Site icon Vistara News

Kempegowda Jayanti: ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ; ಸಿದ್ದರಾಮಯ್ಯ

Kempegowda Jayanti All people of the society should live secular says CM Siddaramaiah

ಬೆಂಗಳೂರು: ಕೆಂಪೇಗೌಡರು (Kempegowda Jayanti) ಯಾವುದೇ ಜಾತಿಗೆ ಸೀಮಿತವಾದವರಲ್ಲ. ಜಾತ್ಯತೀತರಾಗಿ ಅವರು ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Kempegowda Jayanti: ಕೆಂಪೇಗೌಡರ ಆಡಳಿತವೇ ನಮಗೆ ಪ್ರೇರಣೆ; ಸಿಎಂ ಸಿದ್ದರಾಮಯ್ಯ

ನಾಡಿನ ಜನತೆ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವುದಲ್ಲದೇ ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಕಾರಣದಿಂದ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕೆಂಪೇಗೌಡರು ಜಾತ್ಯತೀತ ವ್ಯಕ್ತಿ

ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತವನ್ನು ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡಣೆ ಮಾಡಲಿಲ್ಲ. ಎಲ್ಲಾ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು. ಅವರ ಆಡಳಿತ ಕಾಲದಲ್ಲಿ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂದು ತಿಳಿಯುತ್ತದೆ. ಕೆಂಪೇಗೌಡರು ಕೃಷ್ಣದೇವರಾಯರ ಕಾಲದಲ್ಲಿ ಬೆಂಗಳೂರು ಪ್ರಾಂತ್ಯದ ಆಡಳಿತಗಾರರಾಗಿದ್ದರು ಎಂದರು.

ಎಲ್ಲರಲ್ಲೂ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬಿದರು

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿ ಮಾಡಲಾರರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇತಿಹಾಸವನ್ನು ಅರಿತು ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು ಎಂದರು. ಸಮಾಜದಲ್ಲಿ ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಮಾನವರಾಗಿ ಬದುಕಬೇಕು. ಕೆಂಪೇಗೌಡರು ಅವರ ಆಡಳಿತಾವಧಿಯಲ್ಲಿ ಜಾತಿ ಮಾಡಲಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ ಎಂದರು.

ದೂರದೃಷ್ಟಿ ಇಟ್ಟುಕೊಂಡು ಆರ್ಥಿಕ, ಸಾಮಾಜಿಕ ಬೆಳವಣಿಗೆ ಯಾವ ರೀತಿಯಾಗಬೇಕೆಂದು ಅರಿತು, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದರು. ಆರ್ಥಿಕವಾಗಿ ಬೆಂಗಳೂರು ಬೆಳೆಯಬೇಕೆಂದು ನಗರದಲ್ಲಿ ಕೆರೆಗಳು, ದೇವಾಲಯಗಳು, ಪೇಟೆಗಳನ್ನು ನಿರ್ಮಾಣ ಮಾಡಿದರು. ಅಂಥ ವ್ಯಕ್ತಿಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ್ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ತಾನ ಮಠದ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಕೆ.ಎಚ್. ಮುನಿಯಪ್ಪ, ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್, ರಾಮೋಜಿ ಗೌಡ, ಪುಟ್ಟಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ವಿಶ್ವನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version