Site icon Vistara News

KCC Cup 2023: ಕೆಸಿಸಿ ಕಪ್‌ ದೇಶದಲ್ಲೇ ವಿನೂತನ ಪ್ರಯತ್ನ: ಡಿಕೆಶಿ ಮೆಚ್ಚುಗೆ

DKS

ಬೆಂಗಳೂರು: ನಮ್ಮ ಚಂದನವನದ ನಟರು, ಕ್ರಿಕೆಟ್ ಆಟಗಾರರು, ಪತ್ರಕರ್ತರು ಸೇರಿ ಒಟ್ಟಿಗೆ ಕ್ರಿಕೆಟ್ ಪಂದ್ಯ (KCC Cup 2023) ಆಡುವ ಮೂಲಕ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಕೆಸಿಸಿ ಕಪ್ ಫೈನಲ್ ಪಂದ್ಯ ವೀಕ್ಷಿಸಿ, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಜತೆ ಸೇರಿ ಈ ಕೆಸಿಸಿ ಕಪ್ ಪಂದ್ಯಾವಳಿಯನ್ನು ಬಹಳ ಸಂತೋಷದಿಂದ ನಾನು ವೀಕ್ಷಣೆ ಮಾಡಿದ್ದೇನೆ. ಇಂತಹ ಪ್ರಯತ್ನಕ್ಕೆ ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರುತ್ತದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಕನ್ನಡ ಚಿತ್ರರಂಗ ದೇಶಕ್ಕೆ ಮಾದರಿಯಾಗುತ್ತಿದೆ. ಎಲ್ಲರಿಗೂ ಈ ಸಂದರ್ಭದಲ್ಲಿ ಶುಭಕೋರುತ್ತೇನೆ ಎಂದರು.

ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿ, “ಯಾರೂ ಗಾಬರಿಪಡುವ ಅಗತ್ಯವಿಲ್ಲ. ಮುಂಜಾಗ್ರತೆಯಿಂದ ಇರೋಣ. ಈ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿ ಹಾಗೂ ತಾಂತ್ರಿಕ ಸಮಿತಿಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | Ram Mandir: ರಾಮಮಂದಿರ ಉದ್ಘಾಟನೆಗೆ ನಟ ಯಶ್‌, ರಿಷಬ್‌ ಶೆಟ್ಟಿಗೆ ಆಹ್ವಾನ

ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಬೆಂಗಳೂರಿನಲ್ಲಿ ಬಡವರ ಮಕ್ಕಳು ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿದ್ದು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಆದ್ಯತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಅತಿಥಿ ಉಪನ್ಯಾಸಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, “ಬೆಂಗಳೂರಿನ ಅತಿಥಿ ಉಪನ್ಯಾಸಕರು ಇಂದು ನನ್ನನ್ನು ಭೇಟಿ ಮಾಡಿ, ನಮ್ಮನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಸೆಕ್ಯುರಿಟಿ ಏಜೆನ್ಸಿ ಅವರು ಶಿಕ್ಷಕರನ್ನು ನೇಮಿಸುತ್ತಾರೆ ಎಂಬ ದೂರು ಬಂದಿದೆ. ಯಾರು ಯಾವ ಕೆಲಸ ಮಾಡಬೇಕೋ ಅವರು ಅದನ್ನೇ ಮಾಡಬೇಕು ಎಂದು ತಿಳಿಸಿದರು.

ಇಂದು ಆಗಮಿಸಿದವರಲ್ಲಿ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ವಿಚಾರವಾಗಿ ಮತ್ತೆ ಪರಿಶೀಲನೆ ಮಾಡುತ್ತೇನೆ. ನಮಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ. ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಸುಪರ್ದಿಗೆ ಈ ಶಾಲೆಗಳನ್ನು ನೀಡಿದ್ದೇವೆ. ಸರಿಯಾಗಿ ತರಬೇತಿ ಹೊಂದಿರುವ ಶಿಕ್ಷಕರನ್ನು ನೇಮಿಸಬೇಕಿದೆ. ಬಿಬಿಎಂಪಿ ವತಿಯಿಂದ ಎಲ್ಲಾ ಮೂಲಸೌಕರ್ಯ ಒದಗಿಸಲಾಗುವುದು, ಶಿಕ್ಷಣದ ಜವಾಬ್ದಾರಿಯನ್ನು ಇಲಾಖೆಗೆ ವಹಿಸಲಾಗಿದೆ” ಎಂದು ತಿಳಿಸಿದರು.

