ಬಾಗಲಕೋಟೆ: ಇಂದು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ತಲವಾರ್ ಅನ್ನು ಇಟ್ಟುಕೊಳ್ಳಬೇಕು. ಈ ಖಡ್ಗ, ತಲವಾರ್ ಅನ್ನು ಹೊಡೆಯೋದಕ್ಕೆ ಇಟ್ಟುಕೊಳ್ಳುವುದಲ್ಲ, ಬದಲಾಗಿ ಗೋವು, ನಮ್ಮ ಅಕ್ಕ-ತಂಗಿಯರು, ರಾಷ್ಟ್ರ, ಮಠ-ಮಂದಿರಗಳ ರಕ್ಷಣೆಗೋಸ್ಕರ ಇಟ್ಟುಕೊಳ್ಳಬೇಕು. ಒಂದು ವೇಳೆ ಶಿವಾಜಿ ಮಹಾರಾಜರು ಜನ್ಮ ತಾಳದೇ ಹೋಗಿದ್ದರೆ ಇಂದು ನಾವೆಲ್ಲರೂ ಕೇಸರಿ ಪೇಟವನ್ನು ಹಾಕಿಕೊಳ್ಳುವ ಸ್ಥಿತಿಯೇ ಇರುತ್ತಿರಲಿಲ್ಲ. ಹಸಿರು ಬಾವುಟವನ್ನು ಹಿಡಿದಿಟ್ಟುಕೊಳ್ಳಬೇಕಿತ್ತು. “ಅಲ್ಲಾ..” ಎಂಬ ಧ್ವನಿ ಮಾತ್ರವೇ ಕೇಳುತ್ತಿತ್ತು ಎಂದು ಎಂದು ಶ್ರೀರಾಮಸೇನೆ ಮುಖ್ಯಸ್ಥ, ಕಾರ್ಕಳ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಚುನಾವಣೆ (Karnataka Election 2023) ಕಾವು ಏರತೊಡಗಿದೆ.
ಇಲ್ಲಿ ಫೆಬ್ರವರಿ (೧೯) ಏರ್ಪಡಿಸಲಾಗಿದ್ದ ಶಿವಾಜಿ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೪೦೦ ವರ್ಷಗಳ ಹಿಂದೆ ಶಿವಾಜಿ ಹುಟ್ಟದೇ ಇದ್ದಿದ್ದರೆ ಇಂದು ಏನೇನು ಬದಲಾವಣೆ ಆಗಿರುತ್ತಿತ್ತು ಎಂಬುದನ್ನು ಕಲ್ಪನೆ ಮಾಡಿಕೊಂಡರೇ ಹುಚ್ಚು ಹಿಡಿಯುತ್ತದೆ. ಇಲ್ಲಿ ಕುಳಿತಿರುವ ಎಲ್ಲರೂ ಜಾಳಗಿ ಟೋಪಿ ಹಾಕಿಕೊಂಡು ಇರುತ್ತಿದ್ದೆವು. ಆಡಿನ ಗಡ್ಡ ಬಿಟ್ಟುಕೊಂಡು ಇರುತ್ತಿದ್ದೆವು. ಜೀಜಾ ಮಾತಾಗಳು ಬುರ್ಕಾ ಹಾಕಿಕೊಂಡು ಕುಳಿತುಕೊಂಡಿರುತ್ತಿದ್ದವು. ಈ ಕೇಸರಿ ಪೇಟವೂ ಇರುತ್ತಿರಲಿಲ್ಲ. ಹಸಿರು ಬಣ್ಣವೇ ಇರುತ್ತಿತ್ತು. ಹಣೆಯ ಮೇಲೆ ವಿಭೂತಿ, ಕುಂಕುಮ, ಗಂಧ ಇರುತ್ತಿರಲಿಲ್ಲ. ನಮ್ಮ ದೇವಸ್ಥಾನದ ಗಂಟೆ ನಿನಾದವೂ ಕೇಳಿಸುತ್ತಿರಲಿಲ್ಲ. ಅಲ್ಲಿ ಒಂದೇ ಒಂದು ಧ್ವನಿ ಕೇಳಿಸುತ್ತಿತ್ತು. ಅದೇ “ಅಲ್ಲಾ..” ಎಂದು ಮುತಾಲಿಕ್ ಆರೋಪಿಸಿದರು.
ಇದನ್ನೂ ಓದಿ: Karnataka Election 2023: ಫೆ. 20ಕ್ಕೆ ಉಡುಪಿಗೆ ಜೆ.ಪಿ. ನಡ್ಡಾ; ಫ್ಲೆಕ್ಸ್ ಹರಿದ ಕಿಡಿಗೇಡಿಗಳ ವಿರುದ್ಧ ಬಿಜೆಪಿ ದೂರು
ಸಾವಿರಾರು ವರ್ಷದಿಂದ ಪೂಜೆ, ಪುನಸ್ಕಾರ ಮಾಡಿಕೊಂಡು ಬಂದಿದ್ದೇವೆ. ಆಗ ಆಕಳ ಹತ್ಯೆ ಬೀದಿ ಬೀದಿ, ಓಣಿ ಓಣಿಯಲ್ಲಿ ಆಗುತ್ತಿತ್ತು. ನಮ್ಮ ಎಲ್ಲ ಅಕ್ಕ-ತಂಗಿಯರು ಮನೆಯಿಂದ ಹೊರಗಡೆ ಬರಲು ಆಗುತ್ತಿರಲಿಲ್ಲ. ಹಿಂದುಗಳು ಗುಲಾಮರಾಗಿ ಇರುತ್ತಿದ್ದೆವು ಎಂದು ಹೇಳಿದರು.
