Site icon Vistara News

DK Shivakumar: ನಕಲಿ ಪತ್ರದೊಂದಿಗೆ ಸುದ್ದಿಗೋಷ್ಠಿ ನಡೆಸಿ ಸೋಲೊಪ್ಪಿಕೊಂಡ ಕೆಸಿಆರ್: ಡಿಕೆಶಿ

DK Shivakumar

ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ನಕಲಿ ಪತ್ರ ಇಟ್ಟುಕೊಂಡು ಪತ್ರಿಕಾಗೋಷ್ಠಿ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು, ಈ ಮೂಲಕ ಮುಂಬರುವ ತೆಲಂಗಾಣ ವಿಧಾನಸಭೆಯ ಚುನಾವಣೆಯ ಸೋಲನ್ನು ಈಗಲೇ ಒಪ್ಪಿಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ತಮ್ಮ ಹೆಸರಿನಲ್ಲಿ ಆ್ಯಪಲ್ ಏರ್ಪಾಡ್ ಉತ್ಪಾದನಾ ಘಟಕ ಸ್ಥಳಾಂತರ ವಿಚಾರವಾಗಿ ಫಾಕ್ಸ್‌ಕಾನ್ ಸಂಸ್ಥೆಗೆ ಬರೆದಿರುವಂತೆ ಸೃಷ್ಟಿಸಲಾದ ನಕಲಿ ಪತ್ರ ಇಟ್ಟುಕೊಂಡು ತೆಲಂಗಾಣ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿರುವ ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಲೆಟರ್ ಹೆಡ್ ವಿನ್ಯಾಸ, ಬಣ್ಣ ಬೇರೆ ಇದೆ. ನನ್ನ ಲೆಟರ್ ಹೆಡ್ ಪ್ರತಿ ಪುಟಕ್ಕೆ ಸಂಖ್ಯೆಗಳಿರುತ್ತವೆ. ನನ್ನ ಲೆಟರ್ ಹೆಡ್ ಹಸಿರು ಬಣ್ಣದಲ್ಲಿ ಇಲ್ಲ. 15 ವರ್ಷಗಳ ಹಿಂದೆ ಶಾಸಕರು ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿದ್ದರು. ಈಗ ಆ ಬಣ್ಣದ ಲೆಟರ್ ಹೆಡ್ ಅನ್ನು ಯಾರೂ ಬಳಸುವುದಿಲ್ಲ. ನನ್ನ ಎಲೆಕ್ಟ್ರಾನಿಕ್ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪತ್ರ ತಯಾರಿಸಲಾಗಿದ್ದು, ಈ ವಿಚಾರವಾಗಿ ವಿಧಾನಸೌಧ ಪೊಲೀಸರಿಗೆ ದೂರು ನೀಡುವಂತೆ ನನ್ನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಕಲಿ ಪತ್ರ ಬಂದಿರುವುದು ದುರಾದೃಷ್ಟಕರ. ಈ ನಕಲಿ ಪತ್ರದ ಕುರಿತು ತನಿಖೆ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಅನೇಕ ಬಂಡವಾಳ ಹೂಡಿಕೆದಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಈಗಷ್ಟೇ ಟೊಯೋಟಾ ಕಂಪನಿ ಜತೆ ಮಾತನಾಡಿದ್ದು, ಅವರು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಮಾಡಲಿದ್ದಾರೆ. ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ ಪಾಟೀಲ್ ಅವರು ಅಮೆರಿಕಕ್ಕೆ ತೆರಳಿ ಬಂಡವಾಳ ಹೂಡಿಕೆದಾರರನ್ನು ಸಂಪರ್ಕಿಸಿದ್ದಾರೆ. ನಮ್ಮ ಸರ್ಕಾರದ ಕಾರ್ಯವೈಖರಿ ಗಮನಿಸಿ ಅನೇಕ ಅಮೆರಿಕ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದು ತೆಲಂಗಾಣ ಸಿಎಂಗೆ ತಿರುಗೇಟು ನೀಡಿದರು.

