ಬೆಂಗಳೂರು: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಭವ್ಯ ಪ್ರತಿಮೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಪ್ರಗತಿಯ ಪ್ರತಿಮೆ(Statue of Prosperity) ಎಂಬ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆ, ನಗರ ಸ್ಥಾಪಕರ ವಿಭಾಗದಲ್ಲಿ ಪ್ರಥಮ ಹಾಗೂ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ.
ರಾಜ್ಯ ಸರ್ಕಾರದಿಂದ ನಿರ್ಮಿಸಿರುವ ಪ್ರಗತಿಯ ಪ್ರತಿಮೆ ಹಾಗೂ ಏರ್‌ಪೋರ್ಟ್‌ನ ಟರ್ಮಿನಲ್ ೨ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಉದ್ಘಾಟಿಸಲಿದ್ದಾರೆ. ಈ ಪ್ರತಿಮೆ 108 ಅಡಿ ಎತ್ತರವಿದ್ದು, 4 ಟನ್ ತೂಕದ ಖಡ್ಗವನ್ನು ಕೆಂಪೇಗೌಡರ ಕೈಗೆ ಅಳವಡಿಸಲಾಗಿದೆ. ಪ್ರತಿಮೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Modi Visit | ಸಿದ್ಧವಾಯ್ತು ಕೆಂಪೇಗೌಡ ಪೇಟ; ಮೋದಿಗೆ ತೊಡಿಸಲಿರುವ ಇದರ ವಿಶೇಷತೆ ಏನಿದೆ?
23 ಎಕರೆಯಲ್ಲಿ ಬೃಹತ್ ಪಾರ್ಕ್
2008ರಲ್ಲಿ ದೇವನಹಳ್ಳಿ ಬಳಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವಾದ ನಂತರ ಏರ್‌ಪೋರ್ಟ್‌ಗೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲಾಗಿತ್ತು. ಆದರೆ ದೇಶ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೆಂಪೇಗೌಡರ ಬಗ್ಗೆ ಪರಿಚಯಿಸಲು ಸರ್ಕಾರ ಬೃಹತ್ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 65 ಕೋಟಿ ರೂ. ವೆಚ್ಚದಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕಂಚಿನಿಂದ ನಿರ್ಮಾಣವಾಗಿರುವ ಕೆಂಪೇಗೌಡರ ಪ್ರತಿಮೆ ಮುಂಭಾಗ 23 ಎಕರೆಯಲ್ಲಿ ಬೃಹತ್ ಪಾರ್ಕ್ ಸೇರಿದಂತೆ ಕೆಂಪೇಗೌಡರ ಜೀವನಗಾಥೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗದ ಪಾರ್ಕ್‌ಗೆ ರಾಜ್ಯ ವಿವಿಧ ಮೂಲೆಗಳಿಂದ ಮಣ್ಣು ಮತ್ತು ನೀರನ್ನು ತರಿಸಿ ಹಾಕಲಾಗಿದೆ.
ಇದನ್ನೂ ಓದಿ | Bengaluru Airport | ಟರ್ಮಿನಲ್ 2 ಉದ್ಘಾಟನೆಗೆ ಸಜ್ಜು, ಕೆಐಎನಲ್ಲಿ ವರ್ಷಕ್ಕೆ 6 ಕೋಟಿ ಪ್ರಯಾಣಿಕರ ನಿರ್ವಹಣೆ!