Site icon Vistara News

KempeGowda Jayanti: ಬೆಂಗಳೂರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯಲು ಕೆಂಪೇಗೌಡರು ಕಾರಣ: ಸಿದ್ದರಾಮಯ್ಯ

KempeGowda Jayanti at Hassan

ಹಾಸನ: 2013ಕ್ಕೂ ಮುನ್ನ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡುತ್ತಿರಲಿಲ್ಲ. ಆಗ ಆಚರಣೆ ಮಾಡಬೇಕು ಎಂದು ತೀರ್ಮಾನ ಮಾಡಿ, ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಕೇಳಿದೆವು. ನಂತರ ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮೊದಲು ಜಯಂತಿಯನ್ನು (KempeGowda Jayanti) ಆಚರಣೆ ಮಾಡಿದ್ದೇ ನಾವು. ಬೆಂಗಳೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ, ಹೆಸರನ್ನು ಮಾಡಿದ್ದರೆ, ಅದಕ್ಕೆ ಬೆಂಗಳೂರು ಕಟ್ಟಿದಂತಹ ಕೆಂಪೇಗೌಡರು ಕಾರಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಗರದ ಹಳೇ ತಾಲೂಕು ಕಚೇರಿ ಪಕ್ಕದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ, ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರವನ್ನು ಮಾಡಿದ್ದೂ ನಾವೇ. ಅದಕ್ಕೆ ಐದು ಎಕರೆ ಜಾಗವನ್ನು ಕೊಟ್ಟಿದ್ದು ಕೂಡ ನಾವು. ಇವೆಲ್ಲಾ ಇತಿಹಾಸ, ಯಾರೂ ತಿರುಚುವುದಕ್ಕೆ ಆಗುವುದಿಲ್ಲ. ಕೆಲವರು ಪಠ್ಯಪುಸ್ತಕ ತಿರುಚಿದ ಹಾಗೆ ಇತಿಹಾಸವನ್ನು ತಿರುಚುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | Corruption: ಬಿಜೆಪಿ ಸರ್ಕಾರದ 4 ಹಗರಣಗಳ ತನಿಖೆ ನಿಶ್ಚಿತ: ಚಾಮರಾಜನಗರ ಆಕ್ಸಿಜನ್‌ ದುರಂತವೂ ಮರುತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಕೆಂಪೇಗೌಡರು ಬಹಳ‌ ಕ್ರೀಯಾಶೀಲರು. ವಿಜಯನಗರದ ಕಾಲದಲ್ಲಿ‌ ಬೀದಿಯಲ್ಲಿ ಚಿನ್ನವನ್ನು ಅಳೆಯುತ್ತಿದ್ದರು. ಅದನ್ನು‌ ನೋಡಿದ ಕೆಂಪೇಗೌಡರಿಗೆ ಬೆಂಗಳೂರು ನಗರವನ್ನು ಕಟ್ಟುವುದಕ್ಕೆ ಮನಸ್ಸಾಗುತ್ತದೆ. 1531ರಲ್ಲಿ ಕೆಂಪೇಗೌಡರಿಗೆ ಪಟ್ಟಾಭಿಷೇಕ ಆಯಿತು. ನಂತರ ಬೆಂಗಳೂರನ್ನು ನಾಲ್ಕು ಹೆಬ್ಬಾಗಿಲುಗಳನ್ನಾಗಿ ವಿಭಾಗಿಸಿಕೊಂಡರು. ಹಲಸೂರು,‌ ಕೆಂಗೇರಿ, ಯಶವಂತಪುರ, ಯಲಹಂಕ ಎಂದು ಹೆಬ್ಬಾಗಿಲು ಮಾಡಿಕೊಂಡರು. ಕೆಂಪೇಗೌಡರಿಗೆ ಬಹಳ ದೂರ ದೃಷ್ಟಿ ಇತ್ತು. ಯಾರಿಗೆ ದೂರದೃಷ್ಟಿ ಇರಲ್ಲ, ಯಾರಿಗೆ ಕನಸ್ಸು ಇರುವುದಿಲ್ಲ, ಅವರಿಗೆ ರಾಜ್ಯವನ್ನು ಉತ್ತಮವಾಗಿ ಆಳ್ವಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ. ಹಾಸನದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಡಿನ ಎಲ್ಲಾ ಜನರಿಗೆ ಕೆಂಪೇಗೌಡ ಜಯಂತಿಯ ಶುಭಾಶಯಗಳನ್ನ ಕೋರುತ್ತೇನೆ ಎಂದು ಹೇಳಿದರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರದ ಮೂಲಕ ಸರ್ವ ಸಮುದಾಯ, ಸರ್ವ ಧರ್ಮದವರೂ ಆಚರಣೆ ಮಾಡುವಂತೆ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಬೆಂಗಳೂರಿಗೆ ಸೀಮಿತವಾಗಿದ್ದ ಕೆಂಪೇಗೌಡ ಜಯಂತಿಯನ್ನು ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಡಲಾಗುತ್ತಿದೆ. ಇದರ ಕೀರ್ತಿಯೂ ಸಿದ್ದರಾಮಯ್ಯ ಅವರಿಗೇ ಸಲ್ಲುತ್ತದೆ. ರಾಜ್ಯದೆಲ್ಲೆಡೆ ಅಲ್ಲ, ಜಗತ್ತಿನೆಲ್ಲೆಡೆ ಈ ಕಾರ್ಯಕ್ರಮ ಆಗುತ್ತಿದೆ. ಈ ದೇಶಕ್ಕೆ ಪ್ರಧಾನಿಯನ್ನು ಕೊಟ್ಟಿದ್ದು ಇದೇ ಜಿಲ್ಲೆಯ ಹರದನಹಳ್ಳಿ ಗ್ರಾಮ ಎಂದು ಹೇಳಿದರು

