ದಾವಣಗೆರೆ: ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕೆಳದಿ ಚೆನ್ನಮ್ಮನ ಹೆಸರಿಡುವಂತೆ ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸೋಮವಾರ ತಿಳಿಸಿದ್ದಾರೆ.
ಮಠದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕೌಶಲ್ಯ ಮತ್ತು ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಲು ಆಹ್ವಾನಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಈ ಆಗ್ರಹ ಮಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಘೋಷಿಸಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟವು ನಿರ್ಧಾರ ಕೈಗೊಂಡಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಡಿಯೂರಪ್ಪ ತೋರಿದ ಆಸಕ್ತಿಯನ್ನು ಸ್ಮರಿಸಿದ ಬೊಮ್ಮಾಯಿ ಅವರು, 2006-07ರಲ್ಲಿ ಯೋಜನೆ ರೂಪಿಸಿದ್ದು, 2020ರಲ್ಲಿ ನಿಜವಾದ ಕಾಮಗಾರಿ ಆರಂಭವಾಗಿದೆ. ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನು ಮಾಡಿದ್ದು ಯಡಿಯೂರಪ್ಪನವರು. ಯಡಿಯೂರಪ್ಪ ಒಬ್ಬ ಶಕ್ತಿ. ಅವರು ಮಾಡಿದ ಕಾರ್ಯವನ್ನು ನಾಡಿನ ಜನತೆ ನೋಡಿದ್ದಾರೆ. ಅವರ ಹೆಸರು ಇಡಬೇಕು ಎನ್ನುವುದು ಅಲ್ಲಿನ ಜನರ ಆಸೆಯಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಹೆಸರು ಇಟ್ಟರೆ ನಾವು ಸಂತೋಷ ಪಡುತ್ತೇವೆ. ಆದರೆ ಯಡಿಯೂರಪ್ಪ ನವರು ತಮ್ಮ ಹೆಸರು ಬೇಡ, ಯಾರಾದರೂ ಮಹಾನಿಯರ ಹೆಸರು ಇಡಿ ಎಂದು ಹೇಳಿದ್ದಾರೆ. ಅದು ಯಡಿಯೂರಪ್ಪ ಅವರ ದೊಡ್ಡಗುಣ.
ಈ ಹಿಂದೆ ವಿಮಾನ ನಿಲ್ದಾಣಗಳಿಗೆ ಕೆಳದಿ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಮತ್ತು ಮಯೂರವರ್ಮ, 12 ನೇ ಶತಮಾನದ ಸಮಾಜ ಸುಧಾರಕಿ ಅಕ್ಕ ಮಹಾದೇವಿ, ಭಾರತ ಸಂವಿಧಾನದ ಪಿತಾಮಹ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪು ಅವರಂತಹ ದೊರೆಗಳನ್ನು ಒಳಗೊಂಡ ದೊಡ್ಡ ಪಟ್ಟಿಯನ್ನು ಸೂಚಿಸಲಾಗಿತ್ತು. ಆದರೆ ಈಗ ಕೆಳದಿ ಚೆನ್ನಮ್ಮ ಧೈರ್ಯ, ಶೌರ್ಯದ ಜೊತೆಗೆ, ಧಾರ್ಮಿಕ ನಿಲುವಿಗೂ ಹೆಸರಾದವಳು.
ಹಾಗಾಗಿ ಕೆಳದಿ ರಾಣಿ ಚನ್ನಮ್ಮನ ಹೆಸರನ್ನು ಶಿವಮೊಗ್ಗ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ವರ್ಷವೂ ಆಗಿರುವುದರಿಂದ ಕೆಳದಿ ಚೆನ್ನಮ್ಮನ ಹೆಸರು ಮತ್ತಷ್ಟು ಪ್ರಸತುತವಾಗುತ್ತದೆ. ಮಲೆನಾಡಿನ ವಿಮಾನ ನಿಲ್ದಣಕ್ಕೆ ಕೆಳದಿ ಚನ್ನಮ್ಮನ ಹೆಸರಿಟ್ಟರೆ ಪ್ರಸಿದ್ದವಾಗುತ್ತದೆ ಎಂದರು.
ಇದನ್ನೂ ಓದಿ: Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!