ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೆಂಪೇಗೌಡ ಜಯಂತಿ (Kempegowda Jayanti) ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು. ಜಾಗದ ಸಮಸ್ಯೆ ಕಾರಣಕ್ಕೆ ಸ್ಟೇಡಿಯಂ ಅಥವಾ ಅರಮನೆ ಮೈದಾನದಲ್ಲಿ ಜಯಂತಿ ಮಾಡಲು ಸಲಹೆಗಳು ಬಂದಿದ್ದು, ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಕೆಂಪೇಗೌಡರ 515ನೇ ಜಯಂತಿ ಪ್ರಯುಕ್ತ ಸಭೆ ಮಾಡಲಾಗಿದೆ. ಸಂಘ, ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಿ ಚರ್ಚೆ ಮಾಡಿದ್ದೇವೆ. ಪಕ್ಷ, ಜಾತಿ, ಧರ್ಮ ದೂರವಿಟ್ಟು ಸಭೆ ಮಾಡಿದ್ದೇವೆ. ಜೂನ್ 27ರಂದು ಬೆಂಗಳೂರಿನಲ್ಲಿ ಜಯಂತಿ ಆಚರಣೆ ಆಗಲಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಮಾಡಿದರೆ ಜಾಗ ಚಿಕ್ಕದು, ಹಾಗಾಗಿ ಬೇಡ ಎಂದಿದ್ದಾರೆ. ಅರಮನೆ ಮೈದಾನ ಅಥವಾ ಸ್ಟೇಡಿಯಂನಲ್ಲಿ ಮಾಡಿ ಎಂದು ಸಲಹೆ ಬಂದಿದೆ. ಎಲ್ಲಿ ಮಾಡಬೇಕು ಎಂಬುವುದನ್ನು ತೀರ್ಮಾನ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ | Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ
ಮುಂದಿನ ವರ್ಷದೊಳಗೆ ಕೆಂಪೇಗೌಡ ಪ್ರಾಧಿಕಾರದ ಕಟ್ಟಡ
ಜಯಂತಿಗೆ ಆರು ಕಡೆಯಿಂದ ಜ್ಯೋತಿಗಳು ಬರುತ್ತವೆ. ಎಂದಿನಂತೆ ಕಾರ್ಯಕ್ರಮ ನಡೆಯುತ್ತವೆ. ಸಭೆಯಲ್ಲಿ ಸಾಕಷ್ಟು ಸಲಹೆಗಳು ಬಂದಿವೆ. ಮುನಿಯಪ್ಪ ಅವರ ಒತ್ತಡದ ಮೇಲೆ ಕೆಂಪೇಗೌಡ ಜನ್ಮಸ್ಥಳ ಅಭಿವೃದ್ಧಿ ಆಗಬೇಕು ಎಂಬ ಒತ್ತಡ ಇದೆ. ಅದರ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ. ಮುಂದಿನ ವರ್ಷದೊಳಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡಕ್ಕೆ ನಿರ್ಮಾಣ ಮಾಡಬೇಕು. ಸುಮನಹಳ್ಳಿಯಲ್ಲಿ 5 ಎಕರೆ ನೀಡಿದ್ದೇವೆ. ಸಾಧ್ಯವಾದರೆ ಕೆಂಪೇಗೌಡ ಜಯಂತಿ ದಿನ ಭೂಮಿ ಪೂಜೆ ಮಾಡುತ್ತೇವೆ ಎಂದು ತಿಳಿಸಿದರು.
ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ವಿಚಾರ ಸಂಕಿರಣ, ಚರ್ಚಾ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇವೆ. ವಿಧಾನಸಭಾ ಕ್ಷೇತ್ರವಾರು 1 ಲಕ್ಷ ಹಣ ನೀಡಲು ತೀರ್ಮಾನ ಮಾಡುತ್ತೇವೆ. ಇನ್ನು ಕೆಂಪೇಗೌಡರ ಪ್ರಶಸ್ತಿ ನೀಡಲು ಬಿ.ಎಲ್. ಶಂಕರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಆಗಿದೆ ಎಂದಯ ಹೇಳಿದರು.
ಅಕ್ಕಪಕ್ಕದ ರಾಜ್ಯಗಳಲ್ಲಿ ಒಂದೇ ದರ ಇರಲಿ ಎಂದು ತೆರಿಗೆ ಹೆಚ್ಚಳ!
