ಯಾದಗಿರಿ: ವಿವಿಧ ನಿಗಮ ಮಂಡಳಿಗಳ ಹುದ್ದೆಗಳ (Posts of Boards of Corporations) ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿದ್ದ ನೇಮಕಾತಿ ಪರೀಕ್ಷೆ ವೇಳೆ ನಡೆದ ಅಕ್ರಮ (KEA Exam Scam ) ಸಂಬಂಧ ಈಗಾಗಲೇ ಒಂಭತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲು (FIR registered) ಮಾಡಲಾಗಿದೆ. ಅಲ್ಲದೆ, ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಭಾನುವಾರ ನಡೆಯುತ್ತಿರುವ ಕೆಇಎ ಪರೀಕ್ಷೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಅಭ್ಯರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಲು ಕಾರಣವಾಯಿತು. ಇನ್ನು ಫುಲ್ ಆರ್ಮ್ (ಪೂರ್ಣ ತೋಳು) ಇರುವ ಅಂಗಿ (Full Arm Shirt) ಧರಿಸಿದ್ದ ಅಭ್ಯರ್ಥಿಗೆ ಅವಕಾಶವನ್ನು ಕೊಡದ ಹಿನ್ನೆಲೆಯಲ್ಲಿ ಅವರು ತಮ್ಮ ಶರ್ಟ್ ತೋಳನ್ನು ಕಟ್ ಮಾಡಿಕೊಂಡು ಪರೀಕ್ಷೆಗೆ ಹಾಜರಾದ ಘಟನೆಯೂ ನಡೆದಿದೆ.
ಅಕ್ರಮಗಳ ಹಿನ್ನೆಲೆಯಲ್ಲಿ ಕೆಎಇ ಪರೀಕ್ಷೆಯಲ್ಲಿ ಹೆಚ್ಚಿನ ನಿರ್ಬಂಧವನ್ನು ವಿಧಿಸಲಾಗಿದೆ. ಫುಲ್ ತೋಳಿನ ಶರ್ಟ್ ಧರಿಸಿ ಪರೀಕ್ಷೆಗೆ ಬಂದಿದ್ದ ರಾಯಚೂರಿನ ವಿದ್ಯಾರ್ಥಿ ಪರದಾಟ ನಡೆಸುವಂತಾಯಿತು. ಅರ್ಧ ತೋಳಿನ ಶರ್ಟ್ ಮಾತ್ರ ಧರಿಸಬೇಕು ಎನ್ನುವ ನಿಯಮ ಇರುವುದನ್ನು ಸಿಬ್ಬಂದಿ ಹೇಳಿದರು. ಹೀಗಾಗಿ ಅಭ್ಯರ್ಥಿಯು ಅನಿವಾರ್ಯವಾಗಿ ಪರೀಕ್ಷಾ ಕೇಂದ್ರದ ಮುಂದೆಯೇ ತಮ್ಮ ಶರ್ಟ್‌ನ ತೋಳನ್ನು ಕಟ್ ಮಾಡಿಕೊಂಡು ಪರೀಕ್ಷೆಗೆ ಹಾಜರಾದರು. ಶರಣಬಸವೇಶ್ವರರ ವಿವಿ ಪರೀಕ್ಷಾ ಕೇಂದ್ರದ ಮುಂದೆ ಈ ಘಟನೆ ನಡೆದಿದೆ.
ಇನ್ನು ಯಾರೂ ಸಹ ಚಪ್ಪಲಿ, ಶೂ ಧರಿಸುವಂತಿಲ್ಲ, ಕಾಲುಂಗುರ, ಕಾಲು ಚೈನ್‌ಗೂ ಸಹ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ಪರೀಕ್ಷಾ ಕೇಂದ್ರಗಳ ಮುಂದೆ ಭದ್ರತಾ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ನಡುವೆ ತೀವ್ರ ವಾಗ್ವಾದ ಸಹ ನಡೆದಿದೆ. ಈಗ ಯಾದಗಿರಿ ಜಿಲ್ಲೆಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
ಏನಿದು ಪ್ರಕರಣ?
ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದರಿಂದ ಅಕ್ರಮ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ 9 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದ್ದು, ಒಟ್ಟು 16 ಮಂದಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿತ್ತು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ನೀಡಿದ್ದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ IPC 109, 114, 120(ಬಿ), 420 ಅಡಿ ಕೇಸ್ ದಾಖಲು ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‌ಪಿ ಜಿ. ಸಂಗೀತಾ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ತಂಡಗಳನ್ನು ನೇಮಿಸಲಾಗಿದೆ.
