ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು (Kempegowda Statue) ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸುವಲ್ಲಿ ವಿಳಂಬ ಮಾಡಿರುವುದು ಮತ್ತು ಆಹ್ವಾನ ಪತ್ರವನ್ನು ಸಿದ್ಧಪಡಿಸದೇ ಇರುವುದು ವಿವಾದಕ್ಕೆ ಕಾರಣವಾಗಿದೆ.
ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ 2.75 ಕೋಟಿ ವೆಚ್ಚ ಮಾಡಿರುವ ಸರ್ಕಾರ ಅಧಿಕೃತ ಆಹ್ವಾನ ಪತ್ರಿಕೆಯನ್ನು ಹೊರಡಿಸಿರಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣನೆ ಮಾಡಲಾಗಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅಹ್ವಾನ ಪತ್ರ ತಲುಪಿಸಲಾಗಿಲ್ಲ. ಪ್ರೋಟೋಕಾಲ್ ಅನುಸರಿಸಿಲ್ಲ. ವೇದಿಕೆ ಮೇಲೆ ಕೂರುವ ಅತಿಥಿಗಳ ಪಟ್ಟಿ ಸಹ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಲಾಗಿದೆ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದರೂ ಸರ್ಕಾರ ಶಿಷ್ಟಾಚಾರ ಪಾಲಿಸದೇ ಇರುವುದಕ್ಕೆ ವಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಈ ಆರೋಪವನ್ನು ಸಚಿವರಾದ ಆರ್. ಅಶೋಕ್ ಹಾಗೂ ಅಶ್ವಥ್ ನಾರಯಣ್ ತಳ್ಳಿಹಾಕಿದ್ದು, ವಿಪಕ್ಷಗಳ ನಾಯಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದಾಗಿ ಕರೆ ಮಾಡಿ ಆಹ್ವಾನಿಸಿದ್ದಾರೆ ಎಂದಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಗೆ ಅಹ್ವಾನ ಪತ್ರ ತಲುಪಿಸಿದ್ದೇವೆಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
ಪ್ರತಿಮೆ ಉದ್ಘಾಟನೆಗೆ ಎಲ್ಲ ಹಿರಿಯರಿಗೂ ಆಹ್ವಾನ ನೀಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲರಿಗೂ ಸಿಎಂ ಕರೆ ಮಾಡಿ ಆಹ್ವಾನಿಸಿದ್ದಾರೆ. ಕಾಂಗ್ರೆಸ್ ನಾಯಕರು ಈ ರೀತಿಯ ಸುಳ್ಳು ಆರೋಪ ಮಾಡುವುದಕ್ಕಿಂತ, ಇಷ್ಟು ವರ್ಷ ಗಳಲ್ಲಿ ನಮ್ಮಿಂದ ಈ ರೀತಿಯ ಕೆಲಸ ಮಾಡಲು ಏಕೆ ಆಗಲಿಲ್ಲ ಎಂದು ಪ್ರಶ್ನೆ ಕೇಳಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಶುಕ್ರವಾರ ನಡೆದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ವಿಪಕ್ಷಗಳ ನಾಯಕರು ಭಾಗವಹಿಸಿರಲಿಲ್ಲ. ಬಿಜೆಪಿ ಸರ್ಕಾರದ ಸಚಿವರು, ಕೇಂದ್ರ ಸಚಿವರು ಮಾತ್ರ ವೇದಿಕೆಯಲ್ಲಿದ್ದರು.
ಇದನ್ನೂ ಓದಿ | Kempegowda Statue | ಬೆಂಗಳೂರು ಕಟ್ಟಿದ ಪ್ರಭು ಕೆಂಪೇಗೌಡರು ಸಮಾಜ ಸುಧಾರಕರೂ ಹೌದು