ಬೆಂಗಳೂರು: 2024ನೇ ಸಾಲಿನ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET Result 2024) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಇಟಿ ಪರೀಕ್ಷೆಯನ್ನು (KCET Exam) ಏಪ್ರಿಲ್ 18, 19 ಹಾಗೂ 20ರಂದು ನಡೆಸಿತ್ತು. ಇದರಲ್ಲಿ ಸುಮಾರು 3.28 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದರು. ಜೂನ್ ಮೊದಲ ವಾರದಲ್ಲಿ (KCET Result 2024) ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿ ಕೆಇಎ ಫಲಿತಾಂಶ ಬಿಡುಗಡೆ ಮಾಡಿದೆ.
ಸಿಇಟಿ ಫಲಿತಾಂಶವನ್ನು ಲೋಕಸಭಾ ಚುನಾವಣೆಯ ರಿಸಲ್ಟ್ ಬಳಿಕವೇ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ದ್ವಿತೀಯ ಪಿಯುಸಿ 2ರ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದು ಹೇಳಿದ್ದರು. ಕಳೆದ ಮೇ 21ರಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವು ಪ್ರಕಟಗೊಂಡಿತ್ತು.
ಇದನ್ನೂ ಓದಿ | Spoken English Classes : ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ; ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಇಂಗ್ಲಿಷ್ ಕ್ಲಾಸ್!
ಪಿಯುಸಿ ಪರೀಕ್ಷೆಯ ಯಾವ ಅಂಕ ಪರಿಗಣನೆ?
ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ‍್ಯಾಂಕ್‌ಗೆ ಪರಿಗಣನೆ ಮಾಡಲಾಗುತ್ತದೆ.
ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ?
ರಿಸಲ್ಟ್ ಪ್ರಕಟವಾದ ಬಳಿಕ ಚೆಕ್ ಮಾಡುವ ವಿಧಾನದ ಹಂತ ಹಂತದ ಮಾಹಿತಿ ಇಲ್ಲಿದೆ. ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಅಫೀಶಿಯಲ್ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ.
ಓಪನ್ ಆದ ಪುಟದ ಮೇಲ್ಭಾಗದಲ್ಲಿರುವ ʼಪ್ರವೇಶʼ ಆಯ್ಕೆಯನ್ನು ಕ್ಲಿಕ್ ಮಾಡಿ ಬಳಿಕ ʼಯುಜಿಸಿಇಟಿ 2024′ ಆಪ್ಶನ್ ಸೆಲೆಕ್ಟ್ ಮಾಡಿ.
ಇತ್ತೀಚಿನ ಪ್ರಕಟಣೆಗಳು ಎಂದಿರುವ ಕೆಳಗಡೆ ‘ಯುಜಿಸಿಇಟಿ 2024’ ಫಲಿತಾಂಶದ ಲಿಂಕ್ ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿ.
ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, ‘Submit’ ಬಟನ್ ಕ್ಲಿಕ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳ ಫೋನ್ ನಂಬರ್‌ಗೆ ಫಲಿತಾಂಶದ ಮಸೇಜ್ ಬರಲಿದೆ.
ನಾರಾಯಣ ಒಲಿಂಪಿಯಾಡ್ ಶಾಲೆಯ ಹರ್ಷ ಪ್ರಥಮ
ಸಿಇಟಿ 2024ರಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ ವಿದ್ಯಾರ್ಥಿ ಹರ್ಷ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮಾರತ್‌ಹಳ್ಳಿಯ ಚೈತನ್ಯ ಟೆಕ್ನೋ ಶಾಲೆಯ ಮನೋಜ್ ದ್ವಿತೀಯ ಸ್ಥಾನ, ಜಯನಗರ ನೆಹರು ಸ್ಮಾರಕ ವಿದ್ಯಾಲಯದ ಅಭಿನವ್ ತೃತೀಯ ಸ್ಥಾನ ಪಡೆದಿದ್ದಾರೆ.