮತ್ತೊಂದು ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