ಸಚಿವ ಭೈರತಿ ಸುರೇಶ್ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ನಮ್ಮಲ್ಲಿ ಕೆಲವು ಯೋಜನಾ ಪ್ರಾಧಿಕಾರಗಳು ಇವೆ. ಅವುಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ನಾಲ್ವರು ಸದಸ್ಯರನ್ನು ನೇಮಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಈ ದೃಷ್ಟಿಯಿಂದ ಮಾರ್ಗದರ್ಶನ ನೀಡಿದ್ದೇನೆ. ಇನ್ನು ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚನೆ ಜವಾಬ್ದಾರಿ ಸಚಿವರಿಗೆ ನೀಡಿದ್ದು, ಸಚಿವರ ಜೊತೆ ಚರ್ಚೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ನಿಗಮ, ಮಂಡಳಿಗಳಿಗೆ ಯಾವಾಗ ನೇಮಕ ಆಗಲಿದೆ ಎಂದು ಕೇಳಿದಾಗ, “ಯಾವುದೇ ಕ್ಷಣದಲ್ಲಿ ಬೇಕಾದರೂ ಆಗಬಹುದು” ಎಂದು ತಿಳಿಸಿದರು.

ಕನ್ನಡ ನಾಮಫಲಕ ವಿಚಾರವಾಗಿ ಕನ್ನಡಪರ ಸಂಘಟನೆಗಳ ಹೋರಾಟದ ಬಗ್ಗೆ ಕೇಳಿದಾಗ, “ಕನ್ನಡ ಪರ ಸಂಘಟನೆಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು. ಹೋರಾಟದ ಹೆಸರಿನಲ್ಲಿ ಯಾರ ಆಸ್ತಿಪಾಸ್ತಿಗೂ ಹಾನಿ ಮಾಡಬಾರದು. ಬೆಂಗಳೂರಿಗೆ ಬಂದು ವ್ಯಾಪಾರ ಮಾಡಿ ಬದುಕುತ್ತಿರುವವರು ತಮ್ಮ ಮಳಿಗೆ ಬೋರ್ಡ್ ನಲ್ಲಿ 60% ನಷ್ಟು ಕನ್ನಡ ಇರಬೇಕು ಎಂಬ ಕಾನೂನು ಇದ್ದು, ಯಾರು ಎಷ್ಟೇ ದೊಡ್ಡ ವ್ಯಾಪಾರಸ್ಥರಾದರೂ ಎಲ್ಲರೂ ಅದನ್ನು ಪಾಲನೆ ಮಾಡಬೇಕು” ಎಂದು ತಿಳಿಸಿದರು.

ಇದನ್ನೂ ಓದಿ | ಧೋನಿ ಪರಿವಾರದ ಜತೆ ಕ್ರಿಸ್ಮಸ್‌ ಆಚರಿಸಿದ ಪಂತ್​; ಕಾರು ಅಪಘಾತ ನೆನೆದ ಅಭಿಮಾನಿಗಳು!​

ಹಿಜಾಬ್ ವಿಚಾರವಾಗಿ ಕೇಳಿದಾಗ, “ನಾವು ಆ ವಿಚಾರವಾಗಿ ಆಲೋಚನೆ ಮಾಡಿಲ್ಲ. ಮಾಧ್ಯಮಗಳೇ ಇದನ್ನು ದೊಡ್ಡ ವಿಷಯ ಮಾಡುತ್ತಿವೆ. ಹಿಜಾಬ್ ವಿಚಾರವಾಗಿ ಚರ್ಚೆಗೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಎಲ್ಲಿದೆ?” ಎಂದು ಪ್ರಶ್ನಿಸಿದರು.

Exit mobile version