ಅಕ್ರಮದಲ್ಲಿ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಹೆಸರು
ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಹೆಸರು ಕೇಳಿಬಂದಿದೆ. ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆತನಿಗೆ ಸಹಾಯ ಮಾಡುತ್ತಿದ್ದ ಸಹೋದರ ಅಂಬರೀಶ್ ಹಾಗೂ ಆರ್.ಡಿ. ಪಾಟೀಲ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗೆ ಮತ್ತೆ ಆರ್.ಡಿ ಪಾಟೀಲ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಬಳಸುತ್ತಿದ್ದ ಬ್ಲೂಟೂತ್ ಡಿವೈಸ್‌ಗಳನ್ನು ಆರ್.ಡಿ. ಪಾಟೀಲ್ ಸಹಚರರ ಬಳಿ ತಂದಿರುವುದು ಎನ್ನಲಾಗಿದೆ.
ಲಕ್ಷ ಲಕ್ಷ ಡೀಲ್
ಕಲಬುರಗಿ ನಗರ ಹಾಗೂ ಅಫಜಲಪುರದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಒಬ್ಬೊಬ್ಬ ಅಭ್ಯರ್ಥಿಯಿಂದ 20-25 ಲಕ್ಷ ರೂ. ಪಡೆಯಲು ಡೀಲ್ ಮಾಡಿಕೊಂಡ ಆರೋಪ ಕೇಳಿಬಂದಿದೆ. ಆರ್.ಡಿ. ಪಾಟೀಲ್ ಮನೆಯಿಂದಲೇ ಈ ಡೀಲ್ ನಡೆದಿದೆ ಎನ್ನಲಾಗಿದೆ. ಆಕಾಶ ಮಂಠಾಳೆ ಬೀದರ್, ಸಂತೋಷ್ ಯಾಳಗಿ ಜೇವರ್ಗಿ ಮತ್ತು ಸೊನ್ನ ಗ್ರಾಮದ ಬಾಬು ಚಾಂದಶೇಖ್ ಎಂಬ ಅಭ್ಯರ್ಥಿಗಳಿಂದ ಪರೀಕ್ಷೆ ಅಕ್ರಮ ನಡೆದಿದೆ.
ಅಭ್ಯರ್ಥಿ ಆಕಾಶ್ ಮಂಠಾಳೆ 25 ಲಕ್ಷ ರೂ. ಡೀಲ್ ಫಿಕ್ಸ್ ಮಾಡಿಕೊಂಡಿದ್ದು, ಮುಂಗಡ 8 ಲಕ್ಷ ರೂ.ಗಳನ್ನು ಆರ್.ಡಿ. ಪಾಟೀಲ್‌ಗೆ ನೀಡಿದ್ದಾನೆ. ಅಭ್ಯರ್ಥಿ ಸಂತೋಷ್ ಯಾಳಗಿ 20 ಲಕ್ಷಕ್ಕೆ ಡೀಲ್ ಮಾಡಿಕೊಂಡು, ಮುಂಗಡ 5 ಲಕ್ಷ ನೀಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ | Exam Cheating : ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಸೇರಿ ಮೂವರು ಅರೆಸ್ಟ್!
ಪರೀಕ್ಷಾ ಕೇಂದ್ರದ ಹೊರಗಡೆಯಿಂದ ಕೀ ಆನ್ಸರ್ ಹೇಳಿದ್ದ ಗುರುರಾಜ್, ವಿಜಯಕುಮಾರ್, ಗಣೇಶ್, ಬಾಪು ಯಾಳಗಿ ಮತ್ತು ಆಸೀಫ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ಅಕ್ರಮಕ್ಕೆ ಬಳಸಿದ್ದ ಎರಡು ಕಾರು, ಎರಡು ಬ್ಲೂಟೂತ್ ಡಿವೈಸ್ ಜಪ್ತಿ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣಾವ್ಯಾಪ್ತಿಯಲ್ಲಿ ಲಕ್ಷ್ಮಿ ಪುತ್ರ ಎಂಬಾತನ ವಿರುದ್ಧ ದೂರು ದಾಖಲಾಗಿದೆ.