ಬೆಲೆ ಏರಿಕೆ ಖಂಡಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡುವುದು ಅವರ ಡ್ಯೂಟಿ, ಅದನ್ನು ಬೇಡ ಎನ್ನುವುದಿಲ್ಲ. ಅವರು (ಬಿಜೆಪಿ) ಎಷ್ಟು ಬಾರಿ ಏರಿಸಿದ್ದರು. ಪಕ್ಕದ ರಾಜ್ಯದಲ್ಲಿ ಎಷ್ಟಿದೆ ನೋಡಲಿ, ನಾನು ಸಹ ಅಂಕಿ ಅಂಶಗಳ ಸಮೇತ ಟ್ವೀಟ್ ಮಾಡುತ್ತೇನೆ. ಗ್ಯಾರೆಂಟಿಗಳಿಗೂ, ಬೆಲೆ ಏರಿಕೆಗೂ ಸಂಬಂಧ ಇಲ್ಲ. ಬಾರ್ಡರ್‌ನಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಒಂದೇ ದರ ಇರಲಿ ಅಂತ ಈ ರೀತಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕೇಂದ್ರ ನಮ್ಮ ಹಣ ನಮಗೆ ಕೊಡಲಿ. ಯಾವುದೇ ವಸ್ತು ಆಗಲಿ ಶೇ. 18-20 ಜಿಎಸ್‌ಟಿ ಇದೆ, ಅದಮ್ಮು ಕಡಿಮೆ ಮಾಡಲಿ. 14 ವರ್ಷದಿಂದ ಕುಡಿಯುವ ನೀರಿನ ಬೆಲೆ ಏರಿಕೆ ಆಗಿಲ್ಲ, ಜಲಮಂಡಳಿಗೆ ವಿದ್ಯುತ್ ಬಿಲ್ ಕಟ್ಟೋಕೆ ಆಗುತ್ತಿಲ್ಲ. ಇದರ ಜತೆಗೆ ಈಗ ವಿದ್ಯುತ್ ದರವೂ ಏರಿಕೆ ಆಗಿದೆ. 400 ರೂ. ಇದ್ದ ಸಿಲಿಂಡರ್ ಬೆಲೆ ಈಗ ಎಷ್ಟಾಗಿದೆ? ಅದರ ಬಗ್ಗೆಯೂ ನೀವು ಮಾತನಾಡಬೇಕು. ಕೃಷಿ ಯಂತ್ರೋಪಕರಣಗಳಿಗೂ ಜಿಎಸ್‌ಟಿ ಹಾಕಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಮಹಾರಾಷ್ಟ್ರ, ಗುಜರಾತ್‌ನಲ್ಲಿ 104 ರೂ. ಇದೆ, ಜನರಿಗೆ ಹೊರೆ ಆಗುತ್ತಿಲ್ಲ, ಅವರಿಗೆ ಅರ್ಥ ಆಗುತ್ತೆ ಎಂದು ತಿಳಿಸಿದರು.
ದೇವನಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಮೋದಿಯಿಂದ ಉದ್ಘಾಟನೆ ಮಾಡಿಸಿ, ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಲಿದ್ದೇವೆ. ಈ ಬಗ್ಗೆ ಕೃಷ್ಣ ಬೈರೇಗೌಡ ಜತೆ ಮಾತನಾಡಲಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | Actor Darshan: ದರ್ಶನ್ ಮನೆ ಒತ್ತುವರಿ ತೆರವಿಗೆ ಸರ್ಕಾರ ಗ್ರೀನ್ ಸಿಗ್ನಲ್; ಬುಲ್ಡೋಜರ್ ರೆಡಿ ಮಾಡುತ್ತಿದೆ ಬಿಬಿಎಂಪಿ
ನೀಟ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಜೂನ್ 4ರಂದು ಫಲಿತಾಂಶ ಪ್ರಕಟವಾಯಿತು. ಇದರಲ್ಲಿ ನಡೆದಿರುವ ಅಕ್ರಮ ಮುಚ್ಚಿ ಹಾಕೋಕೆ ಪ್ರಯತ್ನ ಮಾಡಿದರು. ಈಗ ಕೇಂದ್ರ ಸಚಿವರೇ ಅಕ್ರಮ ನಡೆದಿದೆ ಅಂತ ಒಪ್ಪಿಕೊಂಡಿದ್ದಾರೆ. ರದ್ದು ಮಾಡಬೇಕು, ಮರು ಪರೀಕ್ಷೆ ನಡೆಸಬೇಕು, ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು. ತಮಿಳುನಾಡಿನ ಪ್ರಕಾರವೇ ನಾವೂ ಯೋಚನೆ ಮಾಡಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಚಿಂತನೆ ಮಾಡಬೇಕಿದೆ, ಮಾಡುತ್ತೇವೆ ಎಂದರು.