ಬೆಂಗಳೂರು: ಪಿಎಸ್‌ಐ ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯ (PSI Exam Result) ತಾತ್ಕಾಲಿಕ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ತಾತ್ಕಾಲಿಕ ಅಂಕಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗಳಿದ್ದಲ್ಲಿ ಇ-ಮೇಲ್ ಮೂಲಕ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಮಾರ್ಚ್ 5ರ ಸಂಜೆ 5.30 ವರೆಗೂ keauthority-ka@nic.in ಇ-ಮೇಲ್‌ಗೆ ಮಾತ್ರ ಸಲ್ಲಿಸಬೇಕು. ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಕೆಇಎ ಮಾಹಿತಿ ನೀಡಿದೆ.
ಮಾ. 1ರಂದು ಪ್ರಕಟಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾತ್ರ ಇ-ಮೇಲ್ ಮೂಲಕ ಸಲ್ಲಿಸಬೇಕು. ಈಗಾಗಲೇ ಕೀ ಉತ್ತರಗಳನ್ನು ಅಂತಿಮಗೊಳಿಸಿದ್ದು, ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ | Job Alert: ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಗುಡ್‌ನ್ಯೂಸ್; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ
545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದಿಂದ ಜ. 23ರಂದು ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ನಡೆಸಿತ್ತು. ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 54 ಸಾವಿರ ಅಭ್ಯರ್ಥಿಗಳಲ್ಲಿ ಶೇ 66ರಷ್ಟು ಮಂದಿ ಹಾಜರಾಗಿದ್ದರು.