ಆಯುಧ ಪೂಜೆ ಅಂದರೆ ನಟ್, ಸ್ಕ್ರೂ ಡ್ರೈವರ್, ಕಂಪಾಸು, ಸ್ಪ್ಯಾನರ್ ಇತ್ಯಾದಿ ಸುಡುಗಾಡುಗಳನ್ನು ಇಟ್ಟುಕೊಂಡು ಪೂಜೆ ಮಾಡುವುದಲ್ಲ. ಶಸ್ತ್ರ ಅಂದರೆ ತಲವಾರ್, ಕತ್ತಿ, ಕುರುಪಿ, ಕೊಡಲಿ, ಚಾಕುಗಳಂತಹ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಇವನ್ನೆಲ್ಲ ಇಟ್ಟರೆ ಪೊಲೀಸರು ಬಿಡ್ತಾರೇನ್ರಿ ಅಂತ ಕೇಳುತ್ತೀರಿ. ಪೊಲೀಸರು ಅರೆಸ್ಟ್ ಮಾಡುವುದಾದರೆ ಮೊದಲು ದುರ್ಗಾ ಮಾತೆಯನ್ನು ಮಾಡಬೇಕು. ಯಾಕೆಂದರೆ ಆಕೆ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಮೊದಲು ದುರ್ಗೆಯನ್ನು ಅರೆಸ್ಟ್ ಮಾಡಲಿ. ಇನ್ನು ರಾಮನ ಭಂಟ ಹನುಮಂತನ ಕೈಯಲ್ಲಿ ಗದೆ ಇದೆ, ಈಶ್ವರನ ಕೈಯಲ್ಲಿ ತ್ರಿಶೂಲ ಇದೆ. ಅವರಿಬ್ಬರನ್ನೂ ಬಂಧಿಸಲಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
10 ಮುಸ್ಲಿಂ ಹುಡುಗಿಯರ ಹಾರಿಸಿಕೊಂಡು ಹೋಗಿ
ಲವ್ ಜಿಹಾದ್ ವಿರುದ್ಧವೂ ಕಿಡಿಕಾರಿರುವ ಮುತಾಲಿಕ್, ನಮಗೂ ಲೈನ್ ಹೊಡೆಯೋದು ಗೊತ್ತು ಎಂದು ಹೇಳಿದರು. ತಕ್ಷಣವೇ ಎಚ್ಚೆತ್ತ ಅವರು ನಗುತ್ತಾ, ನಾನಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಇಲ್ಲಿದ್ದಂತಹ ತರುಣ ಶಕ್ತಿಗೆ ನಾನು ಆಹ್ವಾನ ಕೊಡುತ್ತೇನೆ. ಒಂದು ಹಿಂದು ಹುಡುಗಿ ಹೋದರೆ, ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ. ನಿಮಗೆ ರಕ್ಷಣೆ, ಉದ್ಯೋಗ ಎಲ್ಲ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ಇದನ್ನೂ ಓದಿ: Sindhuri Vs Roopa : IAS ಅಧಿಕಾರಿಗಳಿಗೆ ಅಸಭ್ಯ ಫೋಟೊ ಕಳುಹಿಸುತ್ತಿದ್ದ ರೋಹಿಣಿ ಸಿಂಧೂರಿ; ಫೋಟೊ ಬಿಡುಗಡೆ ಮಾಡಿದ ರೂಪಾ IPS
ಬಿಜೆಪಿಯವರು ತಮಗೆ ದ್ರೋಹ ಮಾಡಿದರು ಎಂದು ಪ್ರಮೋದ್ ಮುತಾಲಿಕ್ ಮಾಡಿರುವ ಆರೋಪದ ವಿಡಿಯೊ ಇಲ್ಲಿದೆ
ಶಿವಾಜಿ ತನ್ನ ೧೬ನೇ ವಯಸ್ಸಿನಲ್ಲಿ ಸೈನ್ಯ ಕಟ್ಟಿ, ತೋರನಗಡ ಕೋಟೆಯನ್ನೇ ಗೆದ್ದರು. ಮೊದಲನೇ ಕೋಟೆ ಗೆದ್ದೆ, ಮುಂದಿನ ಕೋಟೆ ಗೆದ್ದು ತೋರಿಸುತ್ತೇನೆ ಅಮ್ಮ ಎಂದು ಅವರು ತಾಯಿ ಜೀಜಾಬಾಯಿಗೆ ಹೇಳಿದರು. ೧೬ನೇ ವಯಸ್ಸಿಗೆ ಅವರು ಸೈನ್ಯ ಕಟ್ಟಲು ಯಾರನ್ನು ಬಳಸಿಕೊಂಡರು? ಈಗಿನ ಅದಾನಿ, ಅಂಬಾನಿ, ಮಲ್ಯ ಅಥವಾ ಇನ್ನು ಬೇರೆಯಂಥವರನ್ನು ಬಳಸಿಕೊಳ್ಳಲಿಲ್ಲ. ಎಂಎಲ್‌ಎ, ಎಂಪಿಗಳಂಥವರನ್ನು ಕರೆಯಲಿಲ್ಲ. ಸಾಮಾನ್ಯ ಜನರನ್ನು, ಮಕ್ಕಳನ್ನು, ಕಾರ್ಮಿಕರನ್ನು, ಗುಡ್ಡಗಾಡು ಜನರನ್ನು ಕರೆದುಕೊಂಡು ಸೈನ್ಯ ಕಟ್ಟಿದರು ಎಂದು ಬಿಜೆಪಿಗೆ ಪರೋಕ್ಷ ಚಾಟಿ ಬೀಸಿದರು.