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕ್ರಮಕ್ಕೆ ಬಂದಿಲ್ಲ. ಕಾರ್ಯಕ್ರಮದ ಯಶಸ್ಸಿಗಾಗಿ ಪತ್ರ ಬರೆದಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇಸಾಯವನ್ನು ಅವಲಂಬನೆ ಮಾಡಿರುವ ಸಮುದಾಯ, ಒಕ್ಕಲುತನ ಮಾಡುತ್ತಿರುವ ಎಲ್ಲಾ ಸಮಯದಾಯಗಳು ಆರ್ಥಿಕವಾಗಿ ಸಬಲವಾಗುತ್ತಿಲ್ಲ. ಸಾಲದ ಹೊರೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಕೃಷಿಗೆ ಹಾಕುವ ಬಂಡವಾಳವೂ ವಾಪಸ್‌ ಬಾರದ ದಯನೀಯ ಸ್ಥಿತಿಗೆ ರೈತ ತಲುಪುತ್ತಿದ್ದಾನೆ. ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ರೈತ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಹಾಸನ ಜಿಲ್ಲೆಯ ಮಣ್ಣು ದೇಶಕ್ಕೆ ಪ್ರಧಾನಿಯನ್ನು ಕೊಟ್ಟಿದೆ. ಈಗಾಗಲೇ ಹಾಸನದಲ್ಲಿ ಏರ್‌ಪೋರ್ಟ್ ಕಾಮಗಾರಿ ನಡೆಯುತ್ತಿದೆ. ಆ ಏರ್‌ಪೋರ್ಟ್‌ಗೆ ಎಚ್.ಡಿ.ದೇವೇಗೌಡರ ಹೆಸರು ಇಡಬೇಕು ಎಂಬ ಬೇಡಿಕೆ ಇದೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Congress Guarantee: ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಇಲಾಖೆಗೆ ಬೂಸ್ಟ್‌; ಸರ್ಕಾರದ ಬೊಕ್ಕಸ ಖಾಲಿ!

ಕನ್ನಡ ಮತ್ತು ಸಂಸ್ಕೃತಿ‌ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಎಚ್‌.ಪಿ. ಸ್ವರೂಪ್, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಸುರೇಶ್, ಸಿಮೆಂಟ್ ಮಂಜು ಉಪಸ್ಥಿತರಿದ್ದರು.

Exit mobile version