ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Exam) ಮೊದಲ ಬಾರಿ ವೆಬ್ ಕಾಸ್ಟಿಂಗ್ (Webcasting) ವ್ಯವಸ್ಥೆ ಅಳವಡಿಸಿಕೊಂಡಿದೆ. ಕ್ಯಾಮೆರಾ ಕಣ್ಗಾವಲಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಶನಿವಾರ ನಡೆಯುತ್ತಿದೆ. ಹೀಗಾಗಿ ಕೆಇಎ ಬೋರ್ಡ್‌ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಭೇಟಿ ನೀಡಿ ವೆಬ್ ಕಾಸ್ಟಿಂಗ್ ಪರಿಶೀಲನೆ ನಡೆಸಿದರು.
ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಅಳವಡಿಕೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರು ಕೆಇಎ ಬೋರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಎಂಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ (Competitive Examination) ಶನಿವಾರ ಮತ್ತು ಭಾನುವಾರ (ಜುಲೈ 13, 14) ಕ್ಯಾಮೆರಾ ಕಣ್ಗಾವಲಿಯಲ್ಲಿ ಲಿಖಿತ ಪರೀಕ್ಷೆಯನ್ನು ಕೆಇಎ ನಡೆಸುತ್ತಿದೆ.
ಬೆಂಗಳೂರು, ಕಲಬುರಗಿ, ಧಾರವಾಡ ಮತ್ತು ಬಳ್ಳಾರಿ ನಗರಗಳ ಒಟ್ಟು 22 ಕೇಂದ್ರಗಳ, 377 ಕೊಠಡಿಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮೆರಾ ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಮಾಡಲಾಗಿದೆ.
ಇದನ್ನೂ ಓದಿ | Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್ ಮಾಡಿದ ನಗರಾಭಿವೃದ್ಧಿ ಇಲಾಖೆ!
ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು,ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಮುಂದಿನ ಹೆಜ್ಜೆ ಇಟ್ಟಿದ್ದೇವೆ. ಇಂದು ಹಲವು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿವೆ. 358 ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳು ಬಳಕೆ ಮಾಡಲಾಗಿದ್ದು, ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಅಭ್ಯರ್ಥಿಗಳ ಬೆರಳಚ್ಚು ಸಹ ತೆಗೆದುಕೊಂಡು ತಂತ್ರಜ್ಞಾನದ ನೆರವಿನಿಂದ ಎಕ್ಸಾಂ ನಡೆಯುತ್ತಿದೆ. ಎಲ್ಲ ಕೇಂದ್ರಗಳ ಸ್ಥಿತಿಗತಿ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಕೂತು ನೋಡಬಹುದು. ಇವತ್ತು ಪ್ರಾಯೋಗಿಕವಾಗಿ ಇದನ್ನು ನಾವು ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ವೆಬ್ ಕಾಸ್ಟಿಂಗ್
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಲ್ಲಿ ಆಗುವ ಬೆಳವಣಿಗೆಗಳನ್ನು ಕಮಾಂಡ್ ಸೆಂಟರ್‌ನಲ್ಲಿರುವ ಟಿವಿಗಳಲ್ಲಿ ವೀಕ್ಷಿಸಬಹುದಾಗಿದೆ. ಇದರ ಮೇಲ್ವಿಚಾರಣೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು.
ಇದನ್ನೂ ಓದಿ | Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ
ಇತ್ತೀಚೆಗೆ ನಡೆಸಿದ ಡಿಸಿಇಟಿ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಪ್ರಾಂಶುಪಾಲರ ಕಚೇರಿಯಲ್ಲಿನ ಬೆಳವಣಿಗೆಗಳನ್ನು ವೆಬ್ ಕಾಸ್ಟಿಂಗ್ ಮಾಡಿದ್ದು ಯಶಸ್ವಿಯಾದ ನಂತರ ಪರೀಕ್ಷೆ ನಡೆಯುವ ಕೊಠಡಿಯಿಂದಲೂ ವೆಬ್ ಕಾಸ್ಟಿಂಗ್ ಮಾಡಲು ತೀರ್ಮಾನಿಸಲಾಗಿದೆ. ಕಲಬುರಗಿ, ಧಾರವಾಡ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಯೂ ಒಂದೊಂದು ಉಪ ಕಮಾಂಡಿಂಗ್ ಸೆಂಟರ್ ಇದ್ದು, ಅಲ್ಲಿಯೂ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ ಎಂದು ಕೆಇಎ ತಿಳಿಸಿದೆ.