ಇದನ್ನೂ ಓದಿ | BJP Karnataka : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿದ್ದೆ; ಸಿಗಲ್ಲ ಎಂದು ಗೊತ್ತಾಗಿ ಹಿಂದೆ ಸರಿದೆ ಎಂದ ಶ್ರೀರಾಮುಲು

ನಕಲಿ ಪತ್ರ ಸೃಷ್ಟಿಸಿದವರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಲೆಟರ್ ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿ, ಸಹಿ ನಕಲು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಿ ಅಧಿಕಾರಿ ರಾಜೇಂದ್ರ ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆ್ಯಪಲ್ ಏರ್ಪಾಡ್ ಕಂಪನಿಯನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವಂತೆ ಪತ್ರ ಬರೆಯಲಾಗಿದೆ. ಆದರೆ, ಡಿಕೆಶಿ ಹೆಸರಲ್ಲಿ ನಕಲಿ ಲೆಟರ್ ಹೆಡ್ ಮತ್ತು ನಕಲಿ ಸಹಿ ಬಳಸಿ ಬರೆದಿರುವ ಪತ್ರ‌ವಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ದುರುದ್ದೇಶದಿಂದ ನಕಲಿ ಪತ್ರ ಸೃಷ್ಟಿಸಿ ವೈರಲ್ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಧಿಕಾರಿ ಕೋರಿದ್ದಾರೆ.

ಎಚ್‌ಡಿಕೆ ಮೊದಲು ಎನ್‌ಡಿಎನಿಂದ ಆಚೆ ಬಂದು ನನ್ನ ಬೆಂಬಲಿಸಲಿ: ಡಿಕೆಶಿ ತಿರುಗೇಟು

ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಎನ್‌ಡಿಎ ಮೈತ್ರಿಕೂಟಕ್ಕೆ (NDA Alliance) ಸೇರಿದವರು. ನಮಗೂ ಎನ್‌ಡಿಎಗೂ ಸಂಬಂಧವಿಲ್ಲ. ಮೊದಲು ಎನ್‌ಡಿಎಯಿಂದ ಆಚೆ ಬಂದು ನಂತರ ಬೆಂಬಲದ ಬಗ್ಗೆ ಮಾತನಾಡಲಿ. ಅವರು ಬೆಂಬಲ ನೀಡುವ ಕಾಲದಲ್ಲೇ ಬೆಂಬಲ ನೀಡಲಿಲ್ಲ. ಈಗೇನು ಬೆಂಬಲ ನೀಡುತ್ತಾರೆ? ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಬದ್ಧ ವೈರಿಗಳಾಗಿರುವ ಉಭಯ ನಾಯಕರು ಈಗ ಮತ್ತೊಂದು ಸುತ್ತಿನ ಮಾತಿನ ಯುದ್ಧಕ್ಕೆ ಸಿದ್ಧವಾಗಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ 19 ಶಾಸಕರ ಬೆಂಬಲ ನೀಡುತ್ತೇವೆ’ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಮೊದಲು ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಬರಲಿ ಎಂದು ಹೇಳಿದರು.

ಎಚ್‌ಡಿಕೆ ಮಾತು ಕೇಳಿ ಸಂತಸವಾಯಿತು

ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಕೇಳಿ ಬಹಳ ಸಂತೋಷವಾಗಿದೆ. ಸದ್ಯ ನಮಗೆ ರಾಜ್ಯದ ಜನತೆ 136 ಸೀಟು ಜತೆ ಅಧಿಕಾರ ಕೊಟ್ಟಿದ್ದಾರೆ. ಅವರು ಉತ್ತಮ ವಿರೋಧ ಪಕ್ಷದ ನಾಯಕನಾಗಿ ಸರ್ಕಾರವನ್ನು ತಿದ್ದುವ ಕೆಲಸ ಮಾಡಲಿ. ಟೀಕೆ ಮಾಡುವುದನ್ನು ಬಿಟ್ಟು, ಸರ್ಕಾರವನ್ನು ತಿದ್ದಲಿ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಬಾರಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಅವರ ತಂದೆಯವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಮಾಡಿದೆ. ಅವರಿಗಿರುವ ಅಪಾರ ಅನುಭವದ ಮೂಲಕ ನಮಗೆ ಮಾರ್ಗದರ್ಶನ ನೀಡಲಿ. ಈಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಮಸ್ಕಾರ” ಎಂದು ತಿಳಿಸಿದರು.

ಕಾಂಗ್ರೆಸ್‌ ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!

ಕರ್ನಾಟಕ ಕಾಂಗ್ರೆಸ್‌ನಲ್ಲಿ (‌Congress Karnataka) ಸಿಎಂ ಗಾದಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಚಿವರು ಮತ್ತು ಶಾಸಕರ ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗೆ ಬ್ರೇಕ್‌ ಹಾಕಲು ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್‌ (DCM DK Shivakumar) ಬ್ರೇಕ್‌ ಹಾಕಲು ಮುಂದಾಗಿದ್ದಾರೆ. ಯಾರೂ ರಾಜಕೀಯ ಭವಿಷ್ಯವನ್ನು (Political Future) ಹಾಳು ಮಾಡಿಕೊಳ್ಳಲು ಹೋಗಬೇಡಿ. ಜತೆಗೆ ಪಕ್ಷದ ಭವಿಷ್ಯವನ್ನು ಸಹ ಹಾಳು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾವು ಜನಸೇವೆಯನ್ನು ಮಾಡಬೇಕು. ಗ್ಯಾರಂಟಿ ಯೋಜನೆ (Congress Guarantee Scheme) ಸಮರ್ಪಕವಾಗಿ ಜಾರಿಯಾಗಿದೆಯೇ ಎಂದು ಪರಿಶೀಲನೆ ಮಾಡಬೇಕು. ಲೋಕಸಭಾ ಚುನಾವಣೆ (Lok Sabha Election 2024) ನಮಗೆ ಬಹು ಮುಖ್ಯವಾಗಿದೆ. ಈ ಕಾರಣಕ್ಕೆ ಸಚಿವರಿಗೆ ಪ್ರವಾಸ ಮಾಡುವಂತೆ ಇಂದು ಸಿಎಂ ನಿವಾಸದಲ್ಲಿ ನಡೆದ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ (Breakfast meeting) ಸೂಚನೆ ಕೊಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: Vistara Kannada Sambhrama : ವಿಭಿನ್ನತೆಯಿಂದ ಪ್ರಜ್ಞಾವಂತರ ಮುಟ್ಟುವಲ್ಲಿ ವಿಸ್ತಾರ ನ್ಯೂಸ್‌ ಯಶಸ್ವಿ; ಹರಿಪ್ರಕಾಶ್‌ ಕೋಣೆಮನೆ

ಜಿಲ್ಲಾವಾರು ಸರ್ವೆಗೆ ಸೂಚನೆ

ಸಚಿವರಿಗೆ ಜಿಲ್ಲಾವಾರು ಸರ್ವೆ ಮಾಡಿ ವರದಿ ನೀಡಲು ಸೂಚಿಸಿದ್ದೆವು. ಇನ್ನೂ ಕೆಲವರು ನಮಗೆ ವರದಿ ಕೊಟ್ಟಿಲ್ಲ. ಅವರು ವರದಿ ಕೊಟ್ಟ ಬಳಿಕ‌ ನಾವು ಸರ್ವೇ ಮಾಡಿಸಬೇಕು. ಮತದಾರರ ಮಿಡಿತ ಪರೀಕ್ಷೆ ಮಾಡಿಸಬೇಕು. ಅದಕ್ಕೆ‌ ಇಂದು ಸಚಿವರಿಗೆ ಸೂಚನೆ ನೀಡಿದ್ದೇವೆ. ಯಾರು ಕೂಡ ಮಾತನಾಡಬೇಡಿ ಅಂತ ಹೇಳಿದ್ದೇವೆ. ನಾನು ಮತ್ತು ಸಿಎಂ ಸೇರಿದಂತೆ ಯಾರೂ ಮಾತನಾಡಬಾರದು. ಐದು ವರ್ಷದ ನಮಗೆ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ ಎಂದು ಹೇಳಿದರು.

Exit